
ಆಲ್ದೂರು: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನವಮಿ ವಿಕಾಸ್ ಗೌಡ (26) ಟೆಂಪೊ ಟ್ರಾವೆಲರ್ ಡಿಕ್ಕಿಯಿಂದ ಸೋಮವಾರ ಮೃತಪಟ್ಟಿದ್ದಾರೆ.
ಇವರು, ಸಮೀಪದ ದೊಡ್ಡಮಾಗರವಳ್ಳಿ ಗ್ರಾಮದ ವೆಂಕಟೇಶ್ ಗೌಡ ಮತ್ತು ಪೂರ್ಣಿಮಾ ದಂಪತಿ ಪುತ್ರಿ. ನವಮಿ ಹುಣಸೆಮಕ್ಕಿ ಗ್ರಾಮದ ವಿಕಾಸ್ ಗೌಡ ಅವರನ್ನು ವಿವಾಹವಾಗಿದ್ದು, ದಂಪತಿಗೆ ಮೂರು ವರ್ಷದ ಪುತ್ರಿ ಇದ್ದಾಳೆ.
ಗಣರಾಜ್ಯೋತ್ಸವದ ಹಿನ್ನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸ್ಕೂಟಿಯಲ್ಲಿ ಬರುತ್ತಿದ್ದ ನವಮಿಗೆ, ಬಿರಂಜಿ ಹೊಳೆ ಸಮೀಪದ ಸುಶಿಕ್ಷಿತ ಶಾಲೆಯ ಎದುರಿನ ರಾಜ್ಯ ಹೆದ್ದಾರಿ–27ರಲ್ಲಿ ಸಂಚರಿಸುತ್ತಿದ್ದ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಇವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಎಲ್ಲರೊಂದಿಗೆ ಸ್ನೇಹಪರವಾಗಿ ಬೆರೆಯುತ್ತಿದ್ದ ನವಮಿಯ ಪಾರ್ಥಿವ ಶರೀರವನ್ನು ಪ್ರಾಥಮಿಕ ಕೃಷಿ ಪತ್ತಿನ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಆಲ್ದೂರು ಶಾಸಕಿ ನಯನಾ ಮೋಟಮ್ಮ ಅವರು ಮೃತರ ಕುಟುಂಬವನ್ನು ಭೇಟಿ ನೀಡಿ ಸಾಂತ್ವನ ತಿಳಿಸಿದರು.
ಪತಿ ವಿಕಾಸ್ ಗೌಡ ನೀಡಿದ ದೂರಿನ ಮೇರೆಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.