ADVERTISEMENT

ವಿಠಲ್ ಹೆಗ್ಡೆ ಕೃತಿಗೆ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ

ಜಿಲ್ಲಾ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಸಾಹಿತಿ ರೋಹಿತ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 10:06 IST
Last Updated 11 ಜನವರಿ 2020, 10:06 IST
ಶೃಂಗೇರಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿಯಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಮಾತನಾಡಿದರು.
ಶೃಂಗೇರಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿಯಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಮಾತನಾಡಿದರು.   

ಶೃಂಗೇರಿ(ಕೊಪ್ಪ): ‘ಸಾಹಿತ್ಯ ಕ್ಷೇತ್ರದಲ್ಲಿ ಕಲ್ಕುಳಿ ವಿಠಲ್ ಹೆಗ್ಡೆ ಅವರ ಕೃತಿ ‘ಮಂಗನ ಬ್ಯಾಟೆ’ ವಿಶಿಷ್ಟ ಸ್ಥಾನ ಪಡೆದಿದೆ’ ಎಂದು ಸಾಹಿತಿ ಕೆ. ರೋಹಿತ್ ಹೇಳಿದರು.

ಇಲ್ಲಿನ ಬಿಜಿಎಸ್ ಸಮುದಾಯ ಭವನದ ಆವರಣದ ಪೂರ್ಣಚಂದ್ರ ತೇಜಸ್ವಿ ವೇದಿಕೆಯಲ್ಲಿ ನಡೆದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ‘ನಮ್ಮ ಊರು-ನಮ್ಮ ಲೇಖಕರು’ ಕುರಿತ ಪ್ರಥಮ ವಿಚಾರಗೋಷ್ಠಿಯಲ್ಲಿ ‘ಕಲ್ಕುಳಿ ವಿಠಲ್ ಹೆಗ್ಗಡೆ ಸಾಹಿತ್ಯ’ ಕುರಿತು ಅವರು ಮಾತನಾಡಿದರು.

‘ಹೆಗ್ಡೆ ಅವರ ಕೃತಿಯು ವಿಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡಿದೆ. ಬಯಲು ಸೀಮೆ, ಮಲೆನಾಡಿನ ಪರಿಸರದ ವೈವಿಧ್ಯತೆಯನ್ನು ತುಲನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಆಹಾರ ಸರಪಣಿಯನ್ನು ಅವಲಂಬಿಸಿದ ಜೀವಿಯ ಪರಿಸರದ ಕಾಳಜಿ ಬಿಂಬಿತಗೊಂಡಿದೆ. ಕಾದಂಬರಿಯಾಗಿ, ಕಥೆಯಾಗಿ, ಪರಿಸರ ಆಸಕ್ತಿ ಕುರಿತ ಪ್ರಬಂಧವಾಗಿ ಕೃತಿ ವಿಭಿನ್ನ ನೆಲೆಯಲ್ಲಿ ಕಾಣಿಸಿಕೊಳ್ಳುತ್ತದೆ’ ಎಂದು ತಿಳಿಸಿದರು.

ADVERTISEMENT

ಸಾಹಿತಿ ರವೀಶ್ ಕ್ಯಾತನಬೀಡು ‘ಅಜ್ಜಂಪುರ ಜಿ ಸೂರಿ ಸಾಹಿತ್ಯ’ ಕುರಿತು ಮಾತನಾಡಿ, ‘ನೂರಾರು ಪುಸ್ತಕಗಳನ್ನು ಬರೆದಿರುವ ಜಿ.ಸೂರಿ ಅವರು ಜಿಲ್ಲೆಗೆ ಹೆಮ್ಮೆ ಎನಿಸಿದ್ದಾರೆ. ಅವರ ಕೃತಿಗಳಲ್ಲಿ ಸಮಾಜದ ಎಲ್ಲಾ ಸ್ಥರದ ಜನರ ಬದುಕನ್ನು ಅನಾವರಣಗೊಳಿಸುತ್ತದೆ. ಸೂರಿ ಅವರು ಕೃತಿ ಅನುವಾದಕರು, ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿದ್ದರು’ ಎಂದರು.

ಗೋಷ್ಠಿ 2ರಲ್ಲಿ ‘ಮಲೆನಾಡು ಕೃಷಿಗಿರುವ ಸವಾಲುಗಳು ಮತ್ತು ಆತಂಕ’ ವಿಷಯದ ಕುರಿತು ಸಾಹಿತಿ ಹಳೇಕೋಟೆ ರಮೇಶ್ ಮಾತನಾಡಿ, ‘ಪ್ರಸ್ತುತ ಹವಾಮಾನ ವೈಪರೀತ್ಯ, ಬೆಲೆ ಏರುಪೇರು, ಕಾಡು ಪ್ರಾಣಿಗಳ ಹಾವಳಿ, ವಿದ್ಯುತ್ ಸಮಸ್ಯೆ, ಕೃಷಿ ಸಲಕರಣೆಗಳ ಬೆಲೆ ಹೆಚ್ಚಳದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಾಳುಮೆಣಸಿಗೆ ಸೊರೆ ರೋಗ, ಅಡಿಕೆಗೆ ಹಳದಿ ಎಲೆ ರೋಗ, ಏಲಕ್ಕಿಗೆ ಕಟ್ಟೆರೋಗ ಸಮಸ್ಯೆಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ’ ಎಂದು ಹೇಳಿದರು.

‘ಕೃಷಿ ಮತ್ತು ಪರಿಸರ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ, ‘ಸರ್ಕಾರದ ಭಿಕ್ಷೆಗೆ ಬಗ್ಗದೇ ಕನ್ನಡದ ರಥ ಎಳೆದಿದ್ದೇವೆ. ಭ್ರಷ್ಟಾಚಾರ ನಿರ್ಮೂಲನೆ ಆಗಬೇಕಾದಲ್ಲಿ ಜನಪರ ಕಾನೂನು ರೂಪಿಸುವ ಪ್ರಜ್ಞೆ ರಾಜಕಾರಣಿಗಳಿಗಿರಬೇಕು’ ಎಂದರು.

‘ಮಲೆನಾಡಿನಲ್ಲಿ ಕೃಷಿ ವಲಯ ಗುರುತಿಸಬೇಕು. ಜಿಲ್ಲೆಯಲ್ಲಿ ಐದು ನದಿಗಳು ಹುಟ್ಟಿದರೂ, ಈವರೆಗೆ ಕಡೂರು ನೀರಿನ ಬವಣೆಯಿಂದ ಮುಕ್ತಿ ಪಡೆದಿಲ್ಲ. ಪರಿಸರಕ್ಕೆ ಧಕ್ಕೆಯಾಗದ ಗೋಂದಿ ಅಣೆಕಟ್ಟು ಯೋಜನೆಯಡಿ ಕಡೂರಿನ ಕೆರೆಗಳನ್ನು ತುಂಬಿಸುವ ನಿರ್ಣಯವನ್ನು ಸಮ್ಮೇಳನದಲ್ಲಿ ಕೈಗೊಳ್ಳಿ’ ಎಂದು ಸಮ್ಮೇಳನದ ಅಧ‍್ಯಕ್ಷರಿಗೆ ಮನವಿ ಮಾಡಿದರು.

ಗೋಷ್ಠಿ 1ರ ಅಧ್ಯಕ್ಷತೆಯನ್ನು ಸಾಹಿತಿ ಎಚ್.ಎಂ. ರುದ್ರಸ್ವಾಮಿ ವಹಿಸಿದ್ದರು. ಸಾಹಿತಿಗಳಾದ ಎಚ್.ಎಂ. ಮಹೇಶ್ ಅವರು ‘ಡಾ. ಬೆಳವಾಡಿ ಮಂಜುನಾಥ್ ಸಾಹಿತ್ಯ’ದ ಕುರಿತು ಮಾತನಾಡಿದರು. ಸಮ್ಮೇಳದನ ವಿವಿಧ ಸಮಿತಿ ಪದಾಧಿಕಾರಿಗಳಾದ ಮಗ್ಗಲಮಕ್ಕಿ ಗಣೇಶ್‌, ಕೆಸಗೋಡು ನಾಗರಾಜ್, ಭದ್ರೇಗೌಡ, ಕೆ.ಎನ್.ಗೋಪಾಲ್ ಹೆಗ್ಡೆ, ಎಚ್.ಎಸ್. ಸಿದ್ದಪ್ಪ, ಎಚ್.ಎ. ಶ್ರೀನಿವಾಸ್, ಬೇಗಾನೆ ಕಾಡಪ್ಪ ಗೌಡ, ಮರಿಯಪ್ಪ, ಚಕ್ರಪಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.