ಪ್ರಾತಿನಿಧಿಕ ಚಿತ್ರ
ಚಿಕ್ಕಮಗಳೂರು: ಮಕ್ಕಳನ್ನು ದತ್ತು ಪಡೆಯಲು ಆಸಕ್ತ ಪೋಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಜಿಲ್ಲೆಯಲ್ಲಿ ಕಳೆದ 17 ವರ್ಷಗಳ ಅವಧಿಯಲ್ಲಿ 236 ಅನಾಥ ಮಕ್ಕಳಿಗೆ ಪೋಷಕರು ದೊರಕಿದ್ದಾರೆ. ವಿದೇಶದಿಂದಲೂ ಬೇಡಿಕೆ ಬರುತ್ತಿದ್ದು, 18 ಮಕ್ಕಳು ವಿದೇಶಿ ಪೋಷಕರ ಮಡಿಲು ಸೇರಿದ್ದಾರೆ.
ಹೆತ್ತ ಮಕ್ಕಳನ್ನು ಬಿಟ್ಟು ಹೋಗುವ ಪೋಷಕರು ಒಂದೆಡೆಯಾದರೆ, ವರ್ಷಗಟ್ಟಲೆ ಕಾದು ದತ್ತು ಪಡೆದುಕೊಳ್ಳುವ ಮಕ್ಕಳಿಲ್ಲದ ಪೋಷಕರು ಮತ್ತೊಂದೆಡೆ ಇದ್ದಾರೆ. ಎಲ್ಲೋ ಸಿಕ್ಕಿದ ಮಗು ಎಂದು ದತ್ತು ಪಡೆದುಕೊಂಡು ಸಾಕಲು ಕಾನೂನಿನಲ್ಲಿ ಅವಕಾಶ ಇಲ್ಲ. ನರ್ಸಿಂಗ್ ಹೋಂನಲ್ಲಿ ಸಿಕ್ಕಿದ ಮಗು, ರಸ್ತೆಯಲ್ಲಿ ಯಾರೋ ಬಿಟ್ಟು ಹೋದ ಮಗು, ಪಾಲಕರಿಗೆ ಬೇಡವಾದ ಮಗು, ಕಳ್ಳತನ ಮಾಡಿಕೊಂಡು ಬಂದು ಸಾಕುವುದು ಕಾನೂನು ಬಾಹಿರ.
ಹೀಗೆ ಕಾನೂನು ಬಾಹಿರವಾಗಿ ದತ್ತು ಪಡೆದರೆ ಮುಂದೊಂದು ದಿನ ಮಗುವಿಗೆ ನೈಜ ಸ್ಥಿತಿಯ ಅರಿವಾಗಿ ಕಾನೂನಿನ ಮೊರೆ ಹೋಗುವ ಸಾಧ್ಯತೆ ಇರುತ್ತದೆ. ಸೂಕ್ತ ದಾಖಲೆಗಳಿಲ್ಲದಿದ್ದರೆ ಪೋಷಕರು ಮತ್ತು ಮಗು ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ಸ್ವಂತ ಮಗು ಹುಟ್ಟಿದಾಗ ದತ್ತು ಪಡೆದ ಮಗುವನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾನೂನು ಪ್ರಕಾರವೇ ದತ್ತು ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಅರ್ಜಿ ಸಲ್ಲಿಸಿದ ತಕ್ಷಣ ಮಗು ಸಿಗುವುದಿಲ್ಲ. www.cara.wcd.gov.in ಮೂಲಕ ಅರ್ಜಿ ಸಲ್ಲಿಸಬೇಕು. ಮಗುವಿಗಾಗಿ ಕನಿಷ್ಠ ಎರಡು ವರ್ಷ ಕಾಯಬೇಕಾದ ಸ್ಥಿತಿ ಸದ್ಯ ಇದೆ. ಅರ್ಜಿದಾರರ ಜೇಷ್ಠತೆ ಆಧರಿಸಿ, ಅವರ ಆರೋಗ್ಯ, ಅಪರಾಧ ಹಿನ್ನೆಲೆ, ಉದ್ಯೋಗ, ಆದಾಯ, ವಯಸ್ಸು, ಎಲ್ಲವನ್ನೂ ಪರಿಶೀಲಿಸಿ ದತ್ತು ನೀಡಲಾಗುತ್ತದೆ.
ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಮಗುವನ್ನು ಪೋಷಕರೊಂದಿಗೆ ಕಳುಹಿಸಿಕೊಡಲಾಗುತ್ತದೆ. ಎರಡು ತಿಂಗಳ ಬಳಿಕ ಮಗು ಹೊಂದಿಕೊಂಡಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಜಿಲ್ಲಾಧಿಕಾರಿ ಆದೇಶ ಹೊರಡಿಸುತ್ತಾರೆ.
ಮಕ್ಕಳನ್ನು ದತ್ತು ಪಡೆಯಲು ಬೇಡಿಕೆ ಹೆಚ್ಚುತ್ತಲೇ ಇದೆ. ದತ್ತು ಪಡೆಯಲು ಬಯಸಿ ಅರ್ಜಿ ಸಲ್ಲಿಸಿದವರು ಕನಿಷ್ಠ 2 ವರ್ಷ ಕಾಯಬೇಕಾಗಿದೆ. ವಿದೇಶಿಗರೂ ಇಲ್ಲಿನ ಮಕ್ಕಳನ್ನು ದತ್ತು ಪಡೆಯುತ್ತಿದ್ದಾರೆ..ಮಹಂತೇಶ್ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ
ಹೀಗೆ ದತ್ತು ಪಡೆಯಲು ಬೇಡಿಕೆ ಹೆಚ್ಚುತ್ತಲೇ ಇದೆ. 2008ರಿಂದ ಈಚೆಗೆ ಜಿಲ್ಲೆಯ 239 ಮಕ್ಕಳನ್ನು ವಿವಿಧೆಡೆಯಿಂದ ಅರ್ಜಿ ಸಲ್ಲಿಸಿದ್ದ ಪೋಷಕರು ದತ್ತು ಪಡೆದಿದ್ದಾರೆ. ಈ ಪೈಕಿ 18 ಮಕ್ಕಳು ಅಮೆರಿಕ, ಇಟಲಿ, ಇಂಗ್ಲೆಂಡ್ ಪೋಷಕರನ್ನು ಸೇರಿದ್ದಾರೆ.
ಅನಾಥ ಮಕ್ಕಳ ಸಂಖ್ಯೆಯೂ ಹೆಚ್ಚಳ
ಮಕ್ಕಳನ್ನು ಬಿಟ್ಟು ಹೋಗುವ ಪೋಷಕರ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ. ಮದುವೆಗೂ ಮುನ್ನ ಜನಿಸುವ ಮಕ್ಕಳು, ಬಾಲ್ಯ ವಿವಾಹವಾದವರು, ಬಡತನದ ಕಾರಣಕ್ಕೆ ಮಕ್ಕಳನ್ನು ಸಾಕಲು ಸಾಧ್ಯವಾಗದ ಪೋಕಷರು ಮಕ್ಕಳನ್ನು ಬಾಲ ಮಂದಿರಗಳಿಗೆ ಒಪ್ಪಿಸುತ್ತಿದ್ದಾರೆ. ನಗರದ ಬಾಲ ಮಂದಿರದಲ್ಲಿ ಈಗಲೂ 14 ಮಕ್ಕಳಿದ್ದಾರೆ. ಅರ್ಜಿ ಸಲ್ಲಿಸಿದವರಿಗೆ ಕಾನೂನು ಪ್ರಕಾರ ದತ್ತು ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಮಗು ಬೇಡವಾದ ಪೋಷಕರು ಮಕ್ಕಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗಬಾರದು. ಅದಕ್ಕಾಗಿಯೇ ಆಸ್ಪತ್ರೆ, ಬಾಲ ಮಂದಿರಗಳಲ್ಲಿ ತೊಟ್ಟಿಲುಗಳನ್ನು ಇಡಲಾಗಿದೆ. ನೇರವಾಗಿಯೂ ಬಂದು ಮಕ್ಕಳನ್ನು ಒಪ್ಪಿಸಲು ಅವಕಾಶ ಇದೆ. ಇದನ್ನು ಬಳಸಿಕೊಳ್ಳಬೇಕು ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.