ADVERTISEMENT

ಎಐಎಂಐಎಂ ಜತೆ ಬಿಜೆಪಿ ಒಪ್ಪಂದ ಮಾಡಿಕೊಂಡಿಲ್ಲ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 9:44 IST
Last Updated 31 ಜನವರಿ 2018, 9:44 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು:‘ಆಲ್‌ ಇಂಡಿಯಾ ಮಜ್ಲಿಸ್‌ ಇತ್ತೆಹಾದುಲ್‌ ಮಸ್ಲಿಮೀನ್‌ (ಎಐಎಂಐಎಂ) ಪಕ್ಷದ ಅಸಾದುದ್ದೀನ್‌ ಒವೈಸಿ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂಬುದು ಸತ್ಯಕ್ಕೆ ದೂರವಾದುದು. ಯಾವ ಪಕ್ಷದೊಂದಿಗೂ ಬಿಜೆಪಿ ಒಪ್ಪಂದ ಮಾಡಿಕೊಂಡಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು.

‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. 2004ರ ಚುನಾವಣೆಯಲ್ಲಿ ಎಐಎಂಐಎಂ ಮತ್ತು ವಿವಿಧ ನಕ್ಸಲ್‌ ಗುಂಪುಗಳ ಜತೆ ಮೈತ್ರಿ ಮಾಡಿಕೊಂಡಿತ್ತು. ಚುನಾವಣೆಯಲ್ಲಿ ಗೆದ್ದ ನಂತರ ನಕ್ಸಲ್‌ ಸಮ್ಮೇಳನ ನಡೆಯಲಿಕ್ಕೆ ಕಾಂಗ್ರೆಸ್‌ ಪಕ್ಷ ಎಲ್ಲ ರೀತಿಯ ಬೆಂಬಲ ಕೊಟ್ಟಿತ್ತು. ಈ ಹೊಂದಾಣಿಕೆ ಕಾಂಗ್ರೆಸ್‌ ರಾಜಕೀಯ ಚರಿತ್ರೆಯೇ ಹೊರತು ಬಿಜೆಪಿಯದಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂಷಿಸಿದರು.

‘ಗಲಭೆಗಳಿಗೆ ಸಂಬಂಧಿಸಿದಂತೆ ಒಂದು ಕೋಮಿನ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು ಚರ್ಚೆಗೆ ಕಾರಣವಾಗಿ ಜನರಲ್ಲಿ ಸರ್ಕಾರದ ವಿರೋಧಿ ಭಾವನೆ ಬಲವಾಗುತ್ತಿರುವುದನ್ನು ವಿಷಯಾಂತರಿಸಲು ಮತ್ತು ಅಲ್ಪಸಂಖ್ಯಾತರ ವೋಟುಗಳ ತುಷ್ಟೀಕರಣಕ್ಕೆ ಕಾಂಗ್ರೆಸ್‌ ಪ್ರಾಯೋಜಿತ ಈ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಕಾಂಗ್ರೆಸ್‌ ವಿಷಯಾಂತರ ಮತ್ತು ವಿಭಜನೆ ರಾಜಕಾರಣಕ್ಕೆ ಪ್ರಖ್ಯಾತಿ ಪಡೆದಿದೆ’ ಎಂದು ಮೂದಲಿಸಿದರು.

ADVERTISEMENT

‘ಬಿಜೆಪಿಯೇ ನಿರಾಕರಿಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಈ ಸುದ್ದಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಸಂಗತಿ. ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಅವರು ಬಿಜೆಪಿ ವಕ್ತಾರರಾಗಿದ್ದು ಯಾವಾಗ’ ಎಂದು ಪ್ರಶ್ನಿಸಿದರು.

‘ಗೌರಿಲಂಕೇಶ್‌, ಎಂ.ಎಂ.ಕಲಬುರ್ಗಿ ಹಂತಕರನ್ನು ಬಂಧಿಸದಿರುವ ಬಗ್ಗೆ ಗೌರಿಲಂಕೇಶ್‌ ಜನ್ಮದಿನದ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿಲ್ಲ. ಬದಲಿಗೆ ಪ್ರಧಾನಿ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಟೀಕಿಸಲು ಸಭೆಯನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ಮಟ್ಟು ಇಡೀ ಕಾರ್ಯಕ್ರಮ ಆಯೋಜನೆ ನೇತೃತ್ವ ವಹಿಸಿದ್ದರು. ಇದು ಕಾಂಗ್ರೆಸ್‌ ಪ್ರಾಯೋಜಿತ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿದೆ’ ಎಂದರು.

‘ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ್ದ ತುಕಡೆ ಗ್ಯಾಂಗಿನ ಜತೆಗೆ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ ಸಂಚು ಮಾಡುತ್ತಿದೆ. ದೇಶವನ್ನು ತುಂಡು ಮಾಡುತ್ತೇವೆ ಎಂಬ ಗ್ಯಾಂಗಿನ ಜತೆ ಕಾಂಗ್ರೆಸ್‌ ಕೈ ಜೋಡಿಸುವ ಮೂಲಕ ವಿಭಜನಕಾರಿ ರಾಜಕೀಯ ಮುಂದುವರಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದರು.

‘ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಹತ್ಯೆಯಾದಾಗ ಹಂತಕರ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವ ಮತ್ತು ಮುಖ್ಯಮಂತ್ರಿ ಹೇಳಿದ್ದರು. ಆದರೆ, ಈವರೆಗೂ ಹಂತಕರನ್ನು ಬಂಧಿಸಿಲ್ಲ. ದುರುದ್ದೇಶಪೂರಕವಾಗಿ ಅಪರಾಧಿಗಳನ್ನು ಪತ್ತೆ ಹಚ್ಚದೆ ಜನಮಾನಸದಲ್ಲಿ ತುಕಡೆ ಗ್ಯಾಂಗುಗಳ ಮೂಲಕ ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಅಪಪ್ರಚಾರ ಮಾಡಿ ಮತಗಳನ್ನು ಕ್ರೋಢೀಕರಿಸುವ ಹುನ್ನಾರ ಕಾಂಗ್ರೆಸ್‌ ಮಾಡಿದೆ ಎಂಬ ಸಂಶಯ ಇದೆ’ ಎಂದರು. ಬಿಜೆಪಿ ಮುಖಂಡರಾದ ವರಸಿದ್ಧಿ ವೇಣುಗೋಪಾಲ್‌, ಅಪ್ಸರ್‌ ಅಹಮದ್‌, ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.