ADVERTISEMENT

ಅಮೃತ್ ಮಹಲ್: ಜೋಡಿಕರು ₹1.71 ಲಕ್ಷಕ್ಕೆ ಹರಾಜು

ಬೀರೂರಿನ ಅಮೃತ ಮಹಲ್‌ ತಳಿ ಸಂರ್ಧನಾ ಕೇಂದ್ರದಲ್ಲಿ ಮೂರು ವರ್ಷಗಳ ಬಳಿ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 13:52 IST
Last Updated 28 ಡಿಸೆಂಬರ್ 2022, 13:52 IST
 ಬೀರೂರಿನ ದೇವರಾಜ ಅರಸು ಅಮೃತ ಮಹಲ್‌ ತಳಿಸಂವರ್ಧನಾ ಕೇಂದ್ರದಲ್ಲಿ ಬುಧವಾರ ಹರಾಜು ಅಧಿಕಾರಿಗಳೊಂದಿಗೆ ರೈತರು ವಾಗ್ವಾದ ನಡೆಸಿದರು.
 ಬೀರೂರಿನ ದೇವರಾಜ ಅರಸು ಅಮೃತ ಮಹಲ್‌ ತಳಿಸಂವರ್ಧನಾ ಕೇಂದ್ರದಲ್ಲಿ ಬುಧವಾರ ಹರಾಜು ಅಧಿಕಾರಿಗಳೊಂದಿಗೆ ರೈತರು ವಾಗ್ವಾದ ನಡೆಸಿದರು.   

ಬೀರೂರು: ಇಲ್ಲಿನ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ಬುಧವಾರ ಜೋಡಿ ಕರು ₹1.71 ಲಕ್ಷಕ್ಕೆ ಹರಾಜುಗೊಂಡಿತು.

ವಾರ್ಷಿಕ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಹಾವೇರಿ ಜಿಲ್ಲೆ ಹಿರೇಕೆರೂರು ಬುರಡೀಕಟ್ಟೆಯ ಯಶೋಧರ ಯಲ್ಲಪ್ಪ ಲಿಂಗದಹಳ್ಳಿ ಅವರು ಮೊದಲ ಜೋಡಿಯಾಗಿ ಪಣಕ್ಕಿದ್ದ ಎಲ್‌1970 ನಾಮಧಾರಿ ಮತ್ತು ಎಲ್‌1921 ಬೆಳ್ಳಿಗೆಜ್ಜೆ ಕರುಗಳನ್ನು ಈ ಮೊತ್ತಕ್ಕೆ ತಮ್ಮದಾಗಿಸಿಕೊಂಡರು.

ಚಿಕ್ಕೆಮ್ಮಿಗನೂರು ಫಾರಂನಿಂದ ತರಲಾಗಿದ್ದ ಸಿ1962 ಗಾಳಿಕೆರೆ ಸಿ1920 ಚನ್ನಬಸವಿ ಜೋಡಿ ಕರುಗಳನ್ನು ₹1.6 ಲಕ್ಷಕ್ಕೆ ಶಿಕಾರಿಪುರದ ಕೊಳಗಿ ಗ್ರಾಮದ ನಾಗಪ್ಪ ಖರೀದಿಸಿದ್ದು, ಎರಡನೇ ಅತಿಹೆಚ್ಚಿನ ಮೊತ್ತದ ಬಿಡ್‌ ಆಗಿತ್ತು. ಒಟ್ಟು 226 ಕರುಗಳು, 11 ಬೀಜದ ಹೋರಿಗಳು ಮತ್ತು 5 ಎತ್ತುಗಳನ್ನು ಹರಾಜಿಗೆ ಒಳಪಡಿಸಲಾಗಿತ್ತು.

ADVERTISEMENT

ಎರಡು ವರ್ಷಗಳಿಂದ ಕೋವಿಡ್‌ ಮತ್ತು ರೈತರೊಬ್ಬರು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದ ಕಾರಣ ಹರಾಜು ಪ್ರಕ್ರಿಯೆ ನಡೆದಿರಲಿಲ್ಲ. ತಡೆಯಾಜ್ಞೆ ತೆರವಾದ ಕಾರಣ ಬುಧವಾರ ಹರಾಜು ನಡೆಸಲಾಯಿತು. ಲಿಂಗದಹಳ್ಳಿ, ಬೀರೂರು, ಹಬ್ಬನಘಟ್ಟ, ರಾಮಗಿರಿ, ಅಜ್ಜಂಪುರ, ಬಾಸೂರು, ಚಿಕ್ಕಎಮ್ಮಿಗನೂರು, ರಾಯಸಂದ್ರ ಅಮೃತ ಮಹಲ್ ಫಾರಂಗಳಿಂದ ತರಲಾಗಿದ್ದ ಕರುಗಳನ್ನು ಹರಾಜು ಪ್ರಕ್ರಿಯೆಯಲ್ಲಿ ರೈತರು ಖರೀದಿಸಿದರು.

ಚಳ್ಳಕೆರೆ, ಸೊರಬ, ಶಿಕಾರಿಪುರ, ಶಿವಮೊಗ್ಗ, ಹಾವೇರಿ, ಹಿರೇಕೆರೂರು, ಚಿತ್ರದುರ್ಗ, ಮಂಡ್ಯ, ಹಾಸನ, ಬ್ಯಾಡಗಿ, ಶಿರಾಳಕೊಪ್ಪ ಮುಂತಾದ ಕಡೆಗಳಿಂದ ರೈತರು ಬಂದಿದ್ದರು.

ಮಧ್ಯಾಹ್ನ ಕೆಲವು ಕರುಗಳನ್ನು ₹60 ಸಾವಿರಕ್ಕೆ ಆರಂಭಿಕ ಬಿಡ್ ಮಾಡಿದ್ದನ್ನು ₹30 ಸಾವಿರಕ್ಕೆ ಇಳಿಸುವಂತೆ ಬಿಡ್‌ದಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸ್ವಲ್ಪ ಸಮಯ ಗೊಂದಲದ ವಾತಾವರಣ ಮೂಡಿತ್ತು.

‘ ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರವು ನಿಗದಿ ಮಾಡಿರುವ ಆರಂಭಿಕ ಮೊತ್ತ. ಅಗತ್ಯವಿಲ್ಲದಿದ್ದಲ್ಲಿ ಬಿಡ್ ಮಾಡಬೇಡಿ. ನಿಮಗೆ ಅಗತ್ಯ ಇರದಿದ್ದರೆ ಕರುಗಳನ್ನು ಫಾರಂನಲ್ಲಿಯೇ ಉಳಿಸಕೊಳ್ಳಲಾಗುವುದು’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ ಬಳಿಕ ಬಿಡ್‌ ಮುಂದುವರಿಯಿತು.

ಹರಾಜು ಪ್ರಕ್ರಿಯೆಯಲ್ಲಿ ಪಶುಸಂಗೋಪನಾ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ಡಾ.ವೀರಭದ್ರಪ್ಪ, ಬೆಂಗಳೂರಿನ ಹೆಚ್ಚುವರಿ ನಿರ್ದೇಶಕ ಡಾ.ಶಿವರುದ್ರಪ್ಪ ಪಾಲ್ಗೊಂಡರು. ಬೆಂಗಳೂರಿನ ಡಾ.ಕೃಷ್ಣಪ್ಪ ಹರಾಜು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಕೆ.ಟಿ.ನವೀನ್‌, ಡಾ.ಎಸ್‌.ಬಿ.ಉಮೇಶ್‌, ಡಾ.ಶಶಿಕುಮಾರ್‌, ಬೀರೂರಿನ ಪಶುವೈದ್ಯಾಧಿಕಾರಿ ಡಾ.ಮೋಹನ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.