
ಆಲ್ದೂರು: ಇಲ್ಲಿಗೆ ಸಮೀಪದ ಆವತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‍ಸಿ)ಯಲ್ಲಿ ಆರು ತಿಂಗಳಿನಿಂದ ವೈದ್ಯರಿಲ್ಲದೆ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
1995ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿದೆ. ಗ್ರಾಮದ ಜನಸಂಖ್ಯೆ ಅಂದಾಜು 4 ಸಾವಿರ ಸಂಖ್ಯೆ ಇದ್ದು, ಮತದಾರರು 1800ಕ್ಕೂ ಅಧಿಕ ಮಂದಿ ಇದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರು ತಿಂಗಳಿನಿಂದ ವೈದ್ಯಾಧಿಕಾರಿಗಳು ಇಲ್ಲ. ಒಟ್ಟು 9 ಹುದ್ದೆಗಳಿದ್ದು ಅದರಲ್ಲಿ ಅಟೆಂಡರ್ ಮತ್ತು ಮಹಿಳಾ ಸಹಾಯಕಿ ಬಿಟ್ಟರೆ ಉಳಿದ ಎಲ್ಲಾ ಹುದ್ದೆಗಳು ಖಾಲಿ ಇವೆ. ಲ್ಯಾಬ್ ಟೆಕ್ನಿಷಿಯನ್ ವಾರಕ್ಕೆ ಒಮ್ಮೆ ಚಿಕ್ಕಮಗಳೂರಿನಿಂದ ಬರುತ್ತಾರೆ. ಪಕ್ಕದ ಮಲ್ಲಂದೂರು ಸಿರವಾಸೆ ಪಿಎಚ್‍ಸಿಗಳಲ್ಲಿ ತಲಾ ಮೂರು ಮೂರು ನರ್ಸ್ ಗಳು ಇದ್ದಾರೆ.
ಆವತಿ ಪಿಎಚ್‌ಸಿ ವ್ಯಾಪ್ತಿಯಲ್ಲಿ ಕಾಫಿ ಎಸ್ಟೇಟ್‌ಗಳು ಅಧಿಕವಾಗಿದ್ದು, ಈಗಾಗಲೇ ಕಾಫಿ ಕೊಯ್ಲು ಆರಂಭವಾಗಿದೆ. ಬೇರೆ ಜಿಲ್ಲೆ ಹಾಗೂ ರಾಜ್ಯಗಳ ಕಾರ್ಮಿಕರು ಕೆಲಸಕ್ಕೆ ಬಂದು ಎಸ್ಟೇಟ್‌ಗಳಲ್ಲಿ ನೆಲೆಸಿದ್ದಾರೆ.
ಯಾವುದೇ ಪ್ರಾಥಮಿಕ ಹಂತದ ಕಾಯಿಲೆಗಳು ಅಪಘಾತ, ಗರ್ಭಿಣಿಯರು ಇತರ ತುರ್ತು ಸಂದರ್ಭಗಳಲ್ಲಿ ಇದೇ ಆರೋಗ್ಯ ಕೇಂದ್ರವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ವಿಷಯದ ಕುರಿತು ಪ್ರಶ್ನಿಸಿದರೆ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
‘ಸ್ಥಳೀಯ ಶಾಸಕರು ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಇನ್ನೊಂದು ತಿಂಗಳಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ’ ಎಂದು ಆವತಿ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಕೆರೆಮಕ್ಕಿ ಮಹೇಶ್ ಎಚ್ಚರಿಸಿದರು.
‘ಗಾಂಧಿನಗರ, ನರಿಗುಡ್ಡೆ, ದಾನಿಹಳ್ಳಿ, ಹೊಸಳ್ಳಿ ಸೇರಿ ಏಳು ಗ್ರಾಮಗಳ ಜನರು, ವಲಸೆ ಕಾರ್ಮಿಕರು, ಚಿಕಿತ್ಸೆಗಾಗಿ ಈ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಸಲಕ್ಕೆ ಚಿಕಿತ್ಸೆ ದೊರೆಯದಿದ್ದರೆ ರೋಗಿಗಳ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನಾದರೂ ಜನಪ್ರತಿನಿಧಿಗಳು ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿಗಳನ್ನು ನೇಮಿಸಬೇಕು’ ಎಂದು ಗ್ರಾಮದ ಹಿರಿಯ ಮುಖಂಡ ಶಾಂತೆಗೌಡ, ರೋಟರಿ ಕ್ಲಬ್ ಸದಸ್ಯರಾದ ಎಚ್.ಬಿ.ಮಹೇಂದ್ರ ಒತ್ತಾಯಿಸಿದರು.
‘ಮಲ್ಲಂದೂರು ಆರೋಗ್ಯ ಕೇಂದ್ರ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕೇಂದ್ರ ಆಗಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ ವೈದ್ಯಾಧಿಕಾರಿಯನ್ನು ವಾರಕ್ಕೆ ಒಂದು ದಿನ ನಿಯೋಜನೆ ಮೇಲೆ ಆವತಿ ಪಿಎಚ್‌ಸಿಗೆ ನೇಮಿಸಲಾಗಿದೆ. ಮೆಡಿಕಲ್ ಕಾಲೇಜಿನಲ್ಲಿ ವೈದ್ಯರ ಹುದ್ದೆಗೆ ಖಾಲಿ ಇರುವ ಕುರಿತು ಮಾಹಿತಿ ತಿಳಿಸಲಾಗಿದೆ. ಶೀಘ್ರವೇ ವೈದ್ಯರ ನೇಮಕ ಮಾಡಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
ಆವತಿ ಪಿಎಚ್‌ಸಿಯಲ್ಲಿ ವೈದ್ಯರ ಕೊರತೆ ಸಮಸ್ಯೆ ಗಮನಕ್ಕೆ ಬಂದಿದೆ. ಮಲ್ಲಂದೂರು ವೈದ್ಯಾಧಿಕಾರಿಯನ್ನು ವಾರಕ್ಕೆ ಒಂದು ದಿನ ನಿಯೋಜನೆ ಮೇಲೆ ನೇಮಿಸಲಾಗಿದೆ. ಪ್ರಸ್ತುತ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ನೇಮಕಾತಿಗೆ ಇರುವ ಸಮಸ್ಯೆಯನ್ನು ಶಾಸಕರ ಗಮನಕ್ಕೂ ತಂದಿದ್ದೇವೆ.-ಡಾ.ಅಶ್ವಥ್ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.