ADVERTISEMENT

‘15 ಸಾವಿರ ಎಕರೆ ಅಡಿಕೆ ತೋಟಕ್ಕೆ ರೋಗ’

ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಅಶೋಕ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 4:43 IST
Last Updated 29 ಡಿಸೆಂಬರ್ 2022, 4:43 IST
ಕೊಪ್ಪದ ಕೃಷಿ ಇಲಾಖೆಯಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು
ಕೊಪ್ಪದ ಕೃಷಿ ಇಲಾಖೆಯಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು   

ಕೊಪ್ಪ: ‘ತಾಲ್ಲೂಕಿನಲ್ಲಿ 15 ಸಾವಿರ ಎಕರೆ ಅಡಿಕೆ ತೋಟದ ಪ್ರದೇಶಕ್ಕೆ ಎಲೆಚುಕ್ಕಿ ರೋಗ ತಗುಲಿರುವ ಬಗ್ಗೆ ಸರ್ಕಾರಕ್ಕೆ ಈಗಾಗಲೇ ವರದಿ ನೀಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ್ ತಿಳಿಸಿದರು.

ಕೃಷಿ ಇಲಾಖೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಎಲೆಚುಕ್ಕಿ ರೋಗಕ್ಕೆ ಸರ್ಕಾರದಿಂದ ಇನ್ನಷು ಔಷಧಿಗಳು ಇಲಾಖೆಗೆ ಪೂರೈಕೆಯಾದಾಗ ರೈತರಿಗೆ ಮಾಹಿತಿ ನೀಡಲಾಗುವುದು’ ಎಂದರು.

‘ಜಾನುವಾರು ಚರ್ಮಗಂಟು ರೋಗಕ್ಕೆ ಚುಚ್ಚುಮದ್ದು ನೀಡಲು ಪಶು ಆಸ್ಪತ್ರೆಯಿಂದ ಬಂದ ಸಿಬ್ಬಂದಿ ರೂ.200 ತೆಗೆದುಕೊಳ್ಳುತ್ತಿದ್ದಾರೆ. ಕಾರ್ಮಿಕರೊಬ್ಬರಿಗೆ ರೂ.300 ಸಂಬಳ ಸಿಗುತ್ತದೆ, ಅದರಲ್ಲಿ ರೂ.200 ಇವರೇ(ಸಿಬ್ಬಂದಿ) ತೆಗೆದುಕೊಂಡು ಹೋಗುತ್ತಾರೆ’ ಎಂದು ರೈತರೊಬ್ಬರು ದೂರಿದರು.

ADVERTISEMENT

ಈ ವೇಳೆ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಪ್ರದೀಪ್ ಮಾತನಾಡಿ, ‘ಸರ್ಕಾರದಿಂದ ಹಣ ಬರುವುದಿಲ್ಲ. ಪೆಟ್ರೋಲ್‌ ಗೂ ಸಿಬ್ಬಂದಿ ಕೈಯಿಂದ ಹಣ ಹಾಕಿಕೊಳ್ಳುವ ಪರಿಸ್ಥಿತಿಯಿದೆ’ ಎಂದು ತಿಳಿಸಿದರು.

ಪ್ರಗತಿಪರ ಕೃಷಿಕ ಎಂ.ಬಿ.ಶಂಕರ್ ಮಾತನಾಡಿ, ‘ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಅಭಾವವಿದ್ದು, ಸುಧಾರಿಸಿಕೊಳ್ಳಲು ಕಾರ್ಮಿಕರಿಗೆ ಜೀವನ ಭದ್ರತೆಯನ್ನು ಮಾಲೀಕರು ಕಲ್ಪಿಸುವ ವ್ಯವಸ್ಥೆ ಮುನ್ನಲ್ಲೆಗೆ ಬರಬೇಕು, ಪಿಂಚಣಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕು’ ಎಂದರು.

ಪ್ರಗತಿಪರ ಕೃಷಿಕರಾದ ಜಯಪುರ ಹೋಬಳಿಯ ರಂಜಿನಿ ಕೆ.ಹೆಬ್ಬಾರ್, ಹರಿಹರಪುರ ಹೋಬಳಿಯ ಪಾರ್ವತಿ ಬೆಳವಿನಕೊಡಿಗೆ, ಕಸಬಾ ಹೊಬಳಿಯ ನಾಗರಾಜ್ ತಲಮಕ್ಕಿ ಅವರನ್ನು ಸನ್ಮಾನಿಸಲಾಯಿತು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ರಾಜಶಂಕರ್, ಶೃಂಗೇರಿ ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಟೇಶ್, ರೇಖಾ, ಕೃಷಿಕ ಸಮಾಜದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.