ADVERTISEMENT

ಕೊಪ್ಪ: ಅಂಬೇಡ್ಕರ್ ಭವನದ ಜಾಗ ಖಾಸಗಿ ವ್ಯಕ್ತಿಗೆ ಮಂಜೂರು

ಕೊಪ್ಪ ತಾಲ್ಲೂಕು ಪರಿಶಿಷ್ಟ ಜಾತಿ, ಪಂಗಡದವರ ಕುಂದುಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:24 IST
Last Updated 22 ಜುಲೈ 2025, 4:24 IST
ಕೊಪ್ಪ ತಹಶೀಲ್ದಾರ್ ಲಿಖಿತಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ಆಲಿಸುವ ಸಭೆ ನಡೆಯಿತು
ಕೊಪ್ಪ ತಹಶೀಲ್ದಾರ್ ಲಿಖಿತಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ಆಲಿಸುವ ಸಭೆ ನಡೆಯಿತು   

ಕೊಪ್ಪ: 'ಜಯಪುರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಮೀಸಲಿಟ್ಟಿದ್ದ ಜಾಗ ಒತ್ತುವರಿಯಾಗಿದೆ' ಎಂದು ಬಿಎಸ್ಪಿ ಮುಖಂಡ ಬೆಳಗೊಳ ಆನಂದ್ ಹೇಳಿದರು.

ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಲಿಖಿತಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ಆಲಿಸುವ ಸಭೆಯಲ್ಲಿ ಮಾತನಾಡಿದ ಆನಂದ್, 'ಆ ಜಾಗ ಒತ್ತುವರಿದಾರರಿಗೆ ಮಂಜೂರು ಕೂಡ ಆಗಿದೆ. ಸರ್ವೆ ಆಗಿ ಸ್ಕೆಚ್ ಆಗಿದ್ದ ಜಾಗ ಇನ್ನೊಬ್ಬರಿಗೆ ಹೇಗೆ ಮಂಜೂರು ಮಾಡಲಾಗಿದೆ. ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು' ಎಂದು ಒತ್ತಾಯಿಸಿದರು.

ಬಿಎಸ್ಪಿ ಮುಖಂಡ ಎ.ಜಿ.ಕಟ್ಟೆ ರಮೇಶ್, ಜೆಡಿಎಸ್ ಮುಖಂಡ ಕುಂಚೂರು ವಾಸಪ್ಪ ಮಾತನಾಡಿ, ‘ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಿ.ಜಿ ಕಟ್ಟೆಯಲ್ಲಿ ದಲಿತ ಮಹಿಳೆಯೊಬ್ಬರಿಗೆ ಮಂಜೂರು ಆಗಿದ್ದ ಜಮೀನು ಪಕ್ಕದಲ್ಲಿ ಕಾಲುವೆ ಮಾಡುವ ಸಂದರ್ಭ ಬಲಾಢ್ಯರು ಅಡ್ಡಿಪಡಿಸಿದ್ದರು. ಆಗ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಬಲಾಢ್ಯಯರ ಪರವಾಗಿ ಮಾತನಾಡಿ, ಮಹಿಳೆಗೆ ಸೇರಿದ ಜಮೀನು ಮಂಜೂರಾತಿ ರದ್ದುಪಡಿಸುವುದಾಗಿ ಧಮ್ಕಿ ಹಾಕಿದ್ದಾರೆ' ಎಂದು ಆರೋಪಿಸಿದರು.

ADVERTISEMENT

ಮುಖಂಡ ಬೆಳಗೊಳ ಆನಂದ್ ಮಾತನಾಡಿ, 'ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪೋಷಕರಿಗೆ ತಿಳಿಸಲು ಅವಕಾಶ ಕೊಡುತ್ತಿಲ್ಲ. ಇದು ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಸಮರ್ಪಕವಾಗಿ ಪೋಷಕರ ಸಭೆ ನಡೆಯುವಂತೆ ಹಾಗೂ ಹಾಸ್ಟೆಲ್ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆರಂಭಿಸಿರುವ ಆರಕ್ಷಕ ಗೆಳತಿ ಪೊಲೀಸರು ವಸತಿ ಶಾಲೆಗೆ ಆಗಾಗ ಭೇಟಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು' ಎಂದರು.

ಇದಕ್ಕೆ ಧ್ವನಿಗೂಡಿಸಿದ ಮುಖಂಡ ಕುಂಚೂರು ವಾಸಪ್ಪ, ‘ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಹಿಂದೆ ಬಾಲಕಿ ಮೃತಪಟ್ಟಾಗ ಅಧಿಕಾರಿಗಳು ಎಚ್ಚರಿಕೆ ಕ್ರಮ ವಹಿಸಿದ್ದರೆ ಇನ್ನೊಬ್ಬಳು ಬಾಲಕಿ ಸಾವನ್ನು ತಪ್ಪಿಸಬಹುದಿತ್ತು' ಎಂದರು.

ತಹಶೀಲ್ದಾರ್ ಲಿಖಿತಾ ಮೋಹನ್ ಮಾತನಾಡಿ, 'ವಸತಿ ಶಾಲೆಗಳ ಬಳಿ ಬೀಟ್ ಪೊಲೀಸ್ ಆಗಾಗ ಭೇಟಿ ನೀಡಬೇಕು' ಎಂದು ಸೂಚಿಸಿದರು.

ಡಿಎಸ್ಎಸ್ ಮುಖಂಡ ರಾಜಶಂಕರ್ ಮಾತನಾಡಿ, 'ಹಿರೇಕೊಡಿಗೆ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಹುದ್ದೆಗೆ ಪರಿಶಿಷ್ಟ ಜಾತಿ ಮಹಿಳೆಯನ್ನು ನೇಮಿಸಿಕೊಳ್ಳುವ ಬದಲಾಗಿ ಸಾಮಾನ್ಯ ಮಹಿಳೆಗೆ ಅವಕಾಶ ಕಲ್ಪಿಸಿ ನಡಾವಳಿ ತಿದ್ದುಪಡಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು' ಎಂದು ತಹಶೀಲ್ದಾರ್ ಲಿಖಿತಾ ಮೋಹನ್ ಹಾಗೂ ತಾಲ್ಲೂಕು ಪಂಚಾಯಿತಿ ಇಒ ನವೀನ್ ಕುಮಾರ್ ಅವರನ್ನು ಒತ್ತಾಯಿಸಿದರು.

ಡಿಎಸ್ಎಸ್ ಮುಖಂಡ ಕವಡೆಕಟ್ಟೆ ರವೀಂದ್ರ ಮಾತನಾಡಿ, 'ಹಿರೇಕೊಡಿಗೆ ಗ್ರಾಮದ ಶೆಟ್ಟಿಹಡ್ಲು ನಿವಾಸಿ ಸುಶ್ಮಿತಾ ಹರೀಶ್ ಅವರ ಮನೆ ಮಳೆಯಿಂದ ಬಿದ್ದಿದೆ. ಅವರಿಗೆ ಪರಿಹಾರ ಮತ್ತು ವಸತಿ ಮಂಜೂರು ಮಾಡಬೇಕು' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಲಿಖಿತಾ ಮೋಹನ್, 'ಉಪ ಗ್ರಾಮದಡಿ ಸಾಗುವಳಿ ಚೀಟಿ ಕೊಡಲು ಅವಕಾಶವಿದೆ' ಎಂದರು. ಆಗ ಗ್ರಾಮ ಲೆಕ್ಕಾಧಿಕಾರಿ ನೇಸರ ಮಾತನಾಡಿ, 'ಕಳೆದ 8 ವರ್ಷಗಳಿಂದ ಅಲ್ಲಿ ವಾಸವಿದ್ದರು, ಸಂಪೂರ್ಣ ಮುರಿದು ಬಿದ್ದಿದೆ ವರದಿ ಸಲ್ಲಿಸಿದ್ದೇವೆ. ಪರಿಹಾರ ಕೊಡಬಹುದು' ಎಂದರು.

'ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಗ್ಗುಂಜಿ ರಸ್ತೆಯಲ್ಲಿರುವ ಸೇತುವೆ ಬಿರುಕುಬಿಟ್ಟಿದೆ. ಶಾಲಾ ಮಕ್ಕಳು, ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ' ಎಂದು ಉತ್ತಮೇಶ್ವರದ ವಿಜೇಂದ್ರ, ಯಶೋಧ ಎಂಬುವರು ಸಭೆಯ ಗಮನಕ್ಕೆ ತಂದರು.

ಮುಖಂಡ ಮರಿಯಪ್ಪ ಮಾತನಾಡಿ, 'ಬಸರಿಕಟ್ಟೆ, ಶಾಂತಿಗ್ರಾಮ ಆಸ್ಪತ್ರೆಗೆ ಆರೋಗ್ಯ ಸಿಬ್ಬಂದಿ ನೇಮಿಸಬೇಕು. ಆಶ್ರಮ ಶಾಲೆ ಮಕ್ಕಳ ಅರೋಗ್ಯ ಕಾಳಜಿಗೆ ಒತ್ತು ಕೊಡಬೇಕು' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ, 'ಮಲೆನಾಡಿನಲ್ಲಿ ಸೇವೆ ಸಲ್ಲಿಸಲು ಯಾರೂ ಮುಂದೆ ಬರುತ್ತಿಲ್ಲ. ಈ ಹಿಂದೆ ಸಂಚಾರಿ ಮೊಬೈಲ್ ಸೇವೆ ಇತ್ತು. ಆಗ ಜನರಿಗೆ ಅನುಕೂಲವಾಗಿತ್ತು' ಎಂದರು.

ಬಾರ್‌ಗಳಲ್ಲಿ ಸಮಯವಲ್ಲದ ಸಮಯದಲ್ಲಿ ಕೆಲವು ಕಡೆ ಹಿಂಬಾಗಿಲಿನಿಂದ ಮದ್ಯ ಮಾರಾಟ ಹಾಗೂ ಅಕ್ರಮವಾಗಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಕೆಲವರು ಸಭೆಯ ಗಮನಕ್ಕೆ ತಂದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಡಿ. ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತೀಶ್, ವಿವಿಧ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿದ್ದರು.

ಬಡವರಿಗೆ ಭೂಮಿ ಮಂಜೂರು ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಒಪ್ಪಿಗೆಗೆ ಸಾಕಷ್ಟು ಕಡತ ರವಾನೆಯಾಗಿದೆ. ಈ ಭಾಗದಲ್ಲಿ ಅರಣ್ಯ ತೊಡಕು ಹೆಚ್ಚಿದೆ. ತೊಡಕು ಇಲ್ಲದ್ದನ್ನು ಮೊದಲ ಆದ್ಯತೆ ನೀಡಿ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡಲಾಗುವುದು
ಲಿಖಿತಾ ಮೋಹನ್ ಕೊಪ್ಪ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.