ADVERTISEMENT

ದೇಶ ನಿರೀಕ್ಷೆಯಷ್ಟು ಪ್ರಗತಿ ಕಂಡಿಲ್ಲ: ಗೊರುಚ

‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಗೊ.ರು.ಚನ್ನಬಸಪ್ಪ ಬೇಸರ

​ಪ್ರಜಾವಾಣಿ ವಾರ್ತೆ
Published 29 ಮೇ 2022, 5:15 IST
Last Updated 29 ಮೇ 2022, 5:15 IST
ಅಜ್ಜಂಪುರದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ನಡೆದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಸಾಹಿತಿ ಗೊ.ರು. ಚನ್ನಬಸಪ್ಪ ಮಾತನಾಡಿದರು
ಅಜ್ಜಂಪುರದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ನಡೆದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಸಾಹಿತಿ ಗೊ.ರು. ಚನ್ನಬಸಪ್ಪ ಮಾತನಾಡಿದರು   

ಅಜ್ಜಂಪುರ: ‘ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದಿದ್ದರೂ, ಸ್ವತಂತ್ರ ಭಾರತ ಅಪೇಕ್ಷಿಸಿದಂತಹ ನವಭಾರತ ನಿರ್ಮಾಣ ಕಾರ್ಯ ಇನ್ನೂ ಕೂಡಾ ಆಗಿಲ್ಲ’ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ನಡೆದ ‘ಅಮೃತ ಭಾರತಿಗೆ ಕನ್ನಡ ದಾರತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ದೇಶ ನಿರೀಕ್ಷಿತ ಪ್ರಗತಿ ಸಾಧಿಸದಿರಲು, ನಾವು ಇಟ್ಟಿರುವ ಹೆಜ್ಜೆಯಲ್ಲಿ ತಪ್ಪು ಇಲ್ಲವೇ ನಮ್ಮ ಕಾರ್ಯ ನಿರ್ವಹಣೆಯಲ್ಲಿ ದೋಷ ಕಾರಣವಿರಬೇಕು. ಈ ಬಗ್ಗೆ ಪ್ರತಿಯೊಬ್ಬ ಭಾರತೀಯ ಕೂಡ ಅತ್ಮ ವಿಮರ್ಶೆ ಮಾಡಿಕೊಂಡು, ನಮ್ಮ ದೌರ್ಬಲ್ಯ ದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಸಮಗ್ರ ರಾಷ್ಟ್ರೀಯ ದೃಷ್ಟಿಕೋನ ಬೆಳೆಸಿ ಕೊಂಡು, ಸಮರ್ಪಣಾ ಭಾವ ದಿಂದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸ ಬೇಕು’ ಎಂದು ಅಭಿಪ್ರಾಯಪಟ್ಟರು.

‘ಆಚರಣೆಗಳು ಕೇವಲ ಸಭೆ ಸಮಾರಂಭಕ್ಕೆ, ಜೈಕಾರ ಹಾಕಲು ಸೀಮಿತ ಆಗಬಾರದು. ಬದಲಿಗೆ ದೇಶದ ಭವ್ಯ ಇತಿಹಾಸ, ಪರಂಪರೆಯನ್ನು ಸ್ಮರಿಸಿಕೊಳ್ಳಲು, ನಮ್ಮ ಹಿರಿಯರು ಮಾಡಿದ ತ್ಯಾಗ- ಬಲಿದಾನಗಳಿಂದ ತಂದು ಕೊಟ್ಟ ಸ್ವಾತಂತ್ರ್ಯವನ್ನು ಸಂರಕ್ಷಿಸಲು, ದೈವದತ್ತವಾಗಿರುವ ನೈಸರ್ಗಿಕ ಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಂಡು ಸ್ವಾಭಿಮಾನ-ಸ್ವಾವಲಂಬಿಯಾದ ನವ ಭಾರತವನ್ನು ಕಟ್ಟಲು ಎಲ್ಲರೂ ಕೂಡಿ ಸಂಕಲ್ಪ ಮಾಡುವ ವೇದಿಕೆಯಾಗಬೇಕು’ ಎಂದರು.

ADVERTISEMENT

ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಜನಸಮುದಾಯದಲ್ಲಿ ಜಾಗೃತಿ ಮೂಡಿಸಿ, ನಮ್ಮ ಸ್ವಾತಂತ್ರ್ಯಕ್ಕೆ ಅರ್ಥ ತಂದುಕೊಡುವ ಆಶಯದಿಂದ ಅಮೃತ ಮಹೋತ್ಸವವನ್ನು ರಾಷ್ಟ್ರದಾದ್ಯಂತ ಆಚರಿಸುವಂತೆ ಸಂದೇಶ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯ ಅಭಿನಂದನೀಯ’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್ ಹತ್ರಿ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಆರ್. ಆನಂದಪ್ಪ, ಗಿರೀಶ್ ಚವ್ಹಾಣ್, ಟಿಎಪಿಎಸ್ ಅಧ್ಯಕ್ಷ ಶಂಬೈನೂರು ಆನಂದಪ್ಪ, ಆಡಿಟರ್ ಮಂಜುನಾಥ್, ಎ.ಸಿ. ಚಂದ್ರಪ್ಪ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೊನ್ನೇಶ್ ಕುಮಾರ್, ಸಿಡಿಪಿಒ ಜ್ಯೋತಿಲಕ್ಷ್ಮಿ, ಕಲಾವಿದ ಮಾಳೇನಹಳ್ಳಿ ಬಸಪ್ಪ, ಕರ್ನಾಟಕ ಜಾನಪದ ಅಕಾಡೆಮಿ ನಿರ್ದೇಶಕಿ ಮುಗಳಿ ಲಕ್ಷ್ಮೀ ದೇವಮ್ಮ, ರಾಜ್ಯ ಸರ್ಕಾರಿ ನೌಕರ ಸಂಘ ಅದ್ಯಕ್ಷ ಜಿ.ಎನ್.ಈಶ್ವರಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರತ್ನ, ಡಿವೈಎಸ್ಪಿ ನಾಗರಾಜ್, ಇನ್‌ಸ್ಪೆಕ್ಟರ್ ಲಿಂಗರಾಜು, ಪಿಎಸೈ ಬಸವರಾಜು ಇದ್ದರು.

ಸ್ವಾತಂತ್ರ್ಯ ಹೋರಾಟಗಾರ ಏಕೋರಾಮಸ್ವಾಮಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು. ಜ್ಯೋತಿ ಮತ್ತು ತಂಡದವರು ಪ್ರಾರ್ಥನೆ, ಭಕ್ತನಕಟ್ಟೆ ಲೋಕೇಶ್ ನಾಡಗೀತೆ, ವಿಜಯಕುಮಾರಿ ಮತ್ತು ತಂಡದವರು ರಾಷ್ಟ್ರಗೀತೆ ಹಾಡಿ, ಗಮನ ಸೆಳೆದರು. ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಆಯೋಜಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.