ಕಡೂರು: ಬಾಲ್ಯ ವಿವಾಹ, ಶಿಕ್ಷಣದ ಕೊರತೆ ಮತ್ತು ಲೈಂಗಿಕ ದೌರ್ಜನ್ಯಗಳಿಂದ ಬಾಲಕಿಯರು, ಬಾಲಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ‘ಭದ್ರಬಾಲ್ಯದ’ ಪ್ರಧಾನ ಆಶಯಗಳಾಗಿದ್ದು, ಅದಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಸಿ.ಆರ್.ಪ್ರವೀಣ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಬಿಸಿಎಂ ಇಲಾಖೆ ಕಡೂರು, ತಾಲ್ಲೂಕು ಆಡಳಿತ, ಜಿಲ್ಲಾ ಪಂಚಾಯಿತಿ, ಕೆಎಚ್‌ಪಿಟಿ (ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್) ಸಹಯೋಗದಲ್ಲಿ ಆಶಾ, ಅಂಗನವಾಡಿ ಕಾರ್ಯರ್ತೆಯರು, ಶಾಲಾ ಮುಖ್ಯಶಿಕ್ಷಕರು ಹಾಗೂ ಪಿಡಿಒಗಳಿಗೆ ಹಮ್ಮಿಕೊಂಡಿರುವ ಭದ್ರಬಾಲ್ಯ ಯೋಜನೆಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 24,436 ಬಾಲ ಗರ್ಭಿಣಿಯರ ಸಂಖ್ಯೆ ದಾಖಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಎಸ್.ಕೀರ್ತನಾ ಅವರ ಪರಿಕಲ್ಪನೆಯಂತೆ ‘ಭದ್ರಬಾಲ್ಯ’ ಎಂಬ ಹೆಸರಿನಡಿ ಕಾರ್ಯಕ್ರಮವನ್ನು ಸಂಯೋಜಿಸಿ ಅತಿ ಹೆಚ್ಚು ಬಾಲಗರ್ಭಿಣಿಯರು ಕಂಡು ಬಂದಿರುವ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕಾವಲು ಸಮಿತಿಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಎಳೆಯರ ಜೀವನವನ್ನು ಸುರಕ್ಷಿತ ರೀತಿಯಲ್ಲಿ ರೂಪುಗೊಳಿಸುವ ನಿಟ್ಟಿನಲ್ಲಿ ಕಾವಲು ಸಮಿತಿಗಳು ಕಾರ್ಯ ನಿರ್ವಹಿಸಬೇಕು ಎಂದು ಮಾಹಿತಿ ನೀಡಿದರು.
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒ ಮತ್ತು ಶಾಲೆಯ ಮುಖ್ಯಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಇವರು ಕಾವಲು ಸಮಿತಿಯ ಸದಸ್ಯರಾಗಿದ್ದಾರೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮಿತಿಯು ಸಕ್ರಿಯಗೊಂಡು, ಪ್ರತಿ ಮಗುವು ಸುರಕ್ಷಿತ, ಗೌರವಪೂರ್ವಕ ಬಾಲ್ಯವನ್ನು ಅನುಭವಿಸುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಮಕ್ಕಳನ್ನು ಬಾಲ್ಯವಿವಾಹ, ಲೈಂಗಿಕ ಶೋಷಣೆ, ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ, ಬಾಲಕಾರ್ಮಿಕ ಪದ್ಧತಿ, ಮನೆ, ಪರಿಸರದಲ್ಲಿ ಆಗುವ ಕಿರುಕುಳ, ನಿಂದನೆ ಒತ್ತಡಗಳು ಸಾಮಾಜಿಕ ದುರಂತಗಳಿಗೆ ಬಲಿಯಾಗದಂತೆ ತಡೆಯುವುದು ಕಾವಲು ಸಮಿತಿಯ ಮುಖ್ಯ ಉದ್ದೇಶವಾಗಿದೆ. ಇಂತಹ ಪ್ರಕರಣ ಕಂಡು ಬಂದರೆ ಮೊದಲು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗುರುತಿಸಿ ಸಂಬಂಧಿಸಿದ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಗ್ರಾಮಗಳಲ್ಲಿನ ಪರಿಶಿಷ್ಟ ಜಾತಿ, ಪಂಗಡ, ಕಾಲೊನಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಶಾಲೆ ಬಿಟ್ಟ ಮಕ್ಕಳು ಹೆಚ್ಚಿನ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು ಇದನ್ನು ತಪ್ಪಿಸಬೇಕು. ದುರ್ಬಲ ವರ್ಗದವರನ್ನು ಗುರುತಿಸಿ ಅವರ ಪರವಾಗಿ ನಿಲ್ಲಬೇಕು ಎಂದು ಸೂಚನೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಿವಯೋಗಿ ಬಿ.ಹಿರೇಮಠ್, ಬಾಗಲಕೋಟೆಯ ಅರ್ಜುನ್ ಮಿರ್ಜಿ, ವಿಜಯಪುರದ ವಿಜಯಲಕ್ಷ್ಮಿ, ಕೊಪ್ಪಳದ ನೇತ್ರಾವತಿ ತರಬೇತಿ ನೀಡಿದರು. ತಾಲ್ಲೂಕು ಬಿಸಿಎಂ ಅಧಿಕಾರಿ ದೇವರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಪ್ರಕಾಶ್ ಹಾಜರಿದ್ದರು.
ಎಲ್ಲೆಡೆ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಲು ಕಾವಲು ಸಮಿತಿ ನಿಷ್ಕ್ರಿಯವೇ ಪ್ರಮುಖ ಕಾರಣ. ಹಾಗಾಗಿ ಭದ್ರಬಾಲ್ಯ ಯೋಜನೆ ಅನುಷ್ಠಾನಕ್ಕೆ ಪ್ರತಿ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು.ಸಿ.ಆರ್.ಪ್ರವೀಣ್ ತಾಲ್ಲೂಕು ಪಂಚಾಯಿತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.