ಕಳಸ: ಅಂಬಾತೀರ್ಥದ ಬಳಿ ವಾಸವಾಗಿರುವ ಗಿರಿಜನ ಕುಟುಂಬಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಭದ್ರಾ ನದಿಯಿಂದ ಕೂಗಳತೆ ದೂರದಲ್ಲಿ ಈ ಗ್ರಾಮ ಇದ್ದರೂ, ಇಲ್ಲಿನ ನಿವಾಸಿಗಳು ನದಿಯಿಂದ ನೀರನ್ನು ಹೊತ್ತು ತಂದು ಬಳಸಬೇಕಿದೆ.
ಅಂಬಾತೀರ್ಥ,ಮುಮ್ಮಗೆ ಮತ್ತು ಆಸುಪಾಸಿನ ಕುಟುಂಬಗಳಿಗೆ ನೀರು ಪೂರೈಸಲು ಇಲ್ಲಿ ಟ್ಯಾಂಕ್ ನಿರ್ಮಿಸಿ ವರ್ಷಗಳೇ ಕಳೆದಿವೆ. ಆದರೆ, ಗ್ರಾಮ ಪಂಚಾಯಿತಿ ವತಿಯಿಂದ ಈ ಟ್ಯಾಂಕ್‌ಗೆ ನೀರು ಪೂರೈಸುವ ಕೆಲಸ ಆಗಿಲ್ಲ.
‘ಅಂಬಾತೀರ್ಥ ಪ್ರದೇಶದಲ್ಲಿ ಎರಡು ದಶಕಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಆದರೆ, ಗ್ರಾಮ ಪಂಚಾಯಿತಿ ಆಡಳಿತ, ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸಲು ಸ್ಪಂದಿಸುತ್ತಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಅನ್ನಪೂರ್ಣಾ ಶ್ರೀಧರ್ ದೂರಿದರು.
ಇಲ್ಲಿನ ಬಡ ಕಾರ್ಮಿಕರು ಕೆಲಸ ಮುಗಿಸಿ ಬಂದು ಹೊಳೆಯಿಂದ ನೀರು ಹೊತ್ತು ತರುತ್ತಾರೆ. ಅವರ ಸಂಕಷ್ಟ ನಿವಾರಿಸಲು ಯಾರಿಗೂ ಬದ್ಧತೆ ಇಲ್ಲ ಎಂದು ಅವರು ಹೇಳಿದರು.
ನೀರಿನ ಸಮಸ್ಯೆ ಜತೆಗೆ ಹದಗೆಟ್ಟ ರಸ್ತೆ ಸಮಸ್ಯೆಯನ್ನೂ ಇಲ್ಲಿನ ನಿವಾಸಿಗಳು ಅನುಭವಿಸುತ್ತಿದ್ದಾರೆ. ರಸ್ತೆ ಸರಿ ಇಲ್ಲದ ಕಾರಣ ಆಟೊದವರು ಕೂಡ ಇಲ್ಲಿಗೆ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಾರೆ. ನೀರು ಮತ್ತು ರಸ್ತೆ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುತ್ತಾರೆ ಗಿರಿಜನರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.