ADVERTISEMENT

ಸಿ.ಐ.ಡಿ ತನಿಖೆಗೆ ಆಗ್ರಹ: ಆಟೊ ಮುಷ್ಕರ

ಆಟೊ ಚಾಲಕ ಪ್ರದೀಪ್ ಅನುಮಾನಾಸ್ಪದ ಸಾವು; ವಿಳಂಬವಾದ ತನಿಖೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:42 IST
Last Updated 28 ಸೆಪ್ಟೆಂಬರ್ 2022, 5:42 IST
ಕೊಪ್ಪದ ಆಟೊ ಚಾಲಕ ಪ್ರದೀಪ್ ಸಾವಿನ ಪ್ರಕರಣ ಸಿ.ಐ.ಡಿ ತನಿಖೆಗೆ ಆಗ್ರಹಿಸಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಕ್ಷೇತ್ರ ಆಟೊ ಚಾಲಕರು ಮತ್ತು ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ವಿಮಲ ಸುಪ್ರಿಯಾ ಇದ್ದರು.
ಕೊಪ್ಪದ ಆಟೊ ಚಾಲಕ ಪ್ರದೀಪ್ ಸಾವಿನ ಪ್ರಕರಣ ಸಿ.ಐ.ಡಿ ತನಿಖೆಗೆ ಆಗ್ರಹಿಸಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಕ್ಷೇತ್ರ ಆಟೊ ಚಾಲಕರು ಮತ್ತು ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ವಿಮಲ ಸುಪ್ರಿಯಾ ಇದ್ದರು.   

ಕೊಪ್ಪ: ಪಟ್ಟಣ ಸಮೀಪದ ಚೌಕಿ ನಿವಾಸಿ, ಆಟೊ ಚಾಲಕ ಪ್ರದೀಪ್ ಸಾವಿನ ಪ್ರಕರಣವನ್ನು ಸಿ.ಐ.ಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಕ್ಷೇತ್ರ ಆಟೊ ಚಾಲಕರು ಮತ್ತು ಮಾಲೀಕರ ಸಂಘ ವತಿಯಿಂದ ಮಂಗಳವಾರ ಇಲ್ಲಿನ ಬಸ್ ನಿಲ್ದಾಣ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು.

ಸಂಘದ ಅಧ್ಯಕ್ಷ ವಿಜೇಂದ್ರ ಮಾತನಾಡಿ, ‘ಪ್ರದೀಪ್ ಸಾವು ಅನುಮಾನಸ್ಪದವಾಗಿದೆ. ತ್ವರಿತಗತಿ
ಯಲ್ಲಿ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು. ಪ್ರಕರಣವನ್ನು ಸಿ.ಐ.ಡಿ ತನಿಖೆಗೆ ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುತ್ತದೆ’ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ‘ಪ್ರಕರಣ ತನಿಖೆ ಹಂತದಲ್ಲಿದ್ದಾಗ ವಿಧಾನಸಭೆ
ಯಲ್ಲಿ ಪ್ರಸ್ತಾಪಿಸಲು ಅವಕಾಶವಿರಲಿಲ್ಲ, ಆದ್ದರಿಂದ ಪ್ರಸ್ತಾಪಿಸಲಾಗಲಿಲ್ಲ. ಪ್ರಕರಣದ ತನಿಖೆಯನ್ನು ಸಿ.ಐ.ಡಿಗೆ ವಹಿಸುವಂತೆ ಈಗಾಗಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ’ ಎಂದರು.

ADVERTISEMENT

‘ಪ್ರದೀಪ್ ಆಗಸ್ಟ್ 19 ರಂದು ನಾಪತ್ತೆಯಾಗಿ, ಮುಸುರೆಹಳ್ಳದಲ್ಲಿ ಮೃತದೇಹ ಅನುಮಾನಸ್ಪದ ರೀತಿ ಪತ್ತೆಯಾಗಿತ್ತು. ಸೆ.24 ರಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ಷರಿಷ್ಠಾಧಿಕಾರಿ ನೀಡಿದ ಹೇಳಿಕೆ ತೃಪ್ತಿ ನೀಡಿಲ್ಲ. ಅವರು ಇನ್ನೂ 15 ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ. ಆದ್ದರಿಂದ ಸಿ.ಐ.ಡಿ ತನಿಖೆಗೆ ವಹಿಸಬೇಕು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ಆಟೊ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಪುರಭವನದಿಂದ ಮುಖ್ಯ ಬಸ್ ನಿಲ್ದಾಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಹಶೀಲ್ದಾರ್ ವಿಮಲ ಸುಪ್ರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಪ್ರತಿಯನ್ನು ರಾಜ್ಯ ಪಾಲರು, ಮುಖ್ಯಮಂತ್ರಿ, ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ.

ಕ್ಷೇತ್ರ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಎಚ್.ಆರ್.ಜಗದೀಶ್, ಕೊಪ್ಪ ಆಟೊ ಚಾಲಕರ ಸಂಘದ ಯು.ಪಿ.ವಿಜಯಕುಮಾರ್, ಸಮನ್ವಯ ಆಟೊ ಚಾಲಕರ ಸಂಘದ ಅಧ್ಯಕ್ಷ ಶ್ರೀಕಾಂತ್, ವಿವಿಧ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಎನ್.ಆರ್.ಪುರದ ಮಧುಸೂದನ್, ಬಿ.ಎಚ್.ಕೈಮರದ ಪ್ರಕಾಶ್, ಶೃಂಗೇರಿಯ ಚಂದ್ರಶೇಖರ್, ಮಾಗುಂಡಿಯ ಪ್ರೇಮ್ ಕುಮಾರ್, ಕುದುರೆಗುಂಡಿಯ ಶಾಶ್ವತ್, ಜಯಪುರದ ಸಂಪತ್, ಹರಿಹರಪುರದ ಸುರೇಶ್, ಬಾಳೆಹೊನ್ನೂರಿನ ಸಂದೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.