ADVERTISEMENT

ಬೋರ್‌ವೆಲ್ ಸಾರ್ವಜನಿಕಗೊಳಿಸಲು ಒತ್ತಾಯ: ಅಧಿಕಾರಿಗಳ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:26 IST
Last Updated 12 ಫೆಬ್ರುವರಿ 2026, 7:26 IST
<div class="paragraphs"><p>ಚಿಕ್ಕಮಗಳೂರು-ಬಾಳೆಹೊನ್ನೂರು- ಶೃಂಗೇರಿ ರಸ್ತೆ</p></div>

ಚಿಕ್ಕಮಗಳೂರು-ಬಾಳೆಹೊನ್ನೂರು- ಶೃಂಗೇರಿ ರಸ್ತೆ

   

ಬಾಳೆಹೊನ್ನೂರು: ಹಿಡುವಳಿಯಲ್ಲಿ ಪಾಳುಬಿದ್ದಿರುವ 30 ವರ್ಷ ಹಳೆಯ ಬೋರ್‌ವೆಲ್‌ ಅನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೀರೇಗದ್ದೆ ಗ್ರಾಮದ ಶೇಖರ ಪೂಜಾರಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ವಿನಾಯಕ ನಗರದ ಸರ್ವೆ ನಂ. 51ರಲ್ಲಿ 26 ಗುಂಟೆ ಜಮೀನು ಹಕ್ಕುಪತ್ರ ಹೊಂದಿದ್ದು, ಕೃಷಿ ಮಾಡುತ್ತಿದ್ದೇನೆ. ತಂದೆಯ ಅವಧಿಯಲ್ಲಿ ಸ್ವಂತ ಉದ್ದೇಶಕ್ಕಾಗಿ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಲಾಗಿತ್ತು. ಆದರೆ, ಸಮರ್ಪಕವಾಗಿ ನೀರು ಸಿಗದ ಕಾರಣ ಅದು ಹಲವು ವರ್ಷಗಳಿಂದ ಬಳಕೆಯಲ್ಲಿಲ್ಲ ಎಂದರು.

ADVERTISEMENT

ವ್ಯಕ್ತಿಯೊಬ್ಬರು ವೈಯಕ್ತಿಕ ದ್ವೇಷದಿಂದ ಜಮೀನಿನಲ್ಲಿರುವ ಬೋರ್‌ವೆಲ್‌ ಅನ್ನು ಸಾರ್ವಜನಿಕಗೊಳಿಸುವಂತೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸ್ಥಳ ಪರಿಶೀಲನೆ ಮಾಡದೆ, ಮೂರು ದಿನಗಳೊಳಗೆ ಬೋರ್‌ವೆಲ್‌ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ನೋಟಿಸ್ ನೀಡಿದ್ದಾರೆ. ಇದರಿಂದ ಮಾನಸಿಕ ಒತ್ತಡ ಉಂಟಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸ್ಥಳ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿ ಮುಖಂಡ ಅರೇನೂರು ಸಂತೋಷ್ ಮಾತನಾಡಿ, ‘ಶೇಖರ ಪೂಜಾರಿ ಅವರ ಜಮೀನಿನಲ್ಲಿ ಸರ್ಕಾರದಿಂದ ಬೋರ್‌ವೆಲ್ ಕೊರೆಸಿದ ಬಗ್ಗೆ ಯಾವುದೇ ದಾಖಲೆ ಇಲ್ಲವೆಂದು ಹೀರೇಗದ್ದೆ ಗ್ರಾಮ ಪಂಚಾಯಿತಿ ಪಿಡಿಒ ಹಿಂಬರಹ ನೀಡಿದ್ದಾರೆ. ರಾಜಕೀಯ ದ್ವೇಷದಿಂದ ಸಣ್ಣ ವಿಷಯವನ್ನು ವಿವಾದ ಮಾಡಲಾಗಿದೆ. ಬೋರ್‌ವೆಲ್‌ನಲ್ಲಿ ನೀರಿಲ್ಲದ ಕಾರಣ ಇದುವರೆಗೂ ಯಾರೂ ಬಳಸಿಲ್ಲ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ನೀಡಿದ ನೋಟಿಸ್‌ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಹೀರೇಗದ್ದೆ ಬಿಜೆಪಿ ಮುಖಂಡ ಕೋಗಳಿ ಪ್ರಭಾಕರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.