ಮೂಡಿಗೆರೆ: ಕೂವೆ ಗ್ರಾ.ಪಂ. ವ್ಯಾಪ್ತಿಯ ಹೊಳೆಕೂಡಿಗೆ ಗ್ರಾಮದ ಜನರು ತೆಪ್ಪದ ಮೂಲಕ ಭದ್ರಾನದಿ ದಾಟಬೇಕಿದ್ದು, ಹೊಳೆಯಾಚೆಗೆ ನಿವೇಶನ, ಮನೆಯನ್ನಾದರೂ ಕೊಡಿ ಎಂದು ಅಂಗಲಾಚಿದ್ದಾರೆ.
ಹೊಳೆಕೂಡಿಗೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಏಳು ಕುಟುಂಬಗಳು 5 ದಶಕಗಳಿಗೂ ಅಧಿಕ ಕಾಲದಿಂದ ನೆಲೆಸಿದ್ದು, ಶಾಲೆಗೆ ತೆರಳುವ ಮಕ್ಕಳು ಸೇರಿದಂತೆ ಕೆಲಸ–ಕಾರ್ಯಗಳಿಗೆ ಊರಿನಿಂದ ಯಾರೇ ಹೊರಗೆ ಬರಬೇಕಾದರೆ ತೆಪ್ಪದ ಮೂಲಕವೇ ಸಾಗಬೇಕಿದೆ. ಈಗ ಭದ್ರಾ ನದಿಯು ತುಂಬಿ ಹರಿಯುತ್ತಿದ್ದು, ಜೀವದ ಹಂಗನ್ನು ತೊರೆದು ನದಿ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಕಿರು ಸೇತುವೆಯನ್ನಾದರೂ ನಿರ್ಮಿಸಿಕೊಡಿ ಎಂದು ಹಲವು ವರ್ಷಗಳಿಂದ ಮನವಿ ಮಾಡುತ್ತಿರುವ ಇಲ್ಲಿನ ಜನರ ಸೇತುವೆಯ ಕನಸು ಇದುವರೆಗೂ ಈಡೇರಿಲ್ಲ.
ಅನಾರೋಗ್ಯ ಉಂಟಾದರೆ, ಇಡೀ ಊರಿಗೆ ನರಕ ದರ್ಶನವಾಗುತ್ತದೆ. ಅನಾರೋಗ್ಯ ಪೀಡಿತ ವ್ಯಕ್ತಿಗಳನ್ನು ಹೊಳೆಯವರೆಗೂ ಹೊತ್ತು ತಂದು ತೆಪ್ಪದಲ್ಲಿ ಮಲಗಿಸಿ ಹೊಳೆ ದಾಟಿಸಬೇಕಾದ ಪರಿಸ್ಥಿತಿ ಇದೆ. ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ ಹೆಣವನ್ನು ಕೂಡ ಇದೇ ತೆಪ್ಪದಲ್ಲಿ ಸಾಗಿಸಬೇಕಾದ ದುಃಸ್ಥಿತಿ ಇದೆ ಎಂದು ಜನರು ತಮ್ಮ ಅಳಲು ತೋಡಿಕೊಂಡರು.
ಈಚೆಗೆ ಸುರಿದ ಮಳೆಯಿಂದ ನದಿ ತುಂಬಿ ಹರಿಯುತ್ತಿತ್ತು. ಗ್ರಾಮದಿಂದ ಕೂಲಿ ಕೆಲಸಕ್ಕಾಗಿ ಹೊರ ಹೋಗಿದ್ದ ಮೂವರು, ತುಂಬಿ ಹರಿಯುತ್ತಿದ್ದ ಹೊಳೆ ದಾಟಲು ಪ್ರಯತ್ನಿಸಿ ತೆಪ್ಪ 50ಮೀ ಕೊಚ್ಚಿಕೊಂಡು ಹೋಗಿದ್ದು, ಅದರಿಂದ ತಪ್ಪಿಸಿಕೊಂಡ ಆ ಮೂವರು ವಾರದವರೆಗೂ ನೆಂಟರ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದೆನಿಸುತ್ತದೆ. ಹಿರಿಯರು ಮಾಡಿರುವ ಜಮೀನು ಜೀವನಾಧಾರವಾಗಿದ್ದು, ಬಿಟ್ಟು ಬರಲಾಗದೇ, ಇಲ್ಲಿಯೇ ಉಳಿದುಕೊಳ್ಳಲೂ ಸಾಧ್ಯವಾಗದೇ ಅಡ್ಡಕತ್ತರಿಯಲ್ಲಿ ಸಿಲುಕಿದಂತಾಗಿದೆ ನಮ್ಮ ಬದುಕು ಎನ್ನುತ್ತಾರೆ ಗ್ರಾಮಸ್ಥ ದಿನೇಶ್.
ತಂದೆಯ ಕಾಲದಿಂದಲೂ ಸೇತುವೆ ನಿರ್ಮಾಣಕ್ಕೆ ಸಿಕ್ಕವರಿಗೆಲ್ಲಾ ಮನವಿ ಕೊಟ್ಟಿದ್ದೇವೆ. ಮತ ಬ್ಯಾಂಕಿರುವ ಗ್ರಾಮವಲ್ಲದ ಕಾರಣ ಎಲ್ಲರೂ ನಮ್ಮನ್ನು ನಿರ್ಲಕ್ಷಿಸಿದ್ದಾರೆ. ಹಿಂದೆ ದಯಾ ಮರಣಕ್ಕೂ ಅರ್ಜಿ ಕೊಟ್ಟಿದ್ದೆವು. ಗ್ರಾಮಕ್ಕೆ ಬಂದವರೆಲ್ಲಾ ಸೇತುವೆ ಕನಸು ಕಟ್ಟಿ ಹೋಗುತ್ತಾರೆ. ನಮ್ಮವರು ಯಾರೂ ನಕ್ಸಲರಾಗಲಿಲ್ಲ. ಒಮ್ಮೊಮ್ಮೆ ನಾವೂ ಬಂದೂಕಿನ ದಾರಿ ಹಿಡಿದಿದ್ದರೆ ಚೆನ್ನಾಗಿರುತ್ತಿತ್ತೇನೋ ಎನಿಸುತ್ತದೆ. ಏಕೆಂದರೆ ಬಂದೂಕು ಹಿಡಿದವರ ಗ್ರಾಮಗಳು ಕನಿಷ್ಠ ಸೌಲಭ್ಯವನ್ನಾದರೂ ಕಾಣುವಂತಾಗಿದೆ. ಆದರೆ, ನಮಗೆ ಆ ಭಾಗ್ಯವೂ ಇಲ್ಲ. ಕೆಲವೊಮ್ಮೆ ಪೋಷಕರು ಇಲ್ಲದಿದ್ದಾಗ, ಮನೆಗೆ ಬರಬೇಕಾದ ಸಣ್ಣ ಮಕ್ಕಳು ಹಳ್ಳದ ಬದಿಯೇ ರಾತ್ರಿವರೆಗೂ ಕಾದು ನಿಲ್ಲಬೇಕಾಗುತ್ತದೆ. ಅಭಿವೃದ್ಧಿಯ ಬಗ್ಗೆ ಭಾಷಣ ಮಾಡುವರೆಲ್ಲಾ ನಾವೂ ಮನುಷ್ಯರು ಎಂದು ಅರ್ಥೈಸಿಕೊಂಡಿದ್ದರೆ ನಮ್ಮ ಗ್ರಾಮಕ್ಕೂ ಸೇತುವೆ ಭಾಗ್ಯ ಸಿಗುತ್ತಿತ್ತು ಎಂದು ಗ್ರಾಮಸ್ಥ ಚಂದ್ರಶೇಕರ್ ಗದ್ಗದಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.