ADVERTISEMENT

ಗೊಂದಲದ ಗೂಡಾದ ಕಾರ್ಯಕ್ರಮ

ಬಿಜೆಪಿ– ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 3:23 IST
Last Updated 11 ಜುಲೈ 2021, 3:23 IST
ಬಾಳೆಹೊನ್ನೂರಿನ ವಿದ್ಯಾಗಣಪತಿ ಸಮುದಾಯಭವನದಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ಬಾಳೆಹೊನ್ನೂರಿನ ವಿದ್ಯಾಗಣಪತಿ ಸಮುದಾಯಭವನದಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.   

ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ ಕಾರ್ಯಕ್ರಮವು ಗೊಂದಲದ ಗೂಡಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತ ತಲುಪಿತು.

ಮದ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಮಹಮ್ಮದ್ ಹನೀಫ್ ಎಲ್ಲರಿಗೂ ಸಂದೇಶ ಕಳುಹಿಸಿದ್ದರು. ಬಿ.ಕಣಬೂರು, ಮಾಗುಂಡಿ, ಬನ್ನೂರು, ಆಡುವಳ್ಳಿ ಹಾಗೂ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಕಾರ್ಮಿಕರು ಸಾಲುಗಟ್ಟಿ ನಿಂತಿದ್ದರು.

ಅಲ್ಲಿಗೆ ಬಂದ ಬನ್ನೂರು, ಆಡುವಳ್ಳಿ ಹಾಗೂ ಬಿ.ಕಣಬೂರು ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರು, ‘ಕಿಟ್ ವಿತರಣೆ ಸರ್ಕಾರದ ಕಾರ್ಯಕ್ರಮವಾಗಿದ್ದರೂ ಈ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ಏಕೆ ನೀಡಿಲ್ಲ? ಈ ಬಗ್ಗೆ ಹಲವು ಕಾರ್ಮಿಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಇದನ್ನು ಶಾಸಕರು ವೈಯಕ್ತಿಕವಾಗಿ ನೀಡುತ್ತಿರುವುದಾಗಿ ಬಿಂಬಿಸುತ್ತಿದ್ದೀರಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಜೆ.ಮಹೇಶ್ ಆಚಾರ್ಯ ಹಾಗೂ ಮಹಮ್ಮದ್ ಹನೀಫ್ ಕಾಂಗ್ರೆಸ್‌ ಕಾರ್ಯಕರ್ತರಿಗೆ ಟೋಕನ್ ನೀಡುತ್ತಿದ್ದಾರೆ. ಅವರನ್ನು ಹೊರ ಕಳುಹಿಸಿ’ ಎಂದು ಅಧಿಕಾರಿಗಳಿಗೆ ಬಿಜೆಪಿ ಮುಖಂಡರು ಒತ್ತಾಯ ಮಾಡಿದರು.

ಈ ವೇಳೆ ಬಿಜೆಪಿ ಹೋಬಳಿ ಅಧ್ಯಕ್ಷ ಪ್ರಭಾಕರ್ ಪ್ರಣಸ್ವಿ, ಕಾರ್ಯದರ್ಶಿ ಕಿಚ್ಚಬ್ಬಿ ಪ್ರದೀಪ್, ಬಿ ಕಣಬೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ಜಗದೀಶ್ಚಂದ್ರ, ಯು.ಅಶ್ರಫ್ ಸೇರಿದಂತೆ ಹಲವರು ಸ್ಥಳಕ್ಕೆ ಬಂದರು.

ಈ ಮಧ್ಯೆ ಶಾಸಕರು ಮಧ್ಯಾಹ್ನ 3.30 ಆದರೂ ಬರಲಿಲ್ಲ. ಬೇರೆ ಕಡೆಗಳಿಂದ ಕಾರ್ಮಿಕರು ಬಂದಿದ್ದು ಅವರಿಗೆ ತಕ್ಷಣ ಕಿಟ್ ವಿತರಿಸುವಂತೆ ಬಿಜೆಪಿ ಮುಖಂಡರು ಆಗ್ರಹಿಸಿದರು. ಈ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್‌ನ ಎಂ.ಎಸ್.ಅರುಣೇಶ್, ಇಬ್ರಾಹಿಂ ಶಾಫಿ ಮತ್ತಿತರರು ಶಾಸಕರನ್ನು ಸಮರ್ಥಿಸಲು ಮುಂದಾದರು.

ಇದರಿಂದ ಆಕ್ರೋಶಗೊಂಡ ಬಿಜೆಪಿ ಮುಖಂಡರು, ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಸ್ಥಳದಲ್ಲೇ ಕುಳಿತು ಪ್ರತಿಭಟನೆಗೆ ಮುಂದಾದರು. ಈ ವೇಳೆ ಎರಡೂ ಪಕ್ಷದ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತ ತಲುಪಿತು.

ಸ್ಥಳಕ್ಕೆ ಬಂದ ಠಾಣಾಧಿಕಾರಿ ನಿತ್ಯಾನಂದ ಗೌಡ ಮತ್ತು ಸಿಬ್ಂದಿ ಎರಡೂ ಕಡೆಯವರನ್ನು ಸಮಾಧಾನಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಪಟ್ಟು ಬಿಡದ ಬಿಜೆಪಿ ಮುಖಂಡರು ಶಾಸಕರು ಸ್ಥಳಕ್ಕೆ ಬರುವ ಮುನ್ನ ಹಲವರಿಗೆ ಅಧಿಕಾರಿಗಳ ಮೂಲಕ ಆಹಾರದ ಕಿಟ್ ವಿತರಿಸಿದರು.

ಆಡುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಸಿ.ಪ್ರದೀಪ್, ಉಪಾಧ್ಯಕ್ಷೆ ಪ್ರತಿಮಾ ಶಶಿಧರ್, ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುರಾ ರಾಜಪ್ಪ ಗೌಡ, ಉಪಾಧ್ಯಕ್ಷ ಗೋಪಾಲ್, ಮಾಗುಂಡಿ ಅಧ್ಯಕ್ಷೆ ಪ್ರಮೀಳಾ ಸೆಲ್ವಿಯಾ ಸೇರಾವೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.