ADVERTISEMENT

ಕಡೂರು: ಕುಡುಕರ ಅಡ್ಡೆಯಾಗಿರುವ ಸರ್ವೀಸ್ ರಸ್ತೆ

ರಸ್ತೆಯಲ್ಲಿ ಮದ್ಯದ ಬಾಟಲಿ, ಗಾಜಿನ ಚೂರು

ಬಾಲು ಮಚ್ಚೇರಿ
Published 6 ಡಿಸೆಂಬರ್ 2023, 6:45 IST
Last Updated 6 ಡಿಸೆಂಬರ್ 2023, 6:45 IST
ಸರ್ವೀಸ್‌ ರಸ್ತೆಯಲ್ಲಿ ಬಾಟಲಿಗಳು
ಸರ್ವೀಸ್‌ ರಸ್ತೆಯಲ್ಲಿ ಬಾಟಲಿಗಳು   

ಕಡೂರು: ರಾಷ್ಟ್ರೀಯ ಹೆದ್ದಾರಿ 206 ಬೈಪಾಸ್ ರಸ್ತೆಯ ಸರ್ವೀಸ್ ರಸ್ತೆಗಳು ಕುಡುಕರ ಅಡ್ಡೆಗಳಾಗಿ ಪರಿವರ್ತನೆಗೊಂಡಿವೆ. ಬಿ.ಎಚ್.ರಸ್ತೆಯಲ್ಲಿ ತಂಗಲಿ ಕ್ರಾಸ್ ಬಳಿ ಆರಂಭಗೊಳ್ಳುವ ಬೈ ಪಾಸ್ ಬೀರೂರು ತನಕವೂ ಮುಂದುವರಿದಿದೆ. ಇಲ್ಲಿ ಎರಡೂ ಬದಿ ಸರ್ವೀಸ್ ರಸ್ತೆಗಳಿವೆ. ಈ ರಸ್ತೆಗಳಲ್ಲಿ ಸಂಜೆ ನಂತರ ವಾಹನ ಸಂಚಾರ ತುಂಬಾ ಕಡಿಮೆ. ಈ ಸ್ಥಳವೇ ಕುಡುಕರ ತಾಣವಾಗಿದೆ. 

ಮಲ್ಲೇಶ್ವರದ ಆವತಿ ನದಿ ಪಕ್ಕದಿಂದ ಪ್ರಜ್ಞಾ ಸ್ಕೂಲ್‌ವರೆಗಿನ ರಸ್ತೆಯಲ್ಲಿ ಸಂಜೆಯಾಗುತ್ತಿದ್ದಂತೆ ಮದ್ಯವ್ಯಸನಿಗಳು ಗುಂಪು ಗುಂಪಾಗಿ ಕುಳಿತು ಮದ್ಯಪಾನ ಮಾಡುತ್ತಾರೆ. ಮದ್ಯಪಾನದ ನಂತರ ಬಾಟಲಿಗಳನ್ನು ರಸ್ತೆಯಲ್ಲೇ ಬಿಟ್ಟು ಹೋಗುತ್ತಾರೆ. ಕೆಲವರು ಬಾಟಲಿಯನ್ನು ರಸ್ತೆ ಮಧ್ಯೆ ಒಡೆದು ಹಾಕುತ್ತಿದ್ದಾರೆ. ವೇದಾ ಪಂಪ್ ಹೌಸ್ ಬಳಿಯ ಮೇಲ್ಸೇತುವೆ ಬಳಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ.  

ಬೆಳಿಗ್ಗೆ ಈ ದಾರಿಯಲ್ಲಿ ವಾಯುವಿಹಾರಕ್ಕೆ ಬರುವವರಿಗೆ ರಸ್ತೆಯಲ್ಲಿ ಬಿದ್ದಿರುವ ಗಾಜಿನ ತುಂಡುಗಳು, ಬಾಟಲಿಗಳು ತೊಂದರೆಯಾಗಿವೆ. ಮುಸ್ಸಂಜೆ ವೇಳೆಯಲ್ಲೇ  ಕುಡುಕರು ಈ ರಸ್ತೆಯಲ್ಲಿ ಸೇರುವುದರಿಂದ ಮಹಿಳೆಯರು, ವಾಹನ ಚಾಲಕರು ಭಯ ಪಡುವಂತಾಗಿದೆ. ಮಲ್ಲೇಶ್ವರದ ಪಾರ್ಕ್ ಬಳಿ, ಬೆಂಕಿ ಕಲ್ಯಾಣ ಮಂಟಪದ ಮುಂದಿನ ಜಾಗ, ಬಿಳವಾಲಕ್ಕೆ ಹೋಗುವ ರಸ್ತೆ ಬದಿಗಳಲ್ಲೂ ಕುಡುಕರ ಹಾವಳಿ ಹೆಚ್ಚಿದೆ. ಹೆದ್ದಾರಿ ಗಸ್ತು ತಿರುಗುವ ಪೊಲೀಸರ ಭಯವೂ ಕುಡುಕರಿಗಿಲ್ಲ. ಬೈ ಪಾಸ್ ಮುಖ್ಯ ರಸ್ತೆಯಲ್ಲಿ ಕೆಲವು ಯುವಕರು ಕರ್ಕಶ ಶಬ್ಧದೊಡನೆ ಸ್ಕೂಟರ್‌ ವೀಲಿಂಗ್ ಮಾಡುತ್ತಿರುತ್ತಾರೆ. ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದು.

ADVERTISEMENT
ಬೈಪಾಸ್ ನಲ್ಲಿ ವೀಲ್ಹಿಂಗ್ ನಡೆಸುತ್ತಿರುವ ಯುವಕರು

ರಾತ್ರಿ ಮಲ್ಲೇಶ್ವರದ ಸರ್ವೀಸ್ ರಸ್ತೆಯಲ್ಲಿ ಕುಳಿತು ಕುಡಿಯುವ ಕುಡುಕರು ಮದ್ಯದ ಬಾಟಲಿಗಳನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಸಾರ್ವಜನಿಕ ರಸ್ತೆಯಲ್ಲಿ ಇಂಥ ವರ್ತನೆಗೆ ಕಡಿವಾಣ ಹಾಕಬೇಕು

-ಹನುಮಂತಪ್ಪ ಕಡೂರು

ಸರ್ವೀಸ್‌ ರಸ್ತೆಯಲ್ಲಿ ಮದ್ಯಪಾನ ಮತ್ತು ವೀಲಿಂಗ್‌ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಲ್ಲಿ ಪೊಲೀಸರ ಗಸ್ತು ನಿಯೋಜಿಸಿ ಕ್ರಮ ವಹಿಸಲಾಗುವುದು

-ಧನಂಜಯ ಪಿಎಸ್‌ಐ ಕಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.