ADVERTISEMENT

ವಿದ್ಯಾರ್ಥಿಗಳು ಸಮಾಜಕ್ಕೆ ಒಳಿತು ಮಾಡಿ: ನಿರ್ಮಲನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:11 IST
Last Updated 14 ಮೇ 2025, 14:11 IST
ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ನಡೆದ ಬಿ.ಇ., ಎಂ.ಟೆಕ್., ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು
ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ನಡೆದ ಬಿ.ಇ., ಎಂ.ಟೆಕ್., ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು   

ಚಿಕ್ಕಮಗಳೂರು: ಪದವೀಧರರು ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು. ಸಮಾಜಕ್ಕೆ ಒಳಿತು ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲನಂದನಾಥ ಸ್ವಾಮೀಜಿ ಹೇಳಿದರು.

ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಬಿ.ಇ, ಎಂ.ಟೆಕ್, ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಹೊಸ ಪ್ರಪಂಚ ಪ್ರವೇಶಿಸುತ್ತಿರುವ ಪದವೀಧರರ ನೈಜ ಜೀವನ ಇನ್ನಷ್ಟೇ ಆರಂಭವಾಗಲಿದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ನಿಮ್ಮ ಮೇಲೆ ಪೋಷಕರ ಸಾಕಷ್ಟು ನಿರೀಕ್ಷೆಯಿದೆ ಎಂದರು.

ADVERTISEMENT

ಶಿಕ್ಷಕರು ಹಾಗೂ ಪಾಲಕರ ಕನಸು ಈಡೇರಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ. ಹಲವಾರು ಕಂಪನಿಗಳಲ್ಲಿ ದೈಹಿಕ ಸಾಮರ್ಥ್ಯ, ಹಾವ ಭಾವ ನೋಡಿ ಉದ್ಯೋಗ ನೀಡುವುದಿಲ್ಲ. ಪ್ರತಿಭೆ ಎನ್ನುವುದು ಮನದಟ್ಟಾಗಿದ್ದರೆ ಕಂಪನಿಗಳು ತಾವಾಗಿಯೇ ಅವಕಾಶ ಕಲ್ಪಿಸಿಕೊಡುತ್ತವೆ ಎಂದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ವ್ಯಾಸಂಗ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ಉದ್ಯೋಗಕ್ಕೆ ತೆರಳಿದರೂ ಜೀವಭಾಷೆ ಕನ್ನಡವಾಗಿರಲಿ. ಇಂಗ್ಲಿಷ್‌‌ ಭಾಷೆ ಬದುಕಿನ ಒಂದು ಭಾಗವಾಗಿರಲಿ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಪದವಿ ಪೂರೈಸಿ ಮುಖ್ಯವಾಹಿನಿಗೆ ಬರುತ್ತಿರುವ ಹಾದಿ ಸುಲಭವಲ್ಲ,  ಕಲ್ಲು ಮುಳ್ಳಿನಿಂದ ಕೂಡಿರುತ್ತದೆ. ಪ್ರತಿ ವಿದ್ಯಾರ್ಥಿಗಯಲ್ಲಿ ವಿಶಿಷ್ಟ ಪ್ರತಿಭೆ ಜನ್ಮಜಾತವಾಗಿರುತ್ತದೆ. ಅನಾವರಣಗೊಳಿಸುವ ಕಾರ್ಯಕ್ಕೆ ಪಾಲಕರು ನೀರೆರೆದು ಪೋಷಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಎನ್.ಕೆ. ಲೋಕನಾಥ್ ಮಾತನಾಡಿ, ಶಿಕ್ಷಣ ಉದ್ಯೋಗಕ್ಕಾಗಿ ಮಾತ್ರ ಸೀಮಿತವಾಗದೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೂ ಪೂರಕವಾಗಿರಬೇಕು ಎಂದರು.

ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಮಂಗಳೂರು ಶಾಖೆಯ ಧರ್ಮಪಾಲನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ. ರಾಜಶೇಖರ್, ಎಐಟಿ ಕಾಲೇಜು ಪ್ರಾಂಶುಪಾಲ ಸಿ.ಟಿ. ಜಯದೇವ, ರಿಜಿಸ್ಟರ್ ಸಿ.ಕೆ. ಸುಬ್ಬರಾಯ, ಆಡಳಿತ ಮಂಡಳಿ ಸದಸ್ಯ ಕೆ. ಮೋಹನ್, ಡಾ.ಜೆ.ಪಿ. ಕೃಷ್ಣೇಗೌಡ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಜಿ.ಎಂ. ಸತ್ಯನಾರಾಯಣ್, ವೀರೇಂದ್ರ, ಸಂಪತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.