ADVERTISEMENT

ಎಸ್‌ಡಿಪಿಐ, ಪಿಎಫ್‌ಐ ನಿಷೇಧಿಸಿ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 5:38 IST
Last Updated 25 ಸೆಪ್ಟೆಂಬರ್ 2022, 5:38 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಸಿಮಿ ಸಂಘಟನೆಯ ಮತ್ತೊಂದು ಅವತಾರದಂತಿರುವ ಎಸ್‌ಡಿಪಿಐ (ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ), ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಸಂಘಟನೆಗಳನ್ನು ದೇಶದ ಹಿತದೃಷ್ಟಿಯಿಂದ ನಿಷೇಧಿಸಲೇಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಪಾದಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಸ್‌ಡಿಪಿಐ, ಪಿಎಫ್‌ಐ ಕೇಂದ್ರಿತವಾಗಿ ಎನ್‌ಐಎ ತಂಡವು ದಾಳಿ ನಡೆಸಿ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ. ದೇಶದ ವಿರುದ್ಧ ಷಡ್ಯಂತ್ರದಲ್ಲಿ ಅವರು ತೊಡಗಿದ್ದರು ಎಂಬ ಪ್ರಾಥಮಿಕ ಮಾಹಿತಿ ಇದೆ’ ಎಂದು ಪ್ರತಿಕ್ರಿಯಿಸಿದರು.

‘20 ವರ್ಷಗಳ ಹಿಂದೆ ಜಿಲ್ಲೆಯ ಕೊಪ್ಪ ಭಾಗದಲ್ಲಿ ಉಗ್ರರಿಗೆ ತರಬೇತಿ ನಂಟು ಇತ್ತು. ಭಟ್ಕಳ, ಮಂಗಳೂರಿನಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸಿದವರು ಜಿಲ್ಲೆಯಲ್ಲಿ ನೆಲೆ ಕಂಡುಕೊಂಡಿದ್ದರು. ಜಿಲ್ಲೆಯನ್ನು ಉಗ್ರರು ತರಬೇತಿ ತಾಣವಾಗಿಸಿಕೊಳ್ಳುವ ಸಾಧ್ಯತೆ ಇದ್ದು, ಪೊಲೀಸ್‌ ಗುಪ್ತಚರ ವಿಭಾಗವನ್ನು ಬಲಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ’ ಎಂದರು.

ADVERTISEMENT

‘ರಾಜಕಾರಣದ ಹೊರತಾಗಿ ದೇಶದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ನಿಲ್ಲುವ ಅಗತ್ಯ ಇದೆ. ವೋಟ್‌ ಬ್ಯಾಂಕ್‌ಗಾಗಿ ದೇಶದ ಹಿತಾಸಕ್ತಿಯನ್ನು ಕಡೆಗಣಿಸಬಾರದು’ ಎಂದರು.

‘ಹಿಂದಿನ ಕಾಂಗ್ರೆಸ್‌ ಸರ್ಕಾರವು ಹೈಕಮಾಂಡ್‌ಗೆ ಕಪ್ಪ ಒಪ್ಪಿಸುವ ‘ಎಟಿಎಂ’ ಕಾರ್ಯ ಮಾಡಿಕೊಂಡಿತ್ತು. ಅದೇ ಗುಂಗಿನಲ್ಲಿ ಈಗ ಕಾಂಗ್ರೆಸ್‌ನವರು ‘ಪೇ ಸಿಎಂ’ ಪೋಸ್ಟರ್‌ ಹಾಕಿದ್ದಾರೆ, ಅಂದರೆ ‘ಪೇ ಫಾರ್‌ ಕಾಂಗ್ರೆಸ್‌ ಮೇಡಂ’ ಎಂದರ್ಥ. ಪೋಸ್ಟರ್‌ನಲ್ಲಿ ಅಧಿನಾಯಕಿ (ಸೋನಿಯಾ ಗಾಂಧಿ) ಫೋಟೊ ಬದಲಿಗೆ ತಪ್ಪಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೊ ಹಾಕಿದ್ದಾರೆ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.