
ಚಿಕ್ಕಮಗಳೂರು: ವಿಶ್ವಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಸೇನೆ ವತಿಯಿಂದ ಆಯೋಜಿಸಿರುವ ದತ್ತ ಜಯಂತಿ ಉತ್ಸವದ ಆರಂಭದ ದಿನವಾದ ಮಂಗಳವಾರ ಅನಸೂಯ ದೇವಿ ಸಂಕೀರ್ತನಾ ಯಾತ್ರೆ ನಡೆಯಿತು.
ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಸಮಾವೇಶಗೊಂಡ ಅಪಾರ ಸಂಖ್ಯೆಯ ಮಹಿಳೆಯರು ಬಹಿರಂಗ ಧಾರ್ಮಿಕ ಸಭೆ ನಡೆಸಿದರು.
ಆದಿಶಕ್ತಿ ನಗರದ ಶುಭವ್ರತಾಪ್ರಾಣ ಮಾತಾಜಿ, ಹುಬ್ಬಳ್ಳಿಯ ತೇಜೋಮಯಿ ಮಾತಾಜಿ ದತ್ತಾತ್ರೇಯ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ನಗರ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿದರು.
ವಿವಿಧ ಕಲಾ ತಂಡಗಳೊಂದಿಗೆ ನೂರಾರು ಮಹಿಳೆಯರು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ದತ್ತಾತ್ರೇಯ ವಿಗ್ರಹದ ಅಡ್ಡೆಯನ್ನು ಹೊತ್ತು ತರಲಾಯಿತು. ಕೇಸರಿ ಶಲ್ಯ ಮತ್ತು ಪೇಟ ಧರಿಸಿದ್ದ ಮಹಿಳೆಯರು ಸಾಮೂಹಿಕವಾಗಿ ಭಜನೆ ಹಾಡಿದರು.
ಶಿವಮೊಗ್ಗ, ಚಿಕ್ಕೋಡಿ, ಹಾವೇರಿ, ಮೈಸೂರು, ಹಾಸನ, ಕೊಡಗು, ಹುಬ್ಬಳಿ, ಚಾಮರಾಜನಗರ, ತೀರ್ಥಹಳ್ಳಿ ಸೇರಿ ಹಲವು ಜಿಲ್ಲೆಗಳಿಂದ ಬಂದಿದ್ದ ಮಹಿಳೆಯರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಕೆ.ಎಂ.ರಸ್ತೆ, ಇಂದಿರಾಗಾಂಧಿ ರಸ್ತೆ, ಆರ್.ಜಿ. ರಸ್ತೆ ಮೂಲಕ ಪಾಲಿಟೆಕ್ನಿಕ್ ಆವರಣದ ತನಕ ಯಾತ್ರ ಸಾಗಿತು. ಅಲ್ಲಿಂದ ಮಹಿಳೆಯರು ವಾಹನದ ಮೂಲಕ ದತ್ತಪೀಠಕ್ಕೆ ತೆರಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್ ಪೈ, ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜಶೆಟ್ಟಿ, ಮುಖಂಡರಾದ ದೀಪಕ್ ದೊಡ್ಡಯ್ಯ, ಜಗನ್ನಾಥಶಾಸ್ತ್ರಿ, ಶ್ಯಾಮ್ ವಿ.ಗೌಡ, ವೈದ್ಯೆ ಡಾ.ವೀಣಾ, ದುರ್ಗಾ ವಾಹಿನಿ ಪ್ರಾಂತ ಸಂಯೋಜಕಿ ಪಾರ್ವತಿ, ಪ್ರಾಂತ ಮಾತೃಶಕ್ತಿ ಪ್ರಮುಕ್ ಶುಭಾ, ದಕ್ಷಿಣ ಪ್ರಾಂತ ಸತ್ಸಂಗ ಪ್ರಮುಖ ಕಲಾವತಿ ಮಧುಸೂದನ್, ವಿಎಚ್‌ಪಿ ಪ್ರಾಂತ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಪಲ್ಲವಿ ಸಿ.ಟಿ.ರವಿ, ಅಂಕಿತಾ, ಪುಷ್ಪಾಂಜಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಂದೋಬಸ್ತ್: ಸಂಕೀರ್ತನಾ ಯಾತ್ರೆ ಉದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಎನ್‌ಎಂಸಿ ವೃತ್ತ, ಶೃಂಗಾರ್ ಸರ್ಕಲ್ ಭಾಗದಲ್ಲಿ ಸಂಚಾರ ದಟ್ಟಣೆಯಾಗಿತ್ತು. ವಾಹನ ಹಾಗೂ ಜನಸಂಚಾರಕ್ಕೆ ತೊಂದರೆಯಾಗದಂತೆ ಸಂಚಾರ ಪೊಲೀಸರು ಕ್ರಮ ವಹಿಸಿದರು. ದೇವಸ್ಥಾನ, ಮಸೀದಿ ಮಂದಿರಗಳಲ್ಲಿ ಖಾಕಿ ಕಾವಲು ಹಾಕಲಾಗಿತ್ತು.
‘ಅನುಸೂಯ ದೇವಿ ಜೀವನವೇ ಮಾರ್ಗದರ್ಶಿ’
‘ಅನುಸೂಯ ದೇವಿಯ ಜೀವನ ಚರಿತ್ರೆ ಮಹಿಳೆಯರಿಗೆ ಮಾರ್ಗದರ್ಶನವಾಗಲಿ’ ಎಂದು ಹೃದಯ ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳಕುಂದ್ರಿ ಹೇಳಿದರು. ಸಂಕೀರ್ತನಾ ಯಾತ್ರೆಗೂ ಮುನ್ನ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಸತಿ ಅನುಸೂಯ ದೇವಿ ಅತ್ರೇಯ ಮಹರ್ಷಿಗಳ ಧರ್ಮಪತ್ನಿ. ದತ್ತಾತ್ರೇಯ ದುರ್ವಾಸ ಮುನಿ ಮತ್ತು ಚಂದ್ರರಿಗೆ ಜನ್ಮ ನೀಡಿದ ಮಹಾತಾಯಿ. ಅನುಸೂಯ ದೇವಿಯದು ಪುರಾಣ ಕಥೆ ಎಂದರೂ ಮಹಿಳೆಯರಿಗೆ ಮಾರ್ಗದರ್ಶನ ಮಾಡುವ ವಿಶಿಷ್ಟ ಶಕ್ತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ವೀಣಾ ಮಾತನಾಡಿ ‘ಹಿಂದೂಗಳು ಒಗ್ಗಟ್ಟಾಗಲು ಅನುಸೂಯ ಜಯಂತಿ ಕಾರ್ಯಕ್ರಮ ಸುಸಮಯ. ಹಿಂದೂಗಳಲ್ಲಿ ಅನೇಕ ಪಂಗಡಗಳು ಈಗ ಹುಟ್ಟಿಕೊಂಡಿದ್ದು ಅವರದ್ದೇ ಆದ ಆಚರಣೆ ಮಾಡಲು ಹೊರಟಿದ್ದಾರೆ. ಇದು ಹಿಂದೂ ಧರ್ಮದ ವಿಘಟನೆಗೆ ಕಾರಣವಾಗಿದೆ’ ಎಂದರು.
ದತ್ತಪೀಠದಲ್ಲಿ ಪೂಜೆ
ಹೋಮ ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಸಿದ ಮಹಿಳೆಯರು ಪಾಲಿಟೆಕ್ನಿಕ್ ಆವರಣದಿಂದ ವಾಹನದಲ್ಲಿ ಗಿರಿಯತ್ತ ಪ್ರಯಾಣ ಬೆಳೆಸಿದರು. ಹೊನ್ನಮ್ಮನ ಹಳ್ಳದಲ್ಲಿ ಕೆಲವರು ಮಿಂದೆದ್ದು ನಂತರ ದತ್ತಪೀಠದತ್ತ ಸಾಗಿದರು. ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ಸರತಿಯಲ್ಲಿ ಸಾಗಿ ದರ್ಶನ ಪಡೆದರು. ಗುಹೆಯ ಹೊರಭಾಗದ ಶೆಡ್‌ನಲ್ಲಿ ಹೋಮ– ಹವನದಲ್ಲಿ ಭಾಗವಹಿಸಿದರು. ಭಕ್ತರಿಗೆ ಪ್ರಸಾದ ರೂಪದಲ್ಲಿ ಲಾಡು ವಿತರಿಸಲಾಯಿತು.
ಶೋಭಾಯಾತ್ರೆ ಇಂದು
ದತ್ತ ಜಯಂತಿ ಅಂಗವಾಗಿ ಶೋಭಾಯಾತ್ರೆ ಬುಧವಾರ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಕಾಮಧೇನು ಗಣಪತಿ ದೇವಾಲಯದಿಂದ ಎಂ.ಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೂ ಯಾತ್ರೆ ಸಾಗಲಿದೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಗುರುವಾರ ಭಕ್ತರು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ಪಾದುಕೆ ದರ್ಶನ ಪಡೆಯುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.