ADVERTISEMENT

‘ಭದ್ರೆ’ ಬರುವಿಕೆಗೆ ಕಾಯ್ದ ಚೌಳಹಿರಿಯೂರು

ದುರಸ್ತಿಯಾಗದ ನಾಲೆ, ದುಸ್ಥಿತಿಯಲ್ಲಿರುವ ತೂಬುಗಳು

ವಿಜಯಕುಮಾರ್ ಎಸ್.ಕೆ.
Published 1 ಆಗಸ್ಟ್ 2025, 6:29 IST
Last Updated 1 ಆಗಸ್ಟ್ 2025, 6:29 IST
ಕಡೂರು ತಾಲ್ಲೂಕಿನ ಚೌಳಹಿರಿಯೂರು ಕೆರೆ ಖಾಲಿಯಾಗಿರುವುದು
ಕಡೂರು ತಾಲ್ಲೂಕಿನ ಚೌಳಹಿರಿಯೂರು ಕೆರೆ ಖಾಲಿಯಾಗಿರುವುದು   

ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಗಡಿಭಾಗದ ಕೃಷಿ ಮತ್ತು ಅಂತರ್ಜಲಕ್ಕೆ ಆಸರೆಯಾಗಿರುವ ಚೌಳಹಿರಿಯೂರು ಊರ ಮುಂದಿನ ಕೆರೆಗೆ ಭದ್ರಾ ನೀರು ಬರಲಿದೆ ಎಂಬ ಕಾತುರದಲ್ಲಿ ಜನರಿದ್ದರೆ, ದುರಸ್ತಿಯಾಗದ ನಾಲೆಯಲ್ಲಿ ಹಲವು ಸವಾಲುಗಳನ್ನು ದಾಟಿ ನೀರು ಹರಿಯುವುದೇ ಎಂಬ ಆತಂಕವೂ ಗ್ರಾಮಸ್ಥರನ್ನು ಕಾಡುತ್ತಿದೆ.

1889ರಲ್ಲಿ ನಿರ್ಮಾಣವಾದ ಕೆರೆ ಈಗ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದೆ. 42 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. 140 ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರು ಒದಗಿಸುತ್ತದೆ. 2.69 ಚದರ ಕಿಲೋ ಮೀಟರ‌್ ಜಲಾನಯನ ಪ್ರದೇಶದ ಈ ಕೆರೆಗೆ ಗ್ರಾಮದ ಮೇಲ್ಭಾಗದಲ್ಲಿರುವ ಕಲ್ಕೆರೆ ಕೆರೆ ಅಥವಾ ಕುಕ್ಕಸಮುದ್ರ ಕೆರೆಯೇ ಜಲಮೂಲವಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಯಡಿ ಕುಕ್ಕಸಮುದ್ರ ಕೆರೆಗೆ ನೀರು ಈಗಾಗಲೇ ಹರಿದಿದ್ದು, ಆ ಕೆರೆ ಈಗ ಭರ್ತಿಯಾಗಿದೆ. ಇಲ್ಲಿಂದ 9 ಕಿಲೋ ಮೀಟರ್ ದೂರ ನಾಲೆಯ ಮೂಲಕ ಚೌಳಹಿರಿಯೂರು ಊರ ಮುಂದಿನ ಕೆರೆಗೆ ನೀರು ಹರಿದು ಬರಬೇಕಿದೆ. ಈ ಕೆರೆ ಕೋಡಿ ಬಿದ್ದರೆ ವೇದಾ ನದಿಯ ಮೂಲಕ ನೀರು ಹಿರಿಯೂರು ತಲುಪಲಿದೆ.

ADVERTISEMENT

ಕುಕ್ಕಸಮುದ್ರ ಕೆರೆಯಿಂದ ಚೌಳಹಿರಿಯೂರು ಕೆರೆಗೆ ಬರುವ ದಾರಿಯಲ್ಲಿ 17 ತೂಬುಗಳನ್ನು ದಾಟಬೇಕಿದೆ. ನಿರ್ವಹಣೆ ಇಲ್ಲದ ತೂಬುಗಳು ಮತ್ತು ದುರಸ್ತಿಯಾಗದ ನಾಲೆಯಲ್ಲಿ ನೀರು ಹರಿದು ಕೆರೆ ಸೇರುವುದೇ ಎಂಬ ಆತಂಕ ಗ್ರಾಮದ ರೈತರಲ್ಲಿದೆ.

‘ನಾಲೆಯಲ್ಲಿ ಅಲ್ಲಲ್ಲಿ ಇರುವ ತೂಬುಗಳನ್ನು ಮುಚ್ಚುವ ಮತ್ತು ತೆರೆಯುವ ಸ್ಥಿತಿಯಲ್ಲಿ ಇಲ್ಲ. ಬಹುತೇಕ ತೂಬುಗಳು ಜಖಂಗೊಂಡ ಸ್ಥಿತಿಯಲ್ಲಿದ್ದು, ಚಾಲ್ತಿಯಲ್ಲಿ ಇಲ್ಲ. ನಾಲೆಯ ಏರಿ ಮೇಲೆ ಕಾಡು ಬೆಳೆದಿದ್ದು, ವಾಹನ ಅಥವಾ ಜನ ಓಡಾಡುವ ಸ್ಥಿತಿಯಲ್ಲಿ ಇಲ್ಲ. ಇದರಿಂದಾಗಿ ಕುಕ್ಕಸಮುದ್ರ ಕೆರೆಯಿಂದ ಹೊರಡುವ ನೀರು ನಮ್ಮ ಕೆರೆ ತಲುಪುವುದೇ ಕಷ್ಟ’ ಎನ್ನುತ್ತಾರೆ ಗ್ರಾಮಸ್ಥರು.

‘ತೂಬುಗಳನ್ನು ದುರಸ್ತಿಪಡಿಸಿ ಕೆರೆಗೆ ನೀರು ಹರಿಸಬೇಕು ಎಂದು 10 ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ.  ಇತ್ತೀಚೆಗೆ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಈಗ ಕುಕ್ಕಸಮುದ್ರ ಕೆರೆ ತುಂಬಿದ್ದು, ಮುಂದಿನ ಕೆರೆಗೆ ನೀರು ಹರಿಯಬೇಕೆಂದರೆ ಸರಾಗವಾಗಿ ಹರಿದುಬರುವ ನಾಲೆ ಇರಬೇಕು. ಕನಿಷ್ಠ ಸಣ್ಣಪುಟ್ಟ ದುರಸ್ತಿಯನ್ನೂ ಮಾಡಿಲ್ಲ. ತೂಬುಗಳನ್ನು ತಾತ್ಕಾಲಿಕವಾಗಿ ಮುಚ್ಚಿ ನೀರು ಹರಿಸಬೇಕು’ ಎಂದು ಗ್ರಾಮಸ್ಥರಾದ ಅಶೋಕ್‌ಕುಮಾರ್ ಹೇಳಿದರು.

ಹಲವು ವರ್ಷಗಳಿಂದ ಹೂಳು ತುಂಬಿಕೊಂಡಿದೆ. ಹೂಳು ತೆಗೆಯಬೇಕು, ಏರಿ, ಕೋಡಿ, ಕಾಲುವೆಗಳ ದುರಸ್ತಿ ಮಾಡಲು ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಹೂಳು ತೆಗೆಯುವ ಕೆಲಸ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ನಾಲೆ ಮತ್ತು ತೂಬುಗಳ ದುರಸ್ತಿಗೆ ಸಣ್ಣ ನೀರಾವರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೆ, ಮಂಜೂರಾತಿ ದೊರಕದ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ.

ಕೆರೆಗೆ ನೀರು ಹರಿಸಲು ಕ್ರಮ ‘ಕುಕ್ಕಸಮುದ್ರ ಕೆರೆಯ ಗೇಟ್ ತೆರೆದು ಚೌಳಹಿರಿಯೂರು ಕೆರೆಗೆ ನೀರು ಹರಿಸುವ ಕಾರ್ಯವನ್ನು ಶುಕ್ರವಾರ ಆರಂಭಿಸಲಾಗುವುದು’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ದಕ್ಷಿಣಮೂರ್ತಿ ತಿಳಿಸಿದರು. ‘ನಮ್ಮ ಇಲಾಖೆಯ ನಾಲೆಯ ಮೂಲಕ ನೀರು ಹರಿಯಲಿದೆ. ಅಲ್ಲಲ್ಲಿ ತೂಬುಗಳಿದ್ದು ಅವು ಹಳೆಯದಾಗಿವೆ. ಅವುಗಳು ಗೇಟ್‌ಗಳು ಹಾಳಾಗಿದ್ದು ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ತಾತ್ಕಾಲಿಕವಾಗಿ ಬಂದ್ ಮಾಡಿ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು. ನಾಲೆಯಿಂದ ಚೌಳಹಿರಿಯೂರಿಗೆ ನೀರು ಹರಿಯುವ ತನಕ ಹಿಟಾಚಿ ಜೊತೆಯಲ್ಲೇ ಸಾಗಲಿದೆ. ನಾಲೆಯಲ್ಲಿ ತಾತ್ಕಾಲಿಕ ತಡೆಗಳಿದ್ದರೆ ತೆರವುಗೊಳಿಸಲಾಗುವುದು. ತೂಬುಗಳನ್ನು ಮುಚ್ಚಿ ನೀರು ಹರಿಸಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.