ADVERTISEMENT

ಮನೆಯಂಗಳದಲ್ಲಿ ಅರಳಿದ ಕೈತೋಟ

ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನ: 25ಕ್ಕೂ ಅಧಿಕ ರೈತರ ವಿನೂತನ ಪ್ರಯೋಗ

ಪ್ರಜಾವಾಣಿ ವಿಶೇಷ
Published 5 ಜನವರಿ 2022, 3:11 IST
Last Updated 5 ಜನವರಿ 2022, 3:11 IST
ಮೂಡಿಗೆರೆ ತಾಲ್ಲೂಕಿನ ಜಿ ಹೊಸಳ್ಳಿ ಗ್ರಾಮದ ರೈತ ಪೂರ್ಣೇಶ್ ಮನೆಯಂಗಳದಲ್ಲಿ ಬೆಳೆದಿರುವ ಪೌಷ್ಟಿಕ ಕೈತೋಟ. ಕೃಷಿ ವಿಜ್ಞಾನಿ ಡಾ. ಎ.ಟಿ. ಕೃಷ್ಣಮೂರ್ತಿ ಹಾಗೂ ಗ್ರಾಮಸ್ಥರಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಜಿ ಹೊಸಳ್ಳಿ ಗ್ರಾಮದ ರೈತ ಪೂರ್ಣೇಶ್ ಮನೆಯಂಗಳದಲ್ಲಿ ಬೆಳೆದಿರುವ ಪೌಷ್ಟಿಕ ಕೈತೋಟ. ಕೃಷಿ ವಿಜ್ಞಾನಿ ಡಾ. ಎ.ಟಿ. ಕೃಷ್ಣಮೂರ್ತಿ ಹಾಗೂ ಗ್ರಾಮಸ್ಥರಿದ್ದಾರೆ.   

ಮೂಡಿಗೆರೆ: ಬೆಲೆಏರಿಕೆಯ ಬಿಸಿಯು ತರಕಾರಿ ಕ್ಷೇತ್ರವನ್ನು ಸುಡುತ್ತಿದ್ದು, ನೂರು ರೂಪಾಯಿಯ ಗಡಿಯಲ್ಲಿರುವ ತರಕಾರಿಗಳನ್ನು ಸಾಮಾನ್ಯ ಜನರು ಕೊಳ್ಳಲಾಗದ ಪರಿಸ್ಥಿತಿ ಇದೆ. ಈ ಮಧ್ಯೆ ಜಿ.ಹೊಸಳ್ಳಿ ಗ್ರಾಮದಲ್ಲಿ 25ಕ್ಕೂ ಅಧಿಕ ಜನರು ತಮ್ಮ ಮನೆಯಂಗಳದಲ್ಲಿಯೇ ತಾಜಾ ತರಕಾರಿಗಳನ್ನು ಬೆಳೆದು ಬೆಲೆ ಏರಿಕೆಯ ಬಿಸಿಯಿಂದ ದೂರ ಉಳಿದಿದ್ದಾರೆ.

ಹ್ಯಾಂಡ್ ಪೋಸ್ಟಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿಕೊಂಡಿರುವ ಗ್ರಾಮದ ರೈತರು, ಸೊಪ್ಪು, ಎಲೆಕೋಸು, ಬದನೆ, ಸೀಮೆಬದನೆ, ಹಸಿಮೆಣಸು, ಬಸಲೆ, ಗೆಡ್ಡೆಕೋಸು, ಟೊಮೆಟೊ, ಸಿಹಿಗುಂಬಳ, ಸೋರೆಕಾಯಿ, ಬೀನ್ಸ್, ಅವರೆಕಾಯಿ ಸೇರಿದಂತೆ ಹಲವು ಬಗೆಯ ಹಸಿರು ತರಕಾರಿಗಳನ್ನು ಬೆಳೆದು ಸ್ವತಃ ಬಳಕೆ ಮಾಡುತ್ತಿರುವುದಲ್ಲದೆ, ಗೂಡಂಗಡಿಗಳಲ್ಲಿ ಹಾಗೂ ಸ್ಥಳೀಯವಾಗಿ ಮಾರಾಟ ಮಾಡಿ ನಾಲ್ಕು ಕಾಸು ಆದಾಯವನ್ನು ಕಾಣುತ್ತಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಮನೆಯ ಅಂಗಳ, ಹಿತ್ತಲು ಹಾಗೂ ಅಕ್ಕಪಕ್ಕದಲ್ಲಿಯೇ ಭೂಮಿಯಿದ್ದರೂ ಅದನ್ನು ಬಳಕೆ ಮಾಡಿಕೊಳ್ಳದೆ ವ್ಯರ್ಥವಾಗಿ ಬಿಟ್ಟಿರುತ್ತಾರೆ. ಆ ಭೂಮಿಯನ್ನು ಬಳಸಿಕೊಂಡರೆ ಕುಟುಂಬದ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದಲ್ಲದೆ, ರಾಸಾಯನಿಕ ಮುಕ್ತ ತಾಜಾ ತರಕಾರಿ, ಹಣ್ಣುಗಳನ್ನು ಬೆಳೆದುಕೊಂಡು ಬಳಸಿಕೊಳ್ಳಬಹುದಾಗಿದೆ. ಇದನ್ನು ವೈಜ್ಞಾನಿಕ ಮಾದರಿಯಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ 25ಕ್ಕೂ ಅಧಿಕ ರೈತರು ಕೈತೋಟ ನಿರ್ಮಿಸಿಕೊಂಡು ತಾಜಾ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ರೈತರಿಗೆ ಬೇಕಾದ ಬೀಜೋಪಚಾರದಿಂದ ಕೃಷಿ ಪದ್ಧತಿಯವರೆಗೂ ಕೃಷಿ ವಿಜ್ಞಾನ ಕೇಂದ್ರದಿಂದ ಮಾಹಿತಿ ಹಾಗೂ ಮೇಲ್ವಿಚಾರಣೆ ಮಾಡಲಾಗಿದೆ. ಯಾವುದೇ ಭಾಗದ ಆಸಕ್ತ ರೈತರು ಪೌಷ್ಟಿಕ ತೋಟಗಳನ್ನು ನಿರ್ಮಿಸಿಕೊಳ್ಳಬಹುದು’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಟಿ.ಕೃಷ್ಣಮೂರ್ತಿ.

ADVERTISEMENT

‘ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ವಿಶೇಷ ಕೆಲಸ ಕಾರ್ಯಗಳ ಅಗತ್ಯವಿಲ್ಲ. ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳುತ್ತಲೆ ಕೈತೋಟಗಳನ್ನು ನಿರ್ಮಿಸಿಕೊಳ್ಳಬಹುದು. ಮಹಿಳೆಯರು ಬಿಡುವಿನ ಅವಧಿಯಲ್ಲಿ ಕೈತೋಟದ ಕೆಲಸಗಳನ್ನು ಮಾಡಿಕೊಳ್ಳಬಹುದು. ಮನೆಯಲ್ಲಿ ಸಿಗುವ ಸಗಣಿ ಗೊಬ್ಬರ, ಹಸಿ ಕಸಗಳನ್ನು ಗೊಬ್ಬರವಾಗಿ ಕೈತೋಟಕ್ಕೆ ಬಳಸುವುದರಿಂದ ಕಸದ ನಿರ್ವಹಣೆ ಸಮಸ್ಯೆಯಿರುವುದಿಲ್ಲ. ಹಸಿ ಕಸ ಹಾಗೂ ಸಗಣಿ ಗೊಬ್ಬರದಿಂದ ತರಕಾರಿಗಳು ಸಹ ಹುಲುಸಾಗಿ ಬೆಳೆಯುತ್ತವೆ. ತಾಜಾ ತರಕಾರಿಗಳನ್ನು ಅಕ್ಕಪಕ್ಕದ ಹಳ್ಳಿಯವರೂ ಬಳಕೆಗಾಗಿ ಖರೀದಿಸುತ್ತಾರೆ. ಇದರಿಂದ ಲಾಭ ಕೂಡ ಗಳಿಸಬಹುದು’ ಎನ್ನುತ್ತಾರೆ ಜಿ.ಹೊಸಳ್ಳಿ ಗ್ರಾಮದ ರೈತ ಪೂರ್ಣೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.