ತರೀಕೆರೆ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯಿಂದ ರಸ್ತೆ ಮತ್ತಷ್ಟು ಹಾಳಾಗಿರುವುದು
ತರೀಕೆರೆ: ‘ಪಟ್ಟಣದ ಮುಖ್ಯ ರಸ್ತೆಯಾಗಿರುವ ಬಿ.ಎಚ್. ರಸ್ತೆಯ ವಿಸ್ತರಣೆ ಕಾಮಗಾರಿ ಪೂರ್ವ ಸಿದ್ಧತೆ ಇಲ್ಲದೆ ಅವೈಜ್ಞಾನಿಕವಾಗಿ ಆರಂಭಿಸಲಾಗಿದೆ. ಇದರಿಂದ ಅಮಾಯಕರ ಪ್ರಾಣಕ್ಕೆ ಕುತ್ತು ತಂದಿದೆ’ ಎಂದು ವಕೀಲ ಜಿ.ಸುಬ್ರಹ್ಮಣ್ಯ ಆರೋಪಿಸಿದ್ದಾರೆ.
ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ಈಗ ಚಾಲನೆ ದೊರೆತಿದೆ ಎಂಬ ಸಂತೋಷ ಇದೆ. ಆದರೆ, ಮಳೆಗಾಲದಲ್ಲಿ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಜೀವ ಬಿಗಿ ಹಿಡಿದು ವಾಹನ ಚಾಲನೆ ಮಾಡಬೇಕಾದ ಸ್ಥಿತಿ ಇದೆ. ಶಾಲಾ ಮಕ್ಕಳು, ಪಾದಚಾರಿಗಳು ಕೆಸರು ಮತ್ತು ಗುಂಡಿಗಳಲ್ಲೆ ನಡೆಯಬೇಕಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ವಾಹನಗಳು ಬಂದಾಗ ಪಾದಚಾರಿಗಳು ರಸ್ತೆಗೆ ಬದಿಗೆ ಹೋಗಲು ಸಾಧ್ಯವಾಗದೆ ಜಾರಿ ಬೀಳುತ್ತಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತ, ಶಾಸಕರು ಗಮನ ಹರಿಸಿಲ್ಲ. ಇದರಿಂದ ಇನ್ನೆಷ್ಟು ಜನರ ಪ್ರಾಣ ಹೋಗಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದವರು ಜನರ ಸಮಸ್ಯೆ ಬಗ್ಗೆ ಹೋರಾಟ ಮಾಡದೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಪಟ್ಟಣದ ಸೌಂದರ್ಯ ಹೆಚ್ಚಿಸಲು, ವಾಹನ ಸಂಚಾರ ಸುಗಮಕ್ಕೆ ಕೋಡಿ ಕ್ಯಾಂಪ್, ಎಂ.ಜಿ. ರಸ್ತೆ, ಪ್ರವಾಸಿ ಮಂದಿರ ಕೂಡು ರಸ್ತೆಗಳ ಬಳಿ ವೃತ್ತ ನಿರ್ಮಿಸುವ ಅಗತ್ಯವಿದೆ. ಕಾಮಗಾರಿ ಗಮನಿಸಿದರೆ ಪ್ರವಾಸಿ ಮಂದಿರ ವೃತ್ತ, ಗಾಂಧಿ ವೃತ್ತದ ಮಾತ್ರ ಉಳಿಯಲಿದೆ. ಅದು ಕೂಡ ಸಮರ್ಪಕವಾಗಿ ಅಭಿವೃದ್ಧಿಯಾಗುವ ಅನುಮಾನ ಇದೆ ಎಂದಿದ್ದಾರೆ.
ಈಗಲಾದರೂ ವೈಜ್ಞಾನಿಕ ಕಾಮಗಾರಿ ನಿರ್ವಹಿಸಬೇಕು. ಜನರ ಪ್ರಾಣ ಉಳಿಸಲು ತಾಲ್ಲೂಕು ಆಡಳಿತ, ಶಾಸಕರು ಮುಂದಾಗಬೇಕು. ಕಾಮಗಾರಿ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಗುತ್ತಿಗೆದಾರರ ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.