ADVERTISEMENT

ಬೀರೂರು ಉಪ ವಿಭಾಗದ ಮೆಸ್ಕಾಂ ಜನಸಂಪರ್ಕ ಸಭೆ: ದುರಸ್ತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 4:26 IST
Last Updated 1 ಡಿಸೆಂಬರ್ 2022, 4:26 IST
ಬೀರೂರಿನಲ್ಲಿ ಬುಧವಾರ ಮೆಸ್ಕಾಂ ಜನ ಸಂಪರ್ಕ ಸಭೆ ನಡೆಯಿತು
ಬೀರೂರಿನಲ್ಲಿ ಬುಧವಾರ ಮೆಸ್ಕಾಂ ಜನ ಸಂಪರ್ಕ ಸಭೆ ನಡೆಯಿತು   

ಬೀರೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಟುಂಬಕ್ಕೆ ತಿಂಗಳಿಗೆ 75 ಯುನಿಟ್ ಉಚಿತ ವಿದ್ಯುತ್ ಪೂರೈಸುವ ‘ಅಮೃತ್ ಜ್ಯೋತಿ’ ಯೋಜನೆಗೆ ಬೀರೂರು ಉಪವಿಭಾಗದಲ್ಲಿ 678 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮೆಸ್ಕಾಂ ಕಿರಿಯ ಎಂಜಿನಿಯರ್ ಜೆ.ಟಿ.ರಮೇಶ್ ತಿಳಿಸಿದರು.

ಮೆಸ್ಕಾಂ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಅರ್ಜಿ ಸಲ್ಲಿಸಲು ಇನ್ನೂ ಅವಕಾಶ ಇದೆ. ಸಮಾಜ ಕಲ್ಯಾಣ ಇಲಾಖೆಯ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ. ಕಡು ಬಡವರಿಗೆ ಉಚಿತ ಸಂಪರ್ಕ ಕಲ್ಪಿಸುವ ‘ಬೆಳಕು’ ಯೋಜನೆಯಡಿ 102 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ ದಾಖಲೆ ಸರಿ ಇರದ 4 ಅರ್ಜಿಗಳು ತಿರಸ್ಕೃತವಾಗಿವೆ ಎಂದರು.

ADVERTISEMENT

ಒಂದೇ ಪರಿವರ್ತಕದಿಂದ 28 ಕೊಳವೆ ಬಾವಿಗಳಿಗೆ ಸಂಪರ್ಕ ನೀಡಿದ್ದು, ಸಮರ್ಪಕ ವಿದ್ಯುತ್ ಲಭಿಸುತ್ತಿಲ್ಲ ಎಂದುಮುಗಳಿಕಟ್ಟೆಯ ಗ್ರಾಹಕ ಪಾರ್ಥಸಾರಥಿ ಹಾಗೂ ಜೋಡಿ ತಿಮ್ಮಾಪುರದ ಓಂಕಾರಪ್ಪ ಅಳಲು ತೋಡಿಕೊಂಡರು.

ಇನ್ನೆರಡು ದಿನಗಳಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ನಂತರ, ಪರಿಹಾರ ನೀಡಲಾಗುವುದು ಎಂದು ರಮೇಶ್ ಭರವಸೆ ನೀಡಿದರು.

ವಿದ್ಯುತ್ ಕಂಬ ವಾಲಿದ್ದು, ಸರಿಪಡಿಸಬೇಕು. ಪಂಪ್‌ಸೆಟ್‌ಗೆ ಸಂಪರ್ಕ ಕಲ್ಪಿಸಬೇಕು ಎಂದು ಜೋಡಿತಿಮ್ಮಾಪುರದ ಶೇಷಪ್ಪ ಮನವಿ ಮಾಡಿದರು.

ಗ್ರಾಮಕ್ಕೆ ನಿರಂತರ ಜ್ಯೋತಿ ಪರಿವರ್ತಕದಿಂದ ವಿದ್ಯುತ್ ಸರಬರಾಜು ಮಾಡುವಂತೆ ಗಾಳಿಹಳ್ಳಿ ಗ್ರಾಮದ ಹಾಲಪ್ಪ ಕೋರಿದರೆ, ತಮ್ಮ ಜಮೀನಿನಲ್ಲಿ ಹಾಕಿರುವ ಕಂಬಗಳನ್ನು ಸ್ಥಳಾಂತರಿಸುವಂತೆ ಷಡಕ್ಷರಪ್ಪ ಹೇಳಿದರು.

ರಮೇಶ್ ಉತ್ತರಿಸಿ, ಗಾಳಿಹಳ್ಳಿದಲ್ಲಿ ಸಮರ್ಪಕವಾಗಿಯೇ ವಿದ್ಯುತ್ ಪೂರೈಸಲಾಗುತ್ತಿದೆ. ಸ್ಥಳ ಪರಿಶೀಲಿಸಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಗಿರಿಯಾಪುರ ಗ್ರಾಮದಲ್ಲಿ ಕಂಬಗಳಿಂದ ಸಮಸ್ಯೆ ಉದ್ಭವಿಸಿಲ್ಲ. ಜಮೀನಿನ ಬದುವಿನಲ್ಲಿ ಕಂಬ ಅಳವಡಿಸಲಾಗಿದೆ’ ಎಂದರು.

ಯಗಟಿ ಪ್ರಭಾರ ಸಹಾಯಕ ಎಂಜಿನಿಯರ್ ರಮೇಶ್, ಹಿರೇನಲ್ಲೂರು ಸಹಾಯಕ ಎಂಜಿನಿಯರ್ ಕಿಶೋರ್, ಬೀರೂರು ಕಂದಾಯ ಶಾಖೆಯ ಪ್ರಭಾಕರ್, ಸುಧಾ ಹಾಗೂ ಗ್ರಾಹಕರಾದ ನವೀನ್, ರವಿಕುಮಾರ್, ಹರೀಶ್, ಬಿ.ಟಿ.ಚಂದ್ರಶೇಖರ್, ಜಗದೀಶ್, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.