ADVERTISEMENT

ತಿರುಪತಿ–ಚಿಕ್ಕಮಗಳೂರು ರೈಲಿಗೆ ಬಾಬಾಬುಡನ್ ಹೆಸರಿಡಲು ಒತ್ತಾಯ: ಪ್ರಧಾನಿಗೆ ಪತ್ರ

ಪ್ರಧಾನಿ ನರೇಂದ್ರ ಮೋದಿಗೆ ಬಾಬಬುಡನ್ ವಂಶಸ್ಥರ ಪತ್ರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:17 IST
Last Updated 13 ಜುಲೈ 2025, 3:17 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಚಿಕ್ಕಮಗಳೂರು: ತಿರುಪತಿ–ಚಿಕ್ಕಮಗಳೂರು ನಡುವೆ ಕಾರ್ಯಾಚರಣೆ ಮಾಡಲಿರುವ ಎಕ್ಸ್‌ಪ್ರೆಸ್ ರೈಲಿಗೆ ‘ಬಾಬಾಬುಡನ್ ಎಕ್ಸ್‌ಪ್ರೆಸ್’ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಬಾಬಾ ಬುಡನ್‌ ವಂಶಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 

ADVERTISEMENT

17ನೇ ಶತಮಾನದಲ್ಲಿ ಯೆಮೆನ್‌ನಿಂದ ಏಳು ಕಾಫಿ ಬೀಜಗಳನ್ನು ತಂದು ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿ ಬೆಳೆಸಿ ಭಾರತದಲ್ಲಿ ಕಾಫಿ ಕೃಷಿ ಆರಂಭಕ್ಕೆ ಕಾರಣವಾದವರು ಬಾಬಾಬುಡನ್. ಇದರಿಂದ ಚಿಕ್ಕಮಗಳೂರು ಇಂದು ಭಾರತದ ಕಾಫಿ ತವರೆಂಬ ಹೆಸರು ಪಡೆದಿದೆ’ ಎಂದು ಬಾಬಾಬುಡನ್ ವಂಶಸ್ಥ ಸಯ್ಯದ್ ಫಕ್ರುದ್ದೀನ್ ಶಾ– ಖಾದ್ರಿ ಪತ್ರದಲ್ಲಿ ತಿಳಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೂ ಈ ಪತ್ರ ರವಾನಿಸಿದ್ದಾರೆ.

‘ಆಧ್ಯಾತ್ಮಿಕ ಗುರುವಾದ ಬಾಬಾಬುಡನ್ ಅವರನ್ನು ಎಲ್ಲ ಸಮುದಾಯಗಳ ಜನರೂ ಗೌರವಿಸುತ್ತಿದ್ದಾರೆ. ಸೂಫಿ ತತ್ವವು ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶ ನೀಡುತ್ತಿದೆ. ಈ ರೈಲಿಗೆ ಅವರ ಹೆಸರಿಟ್ಟರೆ ಭಾರತದ ಸಾಮರಸ್ಯ ಮತ್ತು ಸಂಸ್ಕೃತಿಗೆ ಗೌರವ ತರಲಿದೆ. ಬಾಬಾಬುಡನ್‌ಗಿರಿ ಮತ್ತು ತಿರುಪತಿ ರೀತಿಯ ಆಧ್ಯಾತ್ಮಿಕ ಕೇಂದ್ರಗಳ ನಡುವಿನ ಈ ರೈಲು ಸಂಪರ್ಕವು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಸಾಂಸ್ಕೃತಿಕ ಸಂಬಂಧ ಬಲಪಡಿಸಲಿದೆ’ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ‘ದತ್ತಪೀಠ–ತಿರುಪತಿ ಎಕ್ಸ್‌ಪ್ರೆಸ್ ಎಂಬುದರಲ್ಲಿ ವಿವಾದ ಇಲ್ಲ. ಇದು ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಾರ್ವಜನಿಕದಿಂದ ಬಂದಿರುವ ಸಲಹೆ. ಪ್ರಧಾನ ಮಂತ್ರಿಗೆ ಕೆಲವರು ಪತ್ರ ಬರೆದಿರಬಹುದು. ಆದರೆ, ದತ್ತಾತ್ರೇಯ ಮೊದಲೋ, ಬಾಬಾಬುಡನ್ ಮೊದಲೋ ಎಂಬುದು ಎಲ್ಲರಿಗೂ ಗೊತ್ತಿದೆ. ಬಾಬಾಬುಡನ್‌ಗಿಂತ ದತ್ತಾತ್ರೇಯ ಪೂರ್ವಿಕರು. ಈ ಇಬ್ಬರನ್ನು ಹೋಲಿಕೆ ಮಾಡುವುದೇ ತಪ್ಪು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.