ADVERTISEMENT

ಆಭಾ ಕಾರ್ಡ್‌: ಚಿಕಿತ್ಸೆ ದಾಖಲೆ ಲಭ್ಯ

ಮಾಹಿತಿ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಪ್ರಸಾದ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 6:44 IST
Last Updated 29 ಸೆಪ್ಟೆಂಬರ್ 2022, 6:44 IST
ಆರೋಗ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಮಾಹಿತಿ ಕಾರ್ಯಕ್ರಮಕ್ಕೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೀರಪ್ರಸಾದ್ ಚಾಲನೆ ನೀಡಿದರು.
ಆರೋಗ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಮಾಹಿತಿ ಕಾರ್ಯಕ್ರಮಕ್ಕೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೀರಪ್ರಸಾದ್ ಚಾಲನೆ ನೀಡಿದರು.   

ಸಿಂಸೆ (ಎನ್.ಆರ್.ಪುರ): ಪ್ರತಿಯೊಬ್ಬರು ಆಭಾ ಕಾರ್ಡ್ ಅನ್ನು ಕಡ್ಡಾಯವಾಗಿ ಮಾಡಿಸಬೇಕು. ಇದರಿಂದ ರೋಗಿಯ ಎಲ್ಲ ವೈದ್ಯಕೀಯ ದಾಖಲೆಗಳು ಲಭ್ಯವಾಗಲಿವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಪ್ರಸಾದ್ ತಿಳಿಸಿದರು.

ಇಲ್ಲಿನ ಸೋಷಿಯಲ್ ವೆಲ್‌ಫೇರ್ ಸೊಸೈಟಿ ಸಭಾಂಗಣದಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮೀಣ ಸೇವಾ ಕೇಂದ್ರಗಳಲ್ಲಿ ಆಧಾರ್ ಕಾರ್ಡ್, ಮೊಬೈಲ್ ನಂಬರ್ ನೀಡಿದರೆ ಅಬಾ ಕಾರ್ಡ್ ಲಭ್ಯವಾಗಲಿದೆ. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಆಭಾ ಕಾರ್ಡ್‌ನಲ್ಲಿರುವ ಐಡಿಗೆ ದಾಖಲಾಗುತ್ತದೆ. ಮುಂದೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಹಿಂದಿನ ಎಲ್ಲ ಚಿಕಿತ್ಸೆಯ ವಿವರ ಲಭ್ಯವಾಗುತ್ತದೆ. ಇತ್ತೀಚೆಗೆ ರೇಬಿಸ್ ಕಾಯಿಲೆ ಹೆಚ್ಚಾಗುತ್ತಿದ್ದು, ಹುಚ್ಚು ಹಿಡಿದ ನಾಯಿ, ಹಸುವಿಗೆ ಕಚ್ಚದಂತೆ ಜಾಗ್ರತೆ ವಹಿಸಬೇಕು. ಹುಚ್ಚು ನಾಯಿ ಕಡಿದ ಹಸುವಿನ ಹಾಲನ್ನು ಬಿಸಿ ಮಾಡಿ ಕುಡಿಯಬೇಕು. ಕೋವಿಡ್ ಲಸಿಕೆ ನೀಡಿದ್ದರಿಂದ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ. ಪ್ರತಿಯೊಬ್ಬರು ಕೋವಿಡ್ ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಬೇಕು. ಇದೇ 30ರವರೆಗೂ ಕೋವಿಡ್ ಬೂಸ್ಟರ್ ಡೋಸ್ ಉಚಿತವಾಗಿ ನೀಡಲಾಗುತ್ತದೆ ಎಂದರು.

ADVERTISEMENT

ಸರ್ಕಾರಿ ಆಸ್ಪತ್ರೆಯ ದಂತ ವೈದ್ಯ ಡಾ.ಶ್ರೀನಿವಾಸ್ ಮಾಹಿತಿ ನೀಡಿ, ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಉಚಿತವಾಗಿ ದಂತ ಭಾಗ್ಯ ಯೋಜನೆಯಡಿ ಹಲ್ಲುಗಳನ್ನು ಕಟ್ಟಿಸಿಕೊಡಲಾಗುತ್ತದೆ ಎಂದರು.

ಸೋಷಿಯಲ್ ವೆಲ್‌ಫೇರ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ, ‘32 ವರ್ಷಗಳಿಂದ ಸಂಸ್ಥೆಯು ಗ್ರಾಮೀಣ ಭಾಗದ ಬಡಜನರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮ ರೂಪಿಸಿದೆ. ಮಹಿಳಾ ಸ್ವಸಹಾಯ ಸಂಘ ಸ್ಥಾಪಿಸಿ, ಉದ್ಯೋಗ ತರಬೇತಿ ನೀಡಲಾಗಿದೆ’ ಎಂದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪುನಿತ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಸರ್ಕಾರಿ ಆಸ್ಪತ್ರೆಯ ಆರೋಗ್ಯ ಮಿತ್ರ ಕಾರ್ಯಕ್ರಮದ ಉಷಾ, ಕ್ಷಯರೋಗ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಪವನ್ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಸೋಷಿಯಲ್ ವೆಲ್‌ಫೇರ್ ಸೊಸೈಟಿಯ ಸಹಾಯಕ ನಿರ್ದೇಶಕ ಫಾದರ್ ಜೋಬಿ ವಹಿಸಿದ್ದರು.

ಆರೋಗ್ಯ ಇಲಾಖೆಯ ಅನ್ನಮ್ಮ, ಸುನಿ, ಗಾಯತ್ರಿ, ಅಶ್ವಿನಿ ಇದ್ದರು. ಸ್ವಸಹಾಯ ಸಂಘಗಳಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಲ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.