ADVERTISEMENT

ವಿದ್ಯಾರ್ಥಿಗಳು ಪರಿಸರ ಪ್ರೇಮ ಮೈಗೂಡಿಸಿಕೊಳ್ಳಲು ಸಲಹೆ

ಚಿಕ್ಕಮಗಳೂರಿನಲ್ಲಿ ಬೀಜದುಂಡೆ ತಯಾರಿಸುವ ಕಾರ್ಯಕ್ರಮದಲ್ಲಿ ಡಾ.ಕುಮಾರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 12:42 IST
Last Updated 12 ಜುಲೈ 2019, 12:42 IST
ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಬೀಜದುಂಡೆ ತಯಾರಿಸುವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಬೀಜದುಂಡೆ ತಯಾರಿಸುವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.   

ಚಿಕ್ಕಮಗಳೂರು: ವಿದ್ಯಾರ್ಥಿಗಳು ಪರಿಸರ ಪ್ರೇಮ, ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ್ ಸಲಹೆ ನೀಡಿದರು.

ಅರಣ್ಯ ಇಲಾಖೆ, ಸ್ವಚ್ಛ ಚಾರಿಟಬಲ್ ಟ್ರಸ್ಟ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದೊಂದಿಗೆ ನಗರದ ಜಿಲ್ಲಾಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಹಸಿರು ಬೆಳೆಸು’ ಜಾಗೃತಿ ಮತ್ತು ಬೀಜದುಂಡೆ ತಯಾರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾಂತ್ರಿಕೃತ ಯುಗದಲ್ಲಿ ಪರಿಸರ ಸಂರಕ್ಷಣೆ ನಿರ್ಲಕ್ಷಿಸಲಾಗಿದೆ. ಅದನ್ನು ಎಲ್ಲರು ಮನಗಾಣಬೇಕು. ಪರಿಸರ ಸಮತೋಲನಕ್ಕೆ ಮುಂದಾಗಬೇಕು. ಮನೆಗೊಂದು ಸಸಿ ನೆಟ್ಟು ಪೋಷಿಸಬೇಕು. ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವ ನಾಣ್ಣುಡಿಯಂತೆ ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಪ್ರೇಮ ರೂಢಿಸಬೇಕು ಎಂದರು.

ADVERTISEMENT

ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಆ ಸಂಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ, ಸಕಾರಾತ್ಮಕ ಮನೋಭಾವ ಕಾಣಬಹುದು. ಪರಿಸರ ಕಾಳಜಿ ಬಗ್ಗೆ ಈ ಸಂಸ್ಥೆ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿರುವುದು ಶ್ಲಾಘನೀಯ ಎಂದರು.

ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಮಾತನಾಡಿ, ಮನುಷ್ಯ ಬದುಕಲು ಶುದ್ಧ ನೀರು, ಗಾಳಿ, ಆಹಾರ ಅನಿವಾರ್ಯವಾಗಿದೆ. ಪರಿಸರ ಸಂರಕ್ಷಣೆಗೆ ನಿರ್ಲಕ್ಷ ಧೋರಣೆ ತಾಳಿದರೆ, ಅದು ಜೀವ ಸಂಕುಲಕ್ಕೆ ಮಾರಕವಾಗಲಿದೆ. ನಗರ ಪ್ರದೇಶಗಲ್ಲಿ ಶುದ್ಧನೀರು, ಗಾಳಿ ಪ್ರಮಾಣ ಕಡಿಮೆಯಾಗಿದೆ. 1000 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ದೊರೆಯುತ್ತಿಲ್ಲ. ಸಸಿ ಬೆಳೆಸುವುದರಿಂದ ಇಂತಹ ಪ್ರತಿಕೂಲ ವಾತಾವರಣ ಸರಿದೂಗಿಸಬಹುದು ಎಂದರು.

1984ರಲ್ಲಿ ವಿಶ್ವ ಸಂಸ್ಥೆ ಅಂತರರಾಷ್ಟ್ರೀಯ ಪರಿಸರ ದಿನ ಆಚರಣೆ ಜಾರಿಗೊಳಿಸಿತು. ಪ್ರತಿವರ್ಷ ಎಲ್ಲ ದೇಶಗಳು ಪರಿಸರ ದಿನ ಆಚರಿಸುತ್ತವೆ. ಆದರೆ ಪರಿಸರ ನಾಶ ಮಾಡುವುದು ಕಡಿಮೆಯಾಗಿಲ್ಲ. ಜಾಗತಿಕ ತಾಪಮಾನ ದಿನೇ, ದಿನೇ ಹೆಚ್ಚಾಗುತ್ತಿದೆ.
ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಅದನ್ನು ಎಲ್ಲರು ಅರ್ಥಮಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ ಜವಾಬ್ದಾರಿಯಲ್ಲ. ಅದು ಎಲ್ಲರ ಎಲ್ಲರ ಕರ್ತವ್ಯ ಎಂದರು.

ಬಿದಿರು, ಸಾಗುವಾನಿ, ನೇರಳೆ, ಶ್ರೀಗಂಧ, ಸಿಸು, ಹಲಸು, ತಾರಿ, ಮಾವಿನ ಬೀಜದುಂಡೆ ತಯಾರಿಸಲಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.
ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿಲ್ಪಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಆಯುಕ್ತ ಎ.ಎನ್.ಮಹೇಶ್, ತಾಲ್ಲೂಕು ಘಟಕದ ಅಧ್ಯಕ್ಷ ನಂದಕುಮಾರ್, ಸಂಘಟಕ ಬಿ.ಎನ್.ಕಿರಣ್ ಕುಮಾರ್, ಮುಖಂಡರಾದ ಎಂ.ಎಲ್.ಮೂರ್ತಿ, ನಟರಾಜ್, ಮಂಜುನಾಥ್ ಜೋಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.