ADVERTISEMENT

ಆಲ್ದೂರು: ಅವಧಿಗೂ ಮುನ್ನವೇ ಹಣ್ಣಾಗುತ್ತಿರುವ ಕಾಫಿ

ಮಳೆ ಆತಂಕ; ಆಗಸ್ಟ್‌ನಲ್ಲಿ ಕಾಫಿ ಕೊಯ್ಲು ಮಾಡಬೇಕಾದ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:33 IST
Last Updated 4 ಜೂನ್ 2023, 23:33 IST
ಆಲ್ದೂರು ಸಮೀಪದ ಅರವಿಂದ್ ಎಂಬುವರ ಕಾಫಿ ತೋಟದಲ್ಲಿ ಹಣ್ಣಾದ ಕಾಫಿ
ಆಲ್ದೂರು ಸಮೀಪದ ಅರವಿಂದ್ ಎಂಬುವರ ಕಾಫಿ ತೋಟದಲ್ಲಿ ಹಣ್ಣಾದ ಕಾಫಿ   

ಜೋಸೆಫ್.ಎಂ.ಆಲ್ದೂರು

ಆಲ್ದೂರು: ಆಲ್ದೂರು ಸುತ್ತಲಿನ ಕೆಲವು ಕಾಫಿ ತೋಟಗಳಲ್ಲಿ ಅವಧಿಗೂ ಮುನ್ನವೇ ಕಾಫಿ ಹಣ್ಣಾಗುತ್ತಿದ್ದು, ಮಳೆಗಾಲದಲ್ಲಿ ಕಾಫಿ ಕೊಯ್ಲು ಮಾಡಿದರೆ ಒಣಗಿಸುವುದಾದರೂ ಹೇಗೆ ಎನ್ನುವ ಚಿಂತೆ ಬೆಳೆಗಾರರನ್ನು ಕಾಡುತ್ತಿದೆ.

ಕಾಫಿ ಬೆಳೆಗಾರರ ಆಲ್ದೂರು ಹೋಬಳಿ ಘಟಕದ ಅಧ್ಯಕ್ಷ ಸಿ. ಸುರೇಶ್ ಮಾತನಾಡಿ, ‘ಈ ಬಾರಿ ಹೂಮಳೆ ಸಕಾಲಕ್ಕೆ ಲಭಿಸಲಿಲ್ಲ. ಡಿಸೆಂಬರ್ ಮತ್ತು ಜನವರಿಯಲ್ಲಿ ಆದ ಮಳೆಗೆ ಕಾಫಿ ಹೂವರಳಿ ಕಾಯಿ ಕಟ್ಟಿದ್ದು, ಕಾಯಿಗಳು ಈಗ ಹಣ್ಣಾಗುವ ಹಂತಕ್ಕೆ ಬಂದಿವೆ. ಅರೇಬಿಕಾ ಮತ್ತು ನಂಬರ್ –9 ತಳಿಯ ಕಾಫಿ ಗಿಡಗಳಲ್ಲಿ ಕೊಂಚ ವೇಗವಾಗಿ ಕಾಯಿ ಹಣ್ಣಾಗುವುದು ವಾಡಿಕೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಹೂಮಳೆ ಆಗಿ, ಕಾಯಿ ಕಟ್ಟಿದರೆ ನವೆಂಬರ್ ತಿಂಗಳಲ್ಲಿ ಕಾಯಿ ಹಣ್ಣಾಗುವ ಹಂತಕ್ಕೆ ಬರುತ್ತಿತ್ತು’ ಎಂದರು.

ADVERTISEMENT

‘ಕೆಲವೊಮ್ಮೆ ತೋಟದಲ್ಲಿ ಕಾಳು ಮೆಣಸಿನ ಬಳ್ಳಿಗೆ ನೀರು ಹಾಯಿಸುವಾಗ, ಕೊಳವೆಯಿಂದ ಸೋರಿಕೆಯಾಗುವ ನೀರು ಕಾಫಿ ಗಿಡಗಳಿಗೂ ಲಭಿಸುವುದರಿಂದ ಬೇಗ ಹೂವರಳಿ ಕಾಯಿ ಕಟ್ಟುವ ಸಾಧ್ಯತೆ ಇರುತ್ತದೆ. ಇದು ಕೂಡ ಫಸಲು ಬೇಗ ಹಣ್ಣಾಗಲು ಕಾರಣವಾಗುತ್ತದೆ’ ಎಂದು ಸುರೇಶ್  ಹೇಳಿದರು. 

‘ತೋಟದಲ್ಲಿ ಈಗಾಗಲೇ ಕಾಫಿ ಹಣ್ಣಾಗಲು ಪ್ರಾರಂಭವಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ಕೊಯ್ಲು ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಮಳೆಗಾಲದಲ್ಲಿ ಕಾಫಿ ಒಣಗಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ’ ಎನ್ನುತ್ತಾರೆ ಕಾಫಿ ಬೆಳೆಗಾರ ಅರವಿಂದ್ ಬಿ.ಪಿ.

ಹೂಮಳೆ ಮುಂಚಿತವಾಗಿ ಆದ ಪರಿಣಾಮ ಸಮೀಪದ ಅರವಿಂದ್ ಎಂಬುವರ ಕಾಫಿ ತೋಟದಲ್ಲಿ ಹಣ್ಣಾಗಿರುವ ಕಾಫಿ ಕಾಯಿಗಳು

ಮಲೆನಾಡಿನ ಕಾಫಿ ಬೆಳೆಗಾರರ ಬದುಕು ನಿಸರ್ಗದೊಂದಿಗೆ ನಡೆಸುವಂತಹ ನಿರಂತರ ಸಂಘರ್ಷವಾಗಿ ಮಾರ್ಪಾಡಾಗಿರುವುದು ವಿಪರ್ಯಾಸ. ಬೆಳೆಗಾರರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು.

- ಸಿ. ಸುರೇಶ್ ಕಾಫಿ ಬೆಳೆಗಾರರ ಆಲ್ದೂರು ಹೋಬಳಿ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.