
ಜಯಪುರ (ಬಾಳೆಹೊನ್ನೂರು): ನಾಲ್ಕು ತಿಂಗಳ ಹಿಂದೆ ನೂತನವಾಗಿ ನಿರ್ಮಾಣಗೊಂಡು ಮೇಲ್ದರ್ಜೆಗೇರಿದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಸಿಗೆಗಳನ್ನು ಒದಗಿಸದೆ, ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ.
ಮೇಗುಂದಾ ಹೋಬಳಿ ಜನರ ಬಹುದಿನಗಳ ಬೇಡಿಕೆ ಹಿನ್ನೆಲೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರ್ಕಾರ ₹13 ಕೋಟಿ ವೆಚ್ಚದಲ್ಲಿ 30 ಹಾಸಿಗೆಗಳ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿದೆ.
ಬಸರೀಕಟ್ಟೆ, ಬಿಳಾಲುಕೊಪ್ಪ, ಲೋಕನಾಥಪುರ, ಅಗಳಗಂಡಿ ಹೇರೂರು ಭಾಗದ ಜನರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ನಿತ್ಯ 100ರಿಂದ 150 ಜನ ಹೊರ ರೋಗಿಗಳಾಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದರೆ, ಶನಿವಾರ, ಭಾನುವಾರ 250ರಿಂದ 300ಕ್ಕೆ ತಲುಪುತ್ತಿದೆ. ನಿತ್ಯ ಒಬ್ಬರೇ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಊಟಕ್ಕೂ ಸಮಯವಿಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಹಳೆಯ ಆಸ್ಪತ್ರೆಯಲ್ಲಿ ತುಕ್ಕು ಹಿಡಿದು ಬಳಕೆಗೆ ಅನರ್ಹವಾಗಿದ್ದ ಕಬ್ಬಿಣದ ಮಂಚಗಳಿಗೆ ಬಣ್ಣ ಬಳಿದು ಹೊಸ ವಾರ್ಡ್‌ನಲ್ಲಿ ಅಳವಡಿಸಲಾಗಿದೆ. ಹೊಸದಾಗಿ ಹಾಸಿಗೆ, ಮಂಚ ಖರೀದಿಸದ ಕಾರಣ ದೊಡ್ಡ ಕೊಠಡಿಯಲ್ಲಿ ಅರ್ಧ ಖಾಲಿ ಉಳಿದಿದೆ. ಸ್ಟಾಫ್ ನರ್ಸ್ ಹಾಗೂ ಗ್ರೂಪ್ ‘ಡಿ’ ಹುದ್ದೆಗಳು ಖಾಲಿ ಉಳಿದಿದ್ದು, ಆಶಾ ಕಾರ್ಯಕರ್ತರು ಸರದಿ ಪ್ರಕಾರ ಸೇವೆ ಸಲ್ಲಿಸುತ್ತಿದ್ದಾರೆ.
ರೋಗಿಗಳ ಸಂಖ್ಯೆ ಜಾಸ್ತಿಯಾಗಿದ್ದರೂ ಔಷಧ ಪೂರೈಕೆ ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಬಹುತೇಕ ಕಾರ್ಮಿಕರು ಮಧ್ಯಮ ವರ್ಗದ ಜನ ಈ ಆಸ್ಪತ್ರೆಯನ್ನು ಅವಲಂಬಿಸಿದ್ದು, ಕನಿಷ್ಠ ಬಿಪಿ, ಶುಗರ್ ಮಾತ್ರೆಗಳೂ ಆಸ್ಪತ್ರೆಯಲ್ಲಿ ದೊರಕದಂತಾಗಿದ್ದು ರೋಗಿಗಳು ಖಾಸಗಿ ಮೆಡಿಕಲ್‌ನತ್ತ ಮುಖ ಮಾಡುತ್ತಿದ್ದಾರೆ. ಸಿಬ್ಬಂದಿಗಳು ಎರಡ್ಮೂರು ಕೆಲಸಗಳನ್ನು ಒಬ್ಬರೇ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಹತ್ತು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ. ಸುದೀಂದ್ರ ಅವರನ್ನು ಸಮೀಪದ ಶಾಂತಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ನಾಲ್ಕು ವೈದ್ಯರಿರಬೇಕಾದ ಜಾಗದಲ್ಲಿ ಓರ್ವ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆರೋಗ್ಯ ಕೇಂದ್ರ ಆರಂಭಗೊಂಡು 4 ತಿಂಗಳಿನಿಂದ ಇಲ್ಲಿನ ಯಾವುದೇ ವೈದ್ಯರಿಗೆ, ಸಿಬ್ಬಂದಿಗೆ ಸಂಬಳ ಪಾವತಿ ಮಾಡಿಲ್ಲ ಎನ್ನುವುದು ಸಿಬ್ಬಂದಿಗಳ ಅಳಲು.
ಬಿಪಿ ಶುಗರ್ ಮಾತ್ರೆಗಳಿಗೂ ಬರ
ಆಸ್ಪತ್ರೆಯಲ್ಲಿ ಜನರಿಗೆ ಅಗತ್ಯವಾದ ಬಿಪಿ ಶುಗರ್ ಮಾತ್ರೆಗಳೂ ಲಭ್ಯವಿಲ್ಲ. ರೋಗಿಗಳಿಗೆ ಮೆಡಿಕಲ್‌ನಿಂದ ತರುವಂತೆ ಚೀಟಿ ಬರೆದು ಕೊಡಲಾಗುತ್ತದೆ. ಇದನ್ನು ಪ್ರಶ್ನಿಸಿದರೆ ನಮ್ಮನ್ನು ನೈತಿಕ ಪೊಲೀಸ್ ಗಿರಿ ಮಾಡ್ತಾರೆ ಎಂದು ಕಾಂಗ್ರೆಸ್ ಮುಖಂಡರು ಬೆದರಿಸುತ್ತಾರೆ ಎಂದು ಜಯಪುರದ ಸಾಮಾಜಿಕ ಹೋರಾಟಗಾರ ಮಂಜುನಾಥ್ (ಅಣ್ಣು) ಆರೋಪಿಸಿದರು.
ಶೇ 10ರಷ್ಟು ಮಾತ್ರ ಔಷಧ ಪೂರೈಕೆ
ಆಸ್ಪತ್ರೆಗೆ ಬೇಕಾದ ಅಗತ್ಯ ಔಷಧಿಗಳ ಪಟ್ಟಿಯನ್ನು ಕಳುಹಿಸಿದರೂ ಶೇ 10ರಷ್ಟು ಮಾತ್ರ ಪೂರೈಸಲಾಗುತ್ತಿದೆ. ಉಳಿದ ಔಷಧಿಗಳನ್ನು ಹೊರರೋಗಿಗಳ ಶುಲ್ಕ ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆ ಹಾಗೂ ಸ್ಥಳೀಯ ಆರೋಗ್ಯ ನಿಧಿಯಿಂದ ಖರೀದಿಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಎಲ್ಲಾ ಹಣವನ್ನು ಔಷಧ ಖರೀದಿಗೆ ಬಳಸಿದರೆ ಸ್ವಚ್ಛತಾ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.