ಮೂಡಿಗೆರೆ (ಚಿಕ್ಕಮಗಳೂರು): ‘ಜೀವನಕ್ಕೆ ಆಸರೆಯಾಗಿದ್ದ ಜಮೀನನ್ನು ಸರ್ಫೆಸಿ ಕಾಯ್ದೆಯಡಿ ಬ್ಯಾಂಕ್‌ನವರು ಹರಾಜು ಮಾಡಿರುವುದರಿಂದ ದಯಾಮರಣಕ್ಕೆ ಅವಕಾಶ ನೀಡಬೇಕು’ ಎಂದು ರೈತ ಡಿ.ಆರ್.ವಿಜಯ ಅವರು ಪತ್ನಿಯೊಂದಿಗೆ ಶುಕ್ರವಾರ ತಹಶೀಲ್ದಾರ್ ರಾಜಶೇಖರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಆರ್.ವಿಜಯ, ‘ತಾಲ್ಲೂಕಿನ ಕೆಲ್ಲೂರು ಗ್ರಾಮದ ಸ.ನಂ 40/2ರಲ್ಲಿ ನನ್ನ ಹೆಸರಿನಲ್ಲಿ 4 ಎಕರೆ ಕಾಫಿ ತೋಟದ ದಾಖಲೆ ನೀಡಿ ₹ 25.90 ಲಕ್ಷ ಹಾಗೂ ಪತ್ನಿ ಎಚ್.ಎನ್.ಪಾರ್ವತಿ ಹೆಸರಲ್ಲಿ ಕೆಲ್ಲೂರು ಗ್ರಾಮದ ಸ.ನಂ 40/1ರಲ್ಲಿ 3.39 ಎಕರೆ ಜಮೀನಿನ ಮೇಲೆ ₹ 6 ಲಕ್ಷ ಕೃಷಿ ಸಾಲ ಮಾಡಿದ್ದೆವು. ಬೆಳೆನಷ್ಟ, ಬೆಲೆ ಏರಿಳಿತ, ಕೋವಿಡ್ ಸಂಕಷ್ಟ, ಹವಾಮಾನ ವೈಪರೀತ್ಯ, ಕಾಡುಪ್ರಾಣಿಗಳ ಹಾವಳಿಯಿಂದಾಗಿ ಸಕಾಲದಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. 2024ರಲ್ಲಿ ₹ 5.30 ಲಕ್ಷ ಪಾವತಿ ಮಾಡಲಾಗಿದ್ದು, ಸಾಲ ಮರುಪಾವತಿಸಲು ಕಾಲಾವಕಾಶ ನೀಡುತ್ತೇವೆ ಎಂದು ಬ್ಯಾಂಕ್‍ನವರು ತಿಳಿಸಿದ್ದರು’ ಎಂದರು.
‘ಆದರೆ, ಬ್ಯಾಂಕ್‍ನವರು ನಮ್ಮ ಗಮನಕ್ಕೆ ತರದೆ ₹ 3 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಸರ್ಫೆಸಿ ಕಾಯ್ದೆಯಡಿ ಕೇವಲ ₹ 89.50 ಲಕ್ಷಕ್ಕೆ ಆನ್‍ಲೈನ್ ಮೂಲಕ ಹರಾಜು ಮಾಡಿ, ಬೆಂಗಳೂರಿನವರಿಗೆ ನೀಡಿದ್ದಾರೆ. ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ. ನಮಗೆ ಈ ಜಮೀನು ಬಿಟ್ಟರೆ ಬೇರೆ ಜೀವನ ಮಾರ್ಗವಿಲ್ಲ. ನಾವು ಈಗಾಗಲೇ ಹಿರಿಯ ನಾಗರಿಕರಾಗಿದ್ದು, ಬೇರೆ ದುಡಿಮೆಯ ದಾರಿ ತೋಚುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.
ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್‍ಕುಮಾರ್ ಮಾತನಾಡಿ, ‘ಸರ್ಫೆಸಿ ಕಾಯ್ದೆಯಿಂದ ತೊಂದರೆ ಅನುಭವಿಸಿ ದಯಾಮರಣ ಕೋರಿರುವ ಘಟನೆ ಜಿಲ್ಲೆಯಲ್ಲೇ ಮೊದಲನೆಯದ್ದಾಗಿದೆ. ಸರ್ಫೆಸಿ ಕಾಯ್ದೆಯಿಂದ ಸಮಸ್ಯೆಗೀಡಾದ 2,700 ರೈತರು ಜಿಲ್ಲೆಯಲ್ಲಿ ಇದ್ದಾರೆ. ಅದರಲ್ಲಿ 400 ರೈತರು ಸಾಲ ಮರುಪಾವತಿ ಮಾಡಿದ್ದು, ಉಳಿದ 2,300 ರೈತರು ಜಮೀನು ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಬ್ಯಾಂಕ್‍ನವರು ಈ ಕಾಯ್ದೆ ಹೆಸರಿನಲ್ಲಿ ಹರಾಜು ಮಾಡಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಕಡಿಮೆ ಮೊತ್ತದಲ್ಲಿ ಭೂಮಾಲೀಕರಿಗೆ ಜಮೀನು ಒದಗಿಸುವ ತಂತ್ರ ನಡೆಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಈ ಕಾಯ್ದೆ ರದ್ದುಪಡಿಸಿ ರೈತರ ನೆರವಿಗೆ ಬರಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.