ADVERTISEMENT

ಬಾಳೆಹೊನ್ನೂರು: ಕಾಡಾನೆ ಉಪಟಳದ ವಿರುದ್ಧ ಜನಾಕ್ರೋಶ

ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಬಂದ್: ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:18 IST
Last Updated 29 ಜುಲೈ 2025, 6:18 IST
ಬಾಳೆಹೊನ್ನೂರಿನಲ್ಲಿ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಸ್ಥಳೀಯರು  ಪ್ರತಿಭಟನೆ ನಡೆಸಿದರು
ಬಾಳೆಹೊನ್ನೂರಿನಲ್ಲಿ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಸ್ಥಳೀಯರು  ಪ್ರತಿಭಟನೆ ನಡೆಸಿದರು   

ಬಾಳೆಹೊನ್ನೂರು: ಕಾಡಾನೆ ದಾಳಿಯಿಂದ ನಾಲ್ಕು ದಿನಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಬಾಳೆಹೊನ್ನೂರು ಮತ್ತು ಖಾಂಡ್ಯ ಹೋಬಳಿ ಕೇಂದ್ರಗಳ ಬಂದ್ ನಡೆಸಿದರು. ಸಾವಿರಾರು ಜನ ಮೂರು ಗಂಟೆಗೂ ಅಧಿಕ ಕಾಲ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಅಂಡವಾನೆ ಕೃಷಿಕ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ನೂರಾರು ಜನ ಅರಣ್ಯ ಇಲಾಖೆ ಕಚೇರಿ ಎದುರು ಜಮಾಯಿಸಿ ಘೋಷಣೆ ಕೂಗಿ ವಾಹನಗಳನ್ನು ತಡೆದರು. ಪೊಲೀಸರ ಮನವೊಲಿಕೆ ನಂತರ 12 ಗಂಟೆ ವೇಳೆಗೆ ಪ್ರತಿಭಟನೆ ಕೈಬಿಟ್ಟರು.

ಸೋಮವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಶವ ಇರಿಸಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಜಮಾಯಿಸಿದರು. ಮೆರವಣಿಗೆ ಮೂಲಕ ಜೆ.ಸಿ.ವೃತ್ತಕ್ಕೆ ತೆರಳಿ ಹೆದ್ದಾರಿ ತಡೆದು ಅರಣ್ಯ ಇಲಾಖೆ ವಿರುದ್ದ ಘೋಷಣೆ ಕೂಗಿದರು.  ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಶಾಲಾ ಕಾಲೇಜುಗಳನ್ನೂ ಪ್ರತಿಭಟನಾಕಾರರು ಬಂದ್ ಮಾಡಿಸಿದ್ದರು. ರಸ್ತೆ ತಡೆಯಿಂದಾಗಿ ಎರಡೂ ಕಡೆಗಳಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ADVERTISEMENT

ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಡಿ.ಎನ್.ಜೀವರಾಜ್ ಮಾತನಾಡಿ, ‘ಆನೆ ಜೀವಕ್ಕೆ ಮಾತ್ರ ಬೆಲೆ ಇದೆಯೇ, ಮನುಷ್ಯರ ಜೀವಕ್ಕೆ ಬೆಲೆ ಇಲ್ಲವೇ’ ಎಂದು ಪ್ರಶ್ನಿಸಿದರು. 

ಜೀವಕ್ಕೆ ದುಡ್ಡಿನ ಬೆಲೆ ಕಟ್ಟಬೇಡಿ. ಎಂಟು ತಿಂಗಳಲ್ಲಿ ಐದು ಜನ ಅಮಾಯಕರು ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ರೈತರಿಗೆ ಬದುಕುವ ಅವಕಾಶ ನೀಡಿ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಕಾಡಾನೆಗಳನ್ನು ಸೆರೆ ಹಿಡಿಯುವ ಬಗ್ಗೆ ಅರಣ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ತಕ್ಷಣ ಕಾರ್ಯಾಚರಣೆ ಆರಂಭವಾಗಲಿದೆ’ ಎಂದರು. ಇದರಿಂದ ತೃಪ್ತರಾಗದ ಪ್ರತಿಭಟನಾಕಾರರು ಮೂಲಕ ಅರಣ್ಯ ಇಲಾಖೆ ಮುಂಭಾಗದ ತೆರಳಿ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ಮುಂದುವರೆಸಿದರು.

ಜಿಲ್ಲಾಧಿಕಾರಿ, ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಬೇಕು ಎಂದು ಪಟ್ಟು ಹಿಡಿದರು. ಸುರಿವ ಮಳೆಯನ್ನೂ ಲೆಕ್ಕಿಸದ ಪ್ರತಿಭಟನಾಕಾರರು ನಡು ರಸ್ತೆಯಲ್ಲೇ ಕುಳಿತರು. ಈ ವೇಳೆ ಕೆಲವು ಯುವಕರು ಸ್ಥಳದಲ್ಲಿದ್ದ ಶಾಸಕ ಟಿ.ಡಿ.ರಾಜೇಗೌಡ ವಿರುದ್ದ ಘೋಷಣೆ ಕೂಗಿದರು. ಇದು ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತು. ತಕ್ಷಣ ಅವರು ಸಂಸದರ ವಿರುದ್ದ ಘೋಷಣೆ ಕೂಗಿದರು. ಇದರಿಂದ ಕೆಲ ಹೊತ್ತು ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.

‘ಒತ್ತುವರಿ ತೆರವಿಗೆ ನೂರಾರು ಸಿಬ್ಬಂದಿಗಳನ್ನು ಕಳುಹಿಸುವ ಅರಣ್ಯ ಇಲಾಖೆಯಲ್ಲಿ ಕಾಡಾನೆಗಳನ್ನು ಹಿಡಿಯಲು ಜನರಿಲ್ಲವೇ. ಮೃತರ ಕುಟುಂಬಕ್ಕೆ ಕನಿಷ್ಠ ₹25 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರಶೆಟ್ಟಿ ತುಮಖಾನೆ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಬರುತ್ತಿದ್ದಂತೆ ಅವರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಅವರು ವಿರುದ್ಧವೂ ಘೋಷಣೆ ಕೂಗಿದರು. ಮನವಿ ಆಲಿಸಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ‘ಮೃತ ವ್ಯಕ್ತಿಯ ಕುಟುಂಬದ ಸದಸ್ಯರೊಬ್ಬರಿಗೆ ತಾತ್ಕಾಲಿಕ ನೆಲಗಟ್ಟಿನಲ್ಲಿ ಕೆಲಸ ನೀಡಲಾಗುವುದು. ಪ್ರಸ್ತುತ ₹20 ಲಕ್ಷ ಪರಿಹಾರ ನೀಡಲಾಗುತ್ತಿದ್ದು, ಅದನ್ನು 25 ಲಕ್ಷಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.

ಆನೆ ಸೆರೆ ಕಾರ್ಯಾಚರಣೆ ಆರಂಭವಾಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಮುಂದುವರಿಸಿದರು. ಮಧ್ಯಾಹ್ನ 2 ಗಂಟೆಗೆ ಬಾಳೆಹೊನ್ನೂರಿಗೆ ನಾಲ್ಕು ಆನೆಗಳನ್ನು ಲಾರಿ ಮೂಲಕ ತರಲಾಯಿತು. ಬಳಿಕ ಪ್ರತಿಭಟನೆ ಕೈಬಿಟ್ಟರು.

ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ವಿಕ್ರಮ ಅಮಟೆ, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಡಿವೈಎಸ್ಪಿ ಬಾಲಾಜಿ ಸಿಂಗ್, ಸಿಸಿಎಫ್ ಯಶಪಾಲ್, ಮಲೆನಾಡು ಹಿತರಕ್ಷಣಾ ವೇದಿಕೆಯ ಎಂ.ಎನ್.ನಾಗೇಶ್, ರಂಜಿತ್ ಶೃಂಗೇರಿ, ಅಭಿಷೇಕ್ ಹೊನ್ನಳ್ಳಿ, ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆಯ ಚಂದ್ರಶೇಖರ್ ರೈ, ಕಲ್ಮಕ್ಕಿ ಟಿ.ಎಂ.ಉಮೇಶ್, ಬಿ.ಕೆ.ಮದುಸೂಧನ್, ಮಹಮ್ಮದ್ ಹನೀಫ್, ಅರೇನೂರು ಸಂತೋಷ್, ರತ್ನಾಕರ ಗಡಿಗೇಶ್ವರ, ಸುಂದರೇಶ್ ಅತ್ತಿಕುಳಿ, ರವೀಂದ್ರ ಕುಕ್ಕೊಡಿಗೆ, ನವೀನ್ ಕರಗಣೆ, ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಭಾಗವಹಿಸಿದ್ದರು.

ಬಾಳೆಹೊನ್ನೂರು ತಲುಪಿದ ನಾಲ್ಕು ಸಾಕಾನೆ

ಕಡವಂತಿ ಬನ್ನೂರು ಸುತ್ತಮುತ್ತ ಮಾನವರ ಸಾವಿಗೆ ಕಾರಣವಾದ ಎರಡು ಪುಂಡಾನೆಗಳನ್ನು ಹಿಡಿಯಲು ಸಕ್ರೆಬೈಲಿನಿಂದ ಹೊರಟ ನಾಲ್ಕು ಆನೆಗಳು ಈಗಾಗಲೇ ಬಾಳೆಹೊನ್ನೂರು ತಲುಪಿವೆ. ‘ಉಳಿದ ಐದು ಆನೆಗಳು ಮಂಗಳವಾರ ಬರಲಿವೆ. ಕಾರ್ಯಾಚರಣೆ ಸೋಮವಾರದಿಂದಲೇ ಆರಂಭವಾಗಲಿದ್ದು ಎಲ್ಲರ ಸಹಕಾರ ಅಗತ್ಯ. ಅರವಿಳಿಕೆ ತಜ್ಞ ಮುರುಳಿ ಕೂಡ ಬಂದಿದ್ದಾರೆ. ಪುಂಡಾನೆಗಳ ಸುಳಿವು ಸಿಗುತ್ತಿದ್ದಂತೆ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಂತ– ಹಂತವಾಗಿ ಉಳಿದ ಪುಂಡಾನೆಗಳನ್ನು ಹಿಡಿಯಲು ಅನುಮತಿ ಪಡೆದು ಕಾರ್ಯಾಚರಣೆ ನಡೆಲಾಗುವುದು’ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಅರಣ್ಯ ಇಲಾಖೆ ಕಚೇರಿಗೆ ಬೀಗ 

ಖಾಂಡ್ಯ ಹೋಬಳಿಯ ನೂರಾರು ಜನ ಕಡಬಗೆರೆಯಲ್ಲಿ ರಾಜ್ಯ ಹೆದ್ದಾರಿಯನ್ನು ಒಂದು ಗಂಟೆಗೂ ಹೆಚ್ಚು ಕಾಲ ತಡೆದು ಪ್ರತಿಭಟಿಸಿದರು. ಸರ್ಕಾರದ ವಿರುದ್ಧ ಜೇನುಗದ್ದೆ ಚಂದ್ರಶೇಖರ್ ಹರಿಹಾಯ್ದರು. ನಂತರ ಪ್ರತಿಭಟನಾಕಾರರು ಅರಣ್ಯ ಇಲಾಖೆ ಕಚೇರಿಗೆ ತೆರಳಿ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.