ADVERTISEMENT

‘600 ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:10 IST
Last Updated 22 ಅಕ್ಟೋಬರ್ 2017, 5:10 IST
ಶಾಸಕ ಬಿ.ಬಿ.ನಿಂಗಯ್ಯ ಅವರು ಕೂದುವಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಈಚೆಗೆ ಪರಿಶೀಲಿಸಿದರು.
ಶಾಸಕ ಬಿ.ಬಿ.ನಿಂಗಯ್ಯ ಅವರು ಕೂದುವಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಈಚೆಗೆ ಪರಿಶೀಲಿಸಿದರು.   

ಚಿಕ್ಕಮಗಳೂರು: ಕ್ಷೇತ್ರದಲ್ಲಿನ 600 ಗ್ರಾಮಗಳಿಗೆ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಹಲವು ಕಾಮಗಾರಿ ಮಾಡಿಸಲಾಗಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.

‘ತಾಲ್ಲೂಕಿನ ಕೂದುವಳ್ಳಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕೈಗೆತ್ತಿಕೊಂಡಿರುವ ಸಿಸಿ ರಸ್ತೆ ಕಾಮಗಾರಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಮಾತನಾಡಿದರು. ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 1,073 ಹಳ್ಳಿಗಳಿವೆ. ಎಲ್ಲ ಗ್ರಾಮಗಳಿಗೂ ಒಮ್ಮೆಲೆ ಅಭಿವೃದ್ಧಿ ಕೆಲಸ ಮಾಡಲಾಗದು. ಆದ್ಯತೆ ಮೇರೆಗೆ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ಕ್ಷೇತ್ರದ 20 ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ ಅಭಿವೃದ್ಧಿಪಡಿಸಲಾಗಿದೆ’ ಎಂದು ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಮಾವಿನಗುಣಿ ಗ್ರಾಮವನ್ನು ದತ್ತು ಪಡೆದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೊಡಾಳು- ಹಲಸುಮನೆ ರಸ್ತೆ, ಮಡೇನೇರಲು 5 ಕಿಮೀ ರಸ್ತೆ, ಕೂದುವಳ್ಳಿ ಗ್ರಾಮಕ್ಕೆ ಸಿಸಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ADVERTISEMENT

ಗ್ರಾಮದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನಕ್ಕೆ ಟೈಲ್ಸ್ ಹಾಕಿಸುವುದಾಗಿ ಹಾಗೂ ಅಡುಗೆ ಕೊಠಡಿ ನಿರ್ಮಿಸಲು ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ತಾಲೂಕು ಪಂಚಾಯಿತಿ ಸದಸ್ಯ ಡಿ.ಜೆ.ಸುರೇಶ್ ಮಾತನಾಡಿ, ‘ಈ ಗ್ರಾಮಕ್ಕೆ ಕುಡಿಯುವ ನೀರಿನ ಬಾವಿ ತೊಡಿಸಬೇಕು ಎಂಬ ಒತ್ತಡ ಇದೆ. ಈ ಬಾರಿ ಅನುದಾನ ಕಾಯ್ದಿರಿಸಿ ಈ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದರು.

ಗುತ್ತಿಗೆದಾರ ಬಾಳೆಗದ್ದೆ ಮೋಹನಗೌಡ, ಮುಖಂಡ ರವಿ, ಕೆ.ಜೆ.ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ರಸಾದ್, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಕೆ.ಎಚ್.ಲೋಕೇಶ್, ಗ್ರಾಮದ ಮುಖಂಡ ಮಂಜುನಾಥ್‌ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.