ADVERTISEMENT

ಮೆಣಸಿನಹಾಡ್ಯ: ಮೂಲ ಸೌಲಭ್ಯಗಳಿಲ್ಲದೆ ಸೊರಗಿದ ಆಶ್ರಮ ಶಾಲೆ

ಎಚ್.ಎನ್.ಸತೀಶ್ ಜೈನ್
Published 21 ಜುಲೈ 2025, 2:57 IST
Last Updated 21 ಜುಲೈ 2025, 2:57 IST
ಬಾಳೆಹೊನ್ನೂರು ಸಮೀಪದ ಮೆಣಸಿನಹಾಡ್ಯ ವಾಲ್ಮೀಕಿ ಆಶ್ರಮ ಶಾಲೆಯ ಕೊಠಡಿಯಲ್ಲಿ ಸ್ವಲ್ಪವೂ ಜಾಗ ಇಲ್ಲದಂತೆ ಹಾಸಿರುವ ಹಾಸಿಗೆಗಳು
ಬಾಳೆಹೊನ್ನೂರು ಸಮೀಪದ ಮೆಣಸಿನಹಾಡ್ಯ ವಾಲ್ಮೀಕಿ ಆಶ್ರಮ ಶಾಲೆಯ ಕೊಠಡಿಯಲ್ಲಿ ಸ್ವಲ್ಪವೂ ಜಾಗ ಇಲ್ಲದಂತೆ ಹಾಸಿರುವ ಹಾಸಿಗೆಗಳು   

ಮೆಣಸಿನಹಾಡ್ಯ (ಬಾಳೆಹೊನ್ನೂರು): ಆದಿವಾಸಿ ಬುಡಕಟ್ಟು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿರುವ ಶ್ರೀಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಪುಟ್ಟ ಕಂದಮ್ಮಗಳ ಕೂಗು ಅರಣ್ಯ ರೋಧನವಾಗಿದ್ದು, ಸಮಸ್ಯೆಗಳ ಸರಮಾಲೇಯೇ ಎದ್ದು ಕಾಣುತ್ತಿದೆ.

ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯ, ಮೇಗೂರಿನಲ್ಲಿರುವ ವಸತಿ ಶಾಲೆಗಳಲ್ಲಿ ಈ ಬಾರಿ ರಾಜ್ಯದ ವಿವಿಧ ಭಾಗಗಳ ವಿದ್ಯಾಥಿಗಳು ನಿರೀಕ್ಷೆಗೂ ಮೀರಿ ದಾಖಲಾತಿ ಪಡೆದಿದ್ದಾರೆ. ಮೆಣಸಿನಹಾಡ್ಯ ಶಾಲೆಯಲ್ಲಿ ಕಳೆದ ಸಲ 105 ವಿದ್ಯಾರ್ಥಿಗಳಿದ್ದರೆ, ಈ ಬಾರಿ ಆ ಸಂಖ್ಯೆ 193ಕ್ಕೆ ಏರಿದೆ. 119 ಗಂಡು ಹಾಗೂ 79 ಹೆಣ್ಣುಮಕ್ಕಳು ದೂರದ ರಾಯಚೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಹೊನ್ನಾಳಿ ಸೇರಿದಂತೆ ಹೊರ ಜಿಲ್ಲೆಯ ಶೇ 80ರಷ್ಟು ವಿದ್ಯಾರ್ಥಿಗಳು ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಇಲ್ಲಿ ದಾಖಲಾಗಿದ್ದಾರೆ.

ಸುಮಾರು 1ಕಿ.ಮೀ ದೂರದ ಗುಡ್ಡದಿಂದ ಹರಿದು ಬರುವ ನೀರನ್ನೇ ಇಡೀ ಶಾಲೆ ಅವಲಂಬಿಸಿದ್ದು, ಮಳೆಗಾಲದಲ್ಲಿ ಮಕ್ಕಳು ಕೊಳಕು ನೀರಿನಲ್ಲೇ ಸ್ನಾನ, ಬಟ್ಟೆ ಒಗೆಯುವುದು ಮಾಡಬೇಕಿದೆ. ಕೊಠಡಿಗಳ ಕೊರತೆಯಿಂದಾಗಿ ಐದರಿಂದ ಏಳರವರೆಗಿನ ತರಗತಿಗಳನ್ನು ಆಶ್ರಮದ ಹೊರಭಾಗದಲ್ಲಿರುವ ಹಳೆಯ ಶಾಲಾ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು, ಅಲ್ಲಿ ವಿದ್ಯುತ್ ಸಂಪರ್ಕ ಕೂಡ ಇಲ್ಲ. ಆಶ್ರಮದ ಕೊಠಡಿಯಲ್ಲಿ ಮಲಗಲು ಮಂಚ ಇಲ್ಲದೆ, ನೆಲದಲ್ಲಿ ಹಾಸಿದ ಹರಿದುಹೋದ ಹಾಸಿಗೆಯಲ್ಲೇ ಮಕ್ಕಳು ನಿದ್ದೆಗೆ ಜಾರುತ್ತಿವೆ. ಮಕ್ಕಳು ನಿತ್ಯ ಬಳಸುವ ಬಟ್ಟೆ, ಪುಸ್ತಕಗಳ ಟ್ರಂಕ್ ಇಡಲು ಕೊಠಡಿಯಿಲ್ಲದೆ ಶಾಲೆಯ ಎದುರು ಭಾಗದ ಜಗಲಿಯಲ್ಲಿ ಇಡಲಾಗಿದೆ.

ADVERTISEMENT

ಕಾಯಂ ಶಿಕ್ಷಕರ ನೇಮಕ ಮಾಡದ ಕಾರಣ ಏಳು ಜನ ಶಿಕ್ಷಕರೂ ಹೊರಗುತ್ತಿಗೆ ಮೂಲಕ ಕೆಲಸ ನಿರ್ವಹಿಸುತ್ತಿದ್ದಾರೆ.ನೆಟ್ ವರ್ಕ ಇಲ್ಲದ ಕಾರಣ ಶಾಲೆಯ ವಿವಿಧ ಅಂಕಿ ಅಂಶಗಳನ್ನು ದಾಖಲಿಸುವುದೇ ಶಿಕ್ಷಕರಿಗೆ ದೊಡ್ಡ ತಲೆ ನೋವಾಗಿದೆ. ಶಾಲೆ ಆರಂಭಗೊಂಡು ತಿಂಗಳು ಕಳೆದರೂ ಇಲಾಖೆ ವಿದ್ಯಾರ್ಥಿಗಳಿಗೆ ಪೆನ್‌, ನೋಟ್ ಬುಕ್ ಪೂರೈಕೆ ಮಾಡಿಲ್ಲ. ಶಾಲೆಗೆ ಅಗತ್ಯವಾದ ತರಕಾರಿ, ಹಾಲನ್ನು ನಿತ್ಯ 10ಕಿ.ಮೀ ದೂರದಿಂದ ತರಬೇಕಾಗಿದೆ. ದೂರದೂರಿನಿಂದ ಬರುವ ಪೋಷಕರು ಕೊಗ್ರೆಯಿಂದ ವಾಹನಗಳನ್ನು ಬಾಡಿಗೆಗೆ ಪಡೆದು 10ಕಿ.ಮೀ ದೂರದ ಶಾಲೆಗೆ ತಲುಪಬೇಕು. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೂ ಅಡುಗೆ ಮನೆಯಲ್ಲಿ ದೊಡ್ಡ ಪಾತ್ರೆಗಳ ಕೊರತೆ ಕಂಡು ಬಂದಿದೆ. 193 ವಿದ್ಯಾರ್ಥಿಗಳಿದ್ದರೂ ಹೆಣ್ಣು ಮತ್ತು ಗಂಡು ಮಕ್ಕಳಿಗೆ ತಲಾ ನಾಲ್ಕು ಶೌಚಾಲಯಗಳಿದ್ದು ಸ್ನಾನ, ಶೌಚಕ್ಕೆ ಗಂಟೆಗಟ್ಟಲೆ ಕಾಯಬೇಕಾಗಿದೆ.

ಶಿಕ್ಷಕರು ಶಾಲೆಯ ಬಳಿಯಲ್ಲೇ ಇರಬೇಕೇಂಬ ಕಡ್ಡಾಯ ನಿಯಮವಿದೆ. ಆದರೆ, ಶಾಲೆಯ ಬಳಿ ಸರಿಯಾದ ವಸತಿ ಗೃಹಗಳಿಲ್ಲದ್ದರಿಂದ ನಾಲ್ವರು ಶಿಕ್ಷಕರು ಒಂದೇ ಕೊಠಡಿಯನ್ನು ಅವಲಂಬಿಸಿದ್ದಾರೆ. ಮೇಗೂರು, ಮೆಣಸಿನಹಾಡ್ಯ, ನೆಮ್ಮಾರು, ಬಸರೀಕಟ್ಟೆ ಶಾಲೆಗಳನ್ನು ಒಬ್ಬರೇ ವಾರ್ಡನ್ ನೋಡಿಕೊಳ್ಳುತ್ತಿದ್ದಾರೆ. ಸ್ಥಳದಲ್ಲಿ ವಾರ ಪೂರ್ತಿ ವಾರ್ಡನ್ ಕೂಡ ಲಭ್ಯವಿರುವುದಿಲ್ಲ.

ಮೇಗೂರಿನಲ್ಲಿರುವ ಶಾಲೆಯ ಸ್ಥಿತಿಯೂ ಮೆಣಸಿನಹಾಡ್ಯಕ್ಕಿಂತ ಭಿನ್ನವಾಗಿಲ್ಲ. 99 ಗಂಡು ಹಾಗೂ 79 ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 172 ವಿದ್ಯಾರ್ಥಿಗಳಿದ್ದು ಕೊಠಡಿಗಳ ಕೊರತೆ ಎದುರಿಸುತ್ತಿದ್ದಾರೆ. ವಿದ್ಯುತ್ ಕೈಕೊಟ್ಟಾಗ ಜನರೇಟರ್ ವ್ಯವಸ್ಥೆ ಇಲ್ಲ. ಮೇಗೂರು ಸೇರಿದಂತೆ ಜಿಲ್ಲೆಯ ಯಾವುದೇ ಆಶ್ರಮ ಶಾಲೆಯಲ್ಲೂ ಕಾಯಂ ಶಿಕ್ಷಕರೇ ಇಲ್ಲ. ಈ ಕುರಿತು ಕೇಳಲು ಕೊಪ್ಪದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಮೇಗೂರಿನ ಆಶ್ರಮ ಶಾಲೆಯಲ್ಲಿ ಮಕ್ಕಳ ಪುಸ್ತಕ ಬಟ್ಟೆ ಇಟ್ಟುಕೊಳ್ಳುವ ಟ್ರಂಕ್‌ಗಳನ್ನು ಇಡಲು ಸೂಕ್ತ ಕೊಠಡಿಗಳಿಲ್ಲದೆ ಹೊರಗಿನ ಜಗಲಿಯಲ್ಲಿ ಜೋಡಿಸಿಟ್ಟಿರುವುದು

ಮಳೆಗಾಲದ ನಂತರ ಕಾಮಗಾರಿ

ಆರಂಭ ಮೇಗೂರು ಹಾಗೂ ಮೆಣಸಿನಹಾಡ್ಯದಲ್ಲಿ ಮಕ್ಕಳಿಗೆ ಕೊಠಡಿ ಕೊರತೆಯಿದೆ. ಸರ್ಕಾರ ಹೊಸ ಕೊಠಡಿ ಹಾಸ್ಟಲ್ ನಿರ್ಮಾಣಕ್ಕೆ ₹5.9 ಕೋಟಿ ಬಿಡುಗಡೆ ಮಾಡಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ. ಶಾಸಕರ ಸೂಚನೆಯಂತೆ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದೆ ಎನ್ನುತ್ತಾರೆ ವಾರ್ಡನ್ ರೇವಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.