ADVERTISEMENT

ಸಂತ್ರಸ್ತರಿಗೆ 4 ಪಟ್ಟು ಹೆಚ್ಚು ಪರಿಹಾರ

ಭಧ್ರಾ ಮೇಲ್ದಂಡೆ ಯೋಜನೆ: ಪುನರ್ವಸತಿ ಕುರಿತ ಸಭೆಯಲ್ಲಿ ಡಾ.ಕುಮಾರ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 12:09 IST
Last Updated 9 ಜೂನ್ 2020, 12:09 IST
ಡಾ. ಕುಮಾರ್‌
ಡಾ. ಕುಮಾರ್‌   

ಕಡೂರು: ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯಲ್ಲಿ ಭೂಮಿ ಕಳೆದುಕೊಳ್ಳುವ ತಾಲ್ಲೂಕಿನ ರೈತರಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಅಧಿಕ ಪರಿಹಾರ ನಿಗದಿಯಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದರು.

ತಾಲ್ಲೂಕಿನ 9ನೇ ಮೈಲಿಕಲ್ಲಿನ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆ ಕಾಮಗಾರಿಯಲ್ಲಿ ಭೂಮಿ ಕಳೆದುಕೊಳ್ಳುವವರ ಪುನರ್ವಸತಿ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಲುವೆಯಿಂದ ತಾಲ್ಲೂಕಿನ ಹಲವಾರು ಕೆರೆಗಳು ತುಂಬಲಿವೆ. ಈಗಾಗಲೇ ಕಾಲುವೆ ನಿರ್ಮಾಣಗೊಳ್ಳುತ್ತಿದ್ದು, ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರದ ಮೊತ್ತವನ್ನು ಸರ್ಕಾರ ನಿಗದಿಪಡಿಸಿದೆ. ಶೇ 50 ಭೂಮಿ ಕಳೆದುಕೊಳ್ಳುವವರಿಗೆ ₹ 5 ಲಕ್ಷ ಹೆಚ್ಚುವರಿಯಾಗಿ ನೀಡುವ ಮತ್ತು ಯೋಜನೆಯ ವ್ಯಾಪ್ತಿಯಲ್ಲಿ ವಾಸದ ಮನೆಯಿದ್ದರೆ ಅದಕ್ಕೆ ಪರಿಹಾರದ ಜೊತೆ ಹೆಚ್ಚುವರಿಯಾಗಿ ಸ್ಥಳಾಂತರಗೊಳಿಸಲು ₹ 50 ಸಾವಿರ ನೀಡುವ ಅವಕಾಶವಿದೆ’ ಎಂದರು.

ADVERTISEMENT

ತರೀಕೆರೆ ಉಪ ವಿಭಾಗಾಧಿಕಾರಿ ರೇಣುಕಾಪ್ರಸಾದ್ ಮಾತನಾಡಿ, ‘ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗಾಗಿಯೇ ವಿಶೇಷ ಕೋರ್ಟ್ ನಡೆಸಿ, ಎಲ್ಲಾ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲಾಗುವುದು’ ಎಂದು ತಿಳಿಸಿದರು.

ತಹಶೀಲ್ದಾರ್ ಜೆ.ಉಮೇಶ್ ಮಾತನಾಡಿ, ‘ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರ ಪೈಕಿ ಯಾವುದಾದರೂ ಪೌತಿ ಖಾತೆ ಮತ್ತಿತರ ಸಮಸ್ಯೆಗಳಿದ್ದರೆ ಗ್ರಾಮಲೆಕ್ಕಿಗರು ಪಟ್ಟಿ ಮಾಡಬೇಕು. ಅಂತಹ ಪ್ರಕರಣಗಳ ಪರಿಶೀಲನೆ ನಡೆಸಿ ಸಮಸ್ಯೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಯಗಟಿ ಕಂದಾಯ ನಿರೀಕ್ಷಕ ರಮೇಶ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.