ADVERTISEMENT

ತಾತ್ಕಾಲಿಕ ಶೆಡ್‌ನಲ್ಲಿ ಮಾಂಸಾಹಾರಕ್ಕೆ ವಿರೋಧ; ಪ್ರತಿಭಟನೆ

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:33 IST
Last Updated 17 ಮೇ 2022, 4:33 IST
ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ ಗಿರಿಯಲ್ಲಿ ಬಜರಂಗದಳದವರು ಸೋಮವಾರ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ ಗಿರಿಯಲ್ಲಿ ಬಜರಂಗದಳದವರು ಸೋಮವಾರ ಪ್ರತಿಭಟನೆ ನಡೆಸಿದರು.   

ಚಿಕ್ಕಮಗಳೂರು: ತಾಲ್ಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಸಮೀಪದ ತಾತ್ಕಾಲಿಕ ಶೆಡ್‌ನಲ್ಲಿ ಮಾಂಸ ಬೇಯಿಸಿ ಸೇವನೆ ಮಾಡಲಾಗಿದೆ ಮತ್ತು ದತ್ತಪೀಠದಲ್ಲಿ ಮೇ 15ರಂದು ಮುಸ್ಲಿಮರು ನಮಾಜ್‌ ಮಾಡಿದ್ದಾರೆ ಎಂದು ಆರೋಪಿಸಿ ಬಜರಂಗದಳವರು ಪ್ರತಿಭಟನೆ ನಡೆಸಿದರು.

ದರ್ಗಾ ಪ್ರವೇಶ ಗೇಟಿನ ಬಳಿ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ರಘು ಸಕಲೇಶಪುರ ಮಾತನಾಡಿ, ‘ತಾತ್ಕಾಲಿಕ ಶೆಡ್‌ನಲ್ಲಿ ಮಾಂಸ ಬೇಯಿಸಿ, ಮಾಂಸಾಹಾರ ಸೇವಿಸಿ ಅಪವಿತ್ರಗೊಳಿಸಿದ್ದಾರೆ. ದತ್ತ ಪೀಠದ ಆಸುಪಾಸಿನಲ್ಲಿ ಪ್ಲಾಸ್ಟಿಕ್‌ ಕವರ್‌ಗಳನ್ನು ಬಿಸಾಕಿ ಪರಿಸರ ಹಾಳುಗೆಡವಿದ್ದಾರೆ’ ಎಂದು ದೂರಿದರು.

ADVERTISEMENT

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ: ಮುಸ್ಲಿಮರು ಪೀಠದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಿರುವ ಫೊಟೊ ವಿಡಿಯೊ ಇದೆ. ಸಮಗ್ರವಾಗಿ ಪರಿಶೀಲನೆ ಮಾಡಬೇಕು. ಮುಜುರಾಯಿ ಇಲಾಖೆಯ ಇಬ್ಬರು ನೌಕರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗೆ ರಘು ಅವರು ಮನವಿ ಸಲ್ಲಿಸಿದ್ದಾರೆ.

ವರದಿ ನೀಡಲು ತಹಶೀಲ್ದಾರ್‌ಗೆ ಸೂಚನೆ: ಡಿಸಿ
‘ವಿವಾದಿತ ಪ್ರದೇಶ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆದಿಲ್ಲ. ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ನೀಡುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2005ನೇ ಇಸವಿಯಲ್ಲಿ ಜಿಲ್ಲಾಧಿಕಾರಿಯವರು ಗುಹೆಯ 200 ಮೀ ವ್ಯಾಪ್ತಿಯಲ್ಲಿ ಮಾಂಸಹಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. 200 ಮೀ ವ್ಯಾಪ್ತಿಯೊಳಗೆ ಮಾಂಸಹಾರ ಸೇವನೆ ನಡೆದಿಲ್ಲ. ವ್ಯಾಪ್ತಿಯಿಂದ ಹೊರಗೆ ಮಾಂಸಹಾರ ಮಾಡಲು ನಿರ್ಬಂಧ ಇಲ್ಲ’ ಎಂದು ತಿಳಿಸಿದರು.

‘ಕೋರ್ಟ್‌ ಆದೇಶ ಇಲ್ಲ’: ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಪ್ರದೇಶದಲ್ಲಿ ಆಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಯಾವುದೇ ಆದೇಶ ನೀಡಿಲ್ಲ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಘಟಕದ ಕಾರ್ಯದರ್ಶಿ ಗೌಸ್‌ ಮೊಹಿಯುದ್ದಿನ್‌ ಹೇಳಿದರು.

‘ರಾಜೇಂದ್ರಕುಮಾರ್‌ ಕಠಾರಿಯಾ ಜಿಲ್ಲಾಧಿಕಾರಿಯಾಗಿದ್ದಾಗ ಒಂದು ಸುತ್ತೋಲೆ ಹೊರಡಿಸಿದ್ದರು. ಗುಹೆ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ಮಾಂಸಹಾರ, ಹೋಮ–ಹವನಕ್ಕೆ ಅವಕಾಶವಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದರು. ಮಾಂಸಾಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಆದೇಶ ಇದ್ದರೆ ಬಜರಂಗದಳದವರು ತೋರಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.