ಮೂಡಿಗೆರೆ: ತಾಲ್ಲೂಕಿನಲ್ಲಿ ಧರ್ಮಸ್ಥಳಕ್ಕೆ ತೆರಳಿದ ಪಾದಯಾತ್ರಿಗಳು ಬಳಸಿ ಎಸೆದ ನೀರಿನ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಒಂದು ಟನ್‌ಗೂ ಅಧಿಕ ಪ್ಲಾಸ್ಟಿಕ್ ಕಸವನ್ನು ಬೇಲೂರು ಮೂಲದ ಚಿಂದಿ ಆಯುವವರು ಹೆಕ್ಕಿ ಆದಾಯ ಗಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳ ಸಾವಿರಾರು ಭಕ್ತರು ಶಿವರಾತ್ರಿ ಆಚರಣೆಗಾಗಿ ತಾಲ್ಲೂಕಿನ ಮೂಲಕ ಹಾದು ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳಿದ್ದರು. ಪಾದಯಾತ್ರಿಗಳು ತಾವು ಬಳಸಿದ ಪ್ಲಾಸ್ಟಿಕ್ ಕಸವನ್ನು ದಾರಿಯುದ್ದಕ್ಕೂ ರಸ್ತೆ ಬದಿಯಲ್ಲಿ ಎಸೆದಿದ್ದರು. ಇದನ್ನು ಗಮನಿಸಿದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಸನ್ಯಾಸಿಹಳ್ಳಿ ಸಮೀಪದ ಚಿಂದಿ ಆಯುವ ಕಾರ್ಯದಲ್ಲಿ ತೊಡಗಿರುವ ಕುಟುಂಬದವರು ಆಟೊ, ಸ್ಕೂಟರ್‌ಗಳಲ್ಲಿ ಬಂದು ಕಸವನ್ನು ಮಾರಿ ಆದಾಯ ಗಳಿಸಿದ್ದಾರೆ.
4 ದಿನಗಳಿಂದ ರಸ್ತೆ ಬದಿ ಪ್ಲಾಸ್ಟಿಕ್ ಬಾಟಲಿ, ಕಸ ಹೆಕ್ಕಿರುವ 3 ಕುಟುಂಬಗಳು ಪ್ರತಿದಿನ 300ರಿಂದ 350 ಕೆ.ಜಿ. ಕಸ ಸಂಗ್ರಹಿಸಿ ಗುಜರಿ ಅಂಗಡಿಗೆ ಮಾರಾಟ ಮಾಡಿ ಆದಾಯ ಗಳಿಸಿದ್ದಾರೆ. ತಾಲ್ಲೂಕಿನ ಕಸ್ಕೇಬೈಲ್‌ನಿಂದ ಹೊರಟ್ಟಿ ಗ್ರಾಮದವರೆಗೆ ಕಸ ಹೆಕ್ಕಿರುವ ಅವರು, ಮುಂದಿನ 3 ದಿನಗಳಲ್ಲಿ ಚಾರ್ಮಾಡಿ ಘಾಟಿ ತಲುಪುವ ಗುರಿ ಹಾಕಿಕೊಂಡಿದ್ದಾರೆ.
‘ವರ್ಷದಲ್ಲಿ ಎರಡು ಮೂರು ಬಾರಿ ರಸ್ತೆ ಬದಿ ಬಾಟಲಿಗಳನ್ನು ಹೆಕ್ಕುತ್ತೇವೆ. ಪಾದಯಾತ್ರಿಗಳು ತುಂಬಾ ಬಾಟಲಿಗಳನ್ನು ಎಸೆದಿದ್ದು, ಈ ಬಾರಿ ಹೆಚ್ಚು ಸಿಕ್ಕಿವೆ. ಹಾಸನದ ಹಗರೆಯಿಂದ ಚಾರ್ಮಾಡಿ ಘಾಟಿವರೆಗೂ ಹಾಯುವ ಕೆಲಸ ಮಾಡುತ್ತಿದ್ದೇವೆ. ಇದು ಮುಗಿದ ಬಳಿಕ ಹಾಸನದತ್ತ ತೆರಳುತ್ತೇವೆ. ಮೂರು ಮನೆಗಳಿಂದ ಆರು ಮಂದಿ ಈ ಕೆಲಸ ಮಾಡುತ್ತಿದ್ದೇವೆ. ಉಚಿತವಾಗಿ ನೀರು ಹಂಚಿದ ಪ್ರದೇಶಗಳಲ್ಲಿ ಬಾಟಲಿಗಳ ರಾಶಿ ನಿರ್ಮಾಣವಾಗಿದ್ದು, ಒಂದೇ ಸ್ಥಳದಲ್ಲಿ 10ರಿಂದ 12 ಕೆ.ಜಿ ಬಾಟಲಿ ಸಿಕ್ಕಿವೆ’ ಎಂದು ಪ್ಲಾಸ್ಟಿಕ್ ಸಂಗ್ರಹದಲ್ಲಿ ತೊಡಗಿರುವ ಬೇಲೂರಿನ ರವಿ ತಿಳಿಸಿದರು.
‘ಸ್ಥಳೀಯವಾಗಿ ಪ್ಲಾಸ್ಟಿಕ್ ಗುಜರಿಗೆ ₹25ರಿಂದ ₹27 ಕೊಡುತ್ತಾರೆ. ಬೇಲೂರಿನಲ್ಲಿ ಸ್ವಲ್ಪ ಜಾಸ್ತಿ ಮೊತ್ತ ಕೊಡುವುದರಿಂದ ಅಲ್ಲಿಯೇ ಮಾರಾಟ ಮಾಡುತ್ತೇವೆ. ಹಿಂದಿನಿಂದಲೂ ಗುಜರಿ ಹೆಕ್ಕಿ ಜೀವನ ಸಾಗಿಸುತ್ತೇವೆ. ಮಳೆಗಾಲದಲ್ಲಿ ಕೂದಲು ಖರೀದಿ, ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮಾಡುತ್ತೇವೆ’ ಎಂದು ಅವರು ತಿಳಿಸಿದರು.
ಪ್ರಕೃತಿಯ ಮಡಿಲು ಸೇರಿ ಮಲಿನಗೊಳಿಸಬೇಕಿದ್ದ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸುತ್ತಿರುವುದು ಮಹತ್ವದ ಕಾರ್ಯ. ಆದಾಯದ ಚಿಂತನೆಯಲ್ಲಿ ಅರಿವಿಲ್ಲದೆ ಪರಿಸರದ ಕಾಳಜಿ ಕಾರ್ಯ ಮಾಡುತ್ತಿರುವುದಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.