ADVERTISEMENT

ಕಲ್ಲಿಗೆ ಭಾವ ತುಂಬುವ ಕರ್ಮಯೋಗಿ

ತಮ್ಮಟದಹಳ್ಳಿಯ ವಿಶ್ವಕರ್ಮ ಶಿಲ್ಪ ಕಲಾ ಕೇಂದ್ರದ ಮಧು ಆಚಾರ್‌

ಜೆ.ಒ.ಉಮೇಶ್ ಕುಮಾರ್
Published 25 ಡಿಸೆಂಬರ್ 2022, 6:28 IST
Last Updated 25 ಡಿಸೆಂಬರ್ 2022, 6:28 IST
ಶಿಲ್ಪ ಕೆತ್ತನೆಯಲ್ಲಿ ಮಧು ಆಚಾರ್‌
ಶಿಲ್ಪ ಕೆತ್ತನೆಯಲ್ಲಿ ಮಧು ಆಚಾರ್‌   

‘ಕಾಲ ಬದಲಾದರೂ, ಮೂರ್ತಿ ಶಿಲ್ಪದ ಮೇಲಿನ ಜನರ ಆಕರ್ಶಣೆ ಕುಸಿದಿಲ್ಲ. ಇಂದಿಗೂ, ದೋಷವಿಲ್ಲದ, ಸೂಕ್ಷ್ಮ ಕೆತ್ತನೆಯ, ಸುಂದರ ವಿಗ್ರಹಗಳಿಗೆ ಬೇಡಿಕೆ ಇದೆ’

- ಇದು 18 ವರ್ಷಗಳಿಂದ ತಾಲ್ಲೂಕಿನ ತಮ್ಮಟದಹಳ್ಳಿಯ ವಿಶ್ವಕರ್ಮ ಶಿಲ್ಪ ಕಲಾ ಕೇಂದ್ರ ತೆರೆದು, ತರಬೇತಿ ನೀಡುತ್ತಿರುವ ಮತ್ತು ಶಿಲ್ಪ ಕೆತ್ತನೆ ಮೂಲಕ ಮನೆಮಾತಾಗಿರುವ ಮಧು ಆಚಾರ್ ಅಭಿಪ್ರಾಯ.

ಹತ್ತನೇ ತರಗತಿವರೆಗೆ ಕಲಿತಿರುವ ಅವರು, ತಂದೆ ಪುಟ್ಟ ನಾಗಾಚಾರ್ ಅವರ ಶಿಲ್ಪಕಲೆಯಿಂದ ಇತ್ತ ಒಲವು ಬೆಳಸಿಕೊಂಡರು. ಬೆಂಗಳೂರಿನ ಕೆಪಿಜೆ ಪ್ರಭಾಕರ್ ಕರಕುಶಲ ತರಬೇತಿ ಕೇಂದ್ರದಲ್ಲಿ ತರಬೇತುಗೊಂಡವರು. ಅಣ್ಣ ಚಂದ್ರಶೇಖರಾಚಾರ್, ಕಂಚು, ಬೆಳ್ಳಿಯ ಪ್ರಭಾವಳಿ ರಚನೆಯಲ್ಲಿ ತೊಡಗಿದ್ದಾರೆ.

ADVERTISEMENT

ಗುಡಿ, ಗೋಪುರ, ದೇವರ ಆರಾಧನೆಯನ್ನು ಜನ ಕೈಬಿಟ್ಟಿಲ್ಲ. ಹೊಸ ದೇವಾಲಯ ನಿರ್ಮಾಣ, ಹಳೇ ದೇವಾಲಯ ನವೀಕರಣ ವೇಳೆ ಶಿಲ್ಪ ಸ್ಥಾಪನೆಗೆ ಆಸಕ್ತಿ ತೋರುತ್ತಾರೆ. ಇದು ಕಲ್ಲಿನ ವಿಗ್ರಹ ಬೇಡಿಕೆ ಅಧಿಕಗೊಳಿಸಿದೆ ಎನ್ನುತ್ತಾರೆ ಅವರು.

ಒಂದರಿಂದ ಏಳೂವರೆ ಅಡಿ ಎತ್ತರದ ಅನೇಕ ಮೂರ್ತಿ ಶಿಲ್ಪ ರಚಿಸಿದ್ದೇವೆ. ಕಾಳಿಕಾಂಬೆ, ಗಣೇಶ, ಅಂತರಘಟ್ಟಮ್ಮ ದೇವಿ, ಚೌಡೇಶ್ವರಿ ಅಮ್ಮ, ಆಂಜನೇಯ ಸ್ವಾಮಿ, ವೀರಭದ್ರಸ್ವಾಮಿ, ಈಶ್ವರ, ನಂದಿ, ನವ ಗ್ರಹ, ನಾಗ ದೇವತೆ … ಹೀಗೆ ಹತ್ತಾರು ವಿಗ್ರಹ ನಿರ್ಮಿಸಿದ್ದೇವೆ. ಜನ, ವೀರಾಂಜನೇಯ ಸ್ವಾಮಿ ಮತ್ತು ದೇವಿ(ಅಮ್ಮ) ನವರ ಕಲ್ಲಿನ ವಿಗ್ರಹದತ್ತ ಹೆಚ್ಚು ಆಸಕ್ತಿ ತೋರುತ್ತಾರೆ ಎನ್ನುತ್ತಾರೆ ಅವರು.

ಶಿಲ್ಪ ಕೆತ್ತನೆಯಲ್ಲಿ ಕಲ್ಲಿನ ಆಯ್ಕೆ ಪ್ರಧಾನ ಪಾತ್ರವಹಿಸುತ್ತದೆ. ಮೈಸೂರು ಮತ್ತು ಕಾರ್ಕಳ ಭಾಗದ ಕಲ್ಲು ಕೆತ್ತನೆಗೆ ಹೇಳಿ ಮಾಡಿಸಿದಂತಿವೆ ಎಂಬುದು ಅವರ ಅನುಭವದ ಮಾತು.

ಶಿಲ್ಪ ಕಲೆ, ಮೂಲ ಸ್ವರೂಪ ಕಾಯ್ದುಕೊಂಡಿದೆ. ಕಲ್ಲಿಗೂ ಸ್ಪಷ್ಟ ರೂಪ ನೀಡುವ ಮೂಲಕ ಜೀವಂತಿಕೆ ಉಳಿಸಿಕೊಂಡಿದೆ. ಜನರಿಗೆ ಮೂರ್ತಿ ಶಿಲ್ಪದ ಬಗ್ಗೆ ಒಲವಿದೆ. ಅದನ್ನು ಉಳಿಸಿ, ಅವರ ಬೇಡಿಕೆಗೆ ಅನುಗುಣವಾದ ಶಿಲ್ಪ ರಚಿಸಿ, ನೀಡುವ ಹೊಣೆ ಶಿಲ್ಪಿಗಳ ಮೇಲಿದೆ’ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.