ADVERTISEMENT

ಅಜ್ಜಂಪುರ | ‘ಶೀಘ್ರದಲ್ಲಿಯೇ ಹಕ್ಕುಪತ್ರ, ಇ-ಸ್ವತ್ತು ವಿತರಣೆ’

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 7:13 IST
Last Updated 30 ಡಿಸೆಂಬರ್ 2025, 7:13 IST
ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್‌ ಉದ್ಘಾಟಿಸಿದರು
ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್‌ ಉದ್ಘಾಟಿಸಿದರು   

ಅಜ್ಜಂಪುರ: ಇಲ್ಲಿನ ಕಾಲೊನಿಯಲ್ಲಿ ದಾಖಲೆ ಇಲ್ಲದ ಮನೆ ಮತ್ತು ನಿವೇಶನಗಳಿಗೆ ಶೀಘ್ರದಲ್ಲಿಯೇ ಹಕ್ಕು ಪತ್ರ ವಿತರಿಸಲಾಗುವುದು. ಬಳಿಕ ಇ ಸ್ವತ್ತು ನೀಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಮತ್ತು ಸಭಾ ಭವನ, ಗರಡಿ ಮನೆ, ಘನ ತ್ಯಾಜ್ಯ ಘಟಕ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಹಕ್ಕು ಪತ್ರ ಇಲ್ಲದ 9,500 ಸ್ವತ್ತುಗಳಿವೆ. ಅವುಗಳಲ್ಲಿ 5000 ಸ್ವತ್ತುಗಳಿಗೆ ಶೀಘ್ರ ಹಕ್ಕು ಪತ್ರ, ಇ-ಸ್ವತ್ತು ನೀಡಲು 10 ಕಂದಾಯ ಗ್ರಾಮ, 101 ಉಪಗ್ರಹ ರಚಿಸಲಾಗಿದೆ. 2ಇ ಅಡಿ ಖಾಸಗಿ ಸ್ವತ್ತುಗಳಲ್ಲಿ ಮನೆ ನಿರ್ಮಾಣ ಮಾಡಿ‌ದವರಿಗೂ ಹಕ್ಕುಪತ್ರ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. ಉಳಿದ ಸುಮಾರು 4,500 ಹಕ್ಕುಪತ್ರ ವಿತರಣೆಗೂ ಕ್ರಮ ವಹಿಸುವುದಾಗಿ ಹೇಳಿದರು.

ADVERTISEMENT

ಬಗ್ಗವಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ₹10 ಲಕ್ಷ, ಗೊಂಡೇದಹಳ್ಳಿಯಲ್ಲಿ ಸಿಸಿ ರಸ್ತೆಗೆ ₹ 10 ಲಕ್ಷ, ಕುರುಬರಹಳ್ಳಿ ಸಿಸಿ ರಸ್ತೆಗೆ ₹ 4 ಲಕ್ಷ, ಬಗ್ಗವಳ್ಳಿ-ವಡೇರಹಳ್ಳಿ ರಸ್ತೆಗೆ ₹ 30 ಲಕ್ಷ, ಮೈಲಾರಲಿಂಗ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ₹20 ಲಕ್ಷ, ಕಾಲೊನಿ ಸಮುದಾಯ ಭವನಕ್ಕೆ ₹ 10 ಲಕ್ಷ, ತೇರು ಮನೆ ರಸ್ತೆಗೆ ₹ 25 ಲಕ್ಷ , ಬಾಕ್ಸ್ ಚರಂಡಿಗೆ ₹ 20 ಲಕ್ಷ, ಪ್ರಾಥಮಿಕ ಶಾಲೆ ದುರಸ್ತಿಗೆ ₹ 7.5 ಲಕ್ಷ, ಪ್ರೌಢಶಾಲೆಗೆ ₹ 2.3 ಲಕ್ಷ, ಅಂಗನವಾಡಿಗೆ ₹ 7.5 ಲಕ್ಷ ಅನುದಾನ ನೀಡಲಾಗಿದೆ ಎಂದರು.

ನಿವೃತ್ತ ಲೆಫ್ಟಿನೆಂಟ್ ಬಿ.ಎಸ್.ರಾಜು ಮಾತನಾಡಿ, ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಲು ಮುಂದಾಗಿದ್ದೇವೆ. ಇದಕ್ಕೆ ಪೋಷಕರು, ದಾನಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಳಿಕ ನಡೆದ ಜನ ಸಂಪರ್ಕ ಸಭೆಯಲ್ಲಿ, ಯೋಗಾನರಸಿಂಹ ಸ್ವಾಮಿ ದೇವಾಲಯ ಆವರಣಕ್ಕೆ ತೋಟಗಾರಿಕಾ ಇಲಾಖೆಯಿಂದ ಸಸಿ ನೆಡುವಂತೆ ಅನಂತ್ ಗುರೂಜಿ, ಸಂಜೀವಿನಿ ಷೆಡ್ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಒಕ್ಕೂಟ ಸಂಘದ ಶಕುಂತಲಾ, ಚನ್ನಾಪುರದಲ್ಲಿ ಆರೋಗ್ಯ ಕೇಂದ್ರ ತೆರೆಯುವಂತೆ ಮಲ್ಲಿಕಾರ್ಜುನ್, ಬಿಸಿಎಂ ಹಾಸ್ಟೆಲ್ ನಿರ್ಮಾಣ ಮಾಡುವಂತೆ ಶೇಖರಪ್ಪ, ಅಂಚೆ ಕಚೇರಿ ತೆರೆಯುವಂತೆ ಸಿದ್ದೇಗೌಡ, ತಿಪ್ಪೆ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಮರುಳಪ್ಪ ಮನವಿ ಸಲ್ಲಿಸಿದರು.

ಪಂಚಾಯಿತಿ ಅಧ್ಯಕ್ಷ ಬಿ.ಜಿ.ಗುರುಮೂರ್ತಿ, ಉಪಾಧ್ಯಕ್ಷೆ ಸಿ.ಎನ್.ಚಂದ್ರಮತಿ, ಸದಸ್ಯ ಷಡಾಕ್ಷರಪ್ಪ, ದಯಾನಂದ್, ಬಿ.ಸಿ.ಬಸವರಾಜು, ಶೈಲಮ್ಮ, ರೂಪ, ಕಮಲ, ಪರಿಮಳ, ಚಂದ್ರಮ್ಮ ಭಾಗವಹಿಸಿದ್ದರು.

ತಹಶೀಲ್ದಾರ್ ವಿನಾಯಕ್ ಸಾಗರ್, ತಾಲ್ಲೂಕು ಪಂಚಾಯಿತಿ ಇ.ಒ.ವಿಜಯಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನೋದ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನವೀನ್, ಟಿ.ಎಚ್.ಒ. ಚಂದ್ರಶೇಖರ್, ಬಿಇಒ ಪುರುಶರಾಮ್, ಸಿಡಿಪಿಒ ಚರಣ್ ರಾಜ್, ಕೃಷಿ ಇಲಾಖೆ ನಿರ್ದೇಶಕ ಲೋಕೇಶ್, ಪಶು ವೈದ್ಯ ಶಶಿಧರ್, ಪಿಡಿಒ ಎಚ್.ಎನ್. ಶೇಖರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.