ADVERTISEMENT

ಬೀರೂರು ಪುರಸಭೆ ಅಧ್ಯಕ್ಷರ ಚುನಾವಣೆ: ಬಿಜೆಪಿಗೆ ಒಲಿದ ‘ಭಾಗ್ಯಲಕ್ಷ್ಮಿ’

ರೋಚಕ ಹಣಾಹಣಿಗೆ ಸಾಕ್ಷಿಯಾದ ಅಧ್ಯಕ್ಷರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 6:55 IST
Last Updated 17 ಜುಲೈ 2025, 6:55 IST
ಬೀರೂರು ಪುರಸಭೆಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಭಾಗ್ಯಲಕ್ಷ್ಮೀ ಮೋಹನ್‌ ಅಧ್ಯಕ್ಷರಾಗಿ ಆಯ್ಕೆಯಾದರು
ಬೀರೂರು ಪುರಸಭೆಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಭಾಗ್ಯಲಕ್ಷ್ಮೀ ಮೋಹನ್‌ ಅಧ್ಯಕ್ಷರಾಗಿ ಆಯ್ಕೆಯಾದರು   

ಬೀರೂರು(ಕಡೂರು): ಶಾಸಕ ಮತ್ತು ಸಂಸದರ ಮತದಾನ, ವ್ಹಿಪ್ ನಡುವೆ ಕಾಂಗ್ರೆಸ್‌ನ ಮೂವರು ಸದಸ್ಯರ ಗೈರು, ರೋಚಕ ಹಣಾಹಣಿ ನಡುವೆ ಪುರಸಭೆ ಅಧ್ಯಕ್ಷರಾಗಿ ಬಿಜೆಪಿಯ ಭಾಗ್ಯಲಕ್ಷ್ಮಿ ಮೋಹನ್‌ ಆಯ್ಕೆಯಾದರು.

ಬೀರೂರು ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷರ ಆಯ್ಕೆ ಚುನಾವಣೆ ಬುಧವಾರ ನಡೆಯಿತು. 17ನೇ ವಾರ್ಡ್‌ ಸದಸ್ಯೆ ಭಾಗ್ಯಲಕ್ಷ್ಮಿ ಹಾಗೂ 23ನೇ ವಾರ್ಡ್‌ ಕಾಂಗ್ರೆಸ್‌ ಸದಸ್ಯೆ ಜ್ಯೋತಿ ಸಂತೋಷ್‌ ನಾಮಪತ್ರ ಸಲ್ಲಿಸಿದ್ದರು.

23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿಯ 11, ಕಾಂಗ್ರೆಸ್‌ನ 9, ಜೆಡಿಎಸ್‌ ಇಬ್ಬರು ಮತ್ತು ಪಕ್ಷೇತರ ಒಬ್ಬ ಸದಸ್ಯರಿದ್ದಾರೆ. ನಾಮಪತ್ರ ಪರಿಶೀಲನೆಯ ಬಳಿಕ ಎಂ.ಪಿ.ಸುದರ್ಶನ್‌ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭೆಗೆ ಬಂದರು. ಅವರ ಜತೆಯಲ್ಲಿ 9ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ನಂದಿನಿ ರುದ್ರೇಶ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ADVERTISEMENT

ಕಾಂಗ್ರೆಸ್‌ ಸದಸ್ಯರು ಸಭೆಗೆ ಹಾಜರಾಗವಾಗ ಬಿಜೆಪಿಯ ಮಾಣಿಕ್‌ ಬಾಷಾ, ಈ ಹಿಂದೆ ಬಿಜೆಪಿ ನೆರವಿನಿಂದ ಅಧ್ಯಕ್ಷರಾಗಿದ್ದ ವನಿತಾ ಮಧು ಮತ್ತು ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಸದಸ್ಯ ಎಸ್‌.ಎನ್‌.ರಾಜು ಅವರನ್ನೂ ಕರೆದುಕೊಂಡು ಬಂದರು. ಕೆಲ ಸಮಯದ ಬಳಿಕ ಕಡೂರು ಶಾಸಕ ಕೆ.ಎಸ್‌.ಆನಂದ್‌ ಮತ್ತು ಹಾಸನ ಸಂಸದ ಶ್ರೇಯಸ್‌ ಪಟೇಲ್‌ ಬಂದರು.

ಈ ನಡುವೆ ವ್ಹಿಪ್ ಜಾರಿಯಾದರೂ ಕಾಂಗ್ರೆಸ್‌ ಸದಸ್ಯರಾದ ಸಮೀವುಲ್ಲಾ(2ನೇ ವಾರ್ಡ್‌), ರೋಹಿಣಿ ವಿನಾಯಕ್(10ನೇ ವಾರ್ಡ್‌) ಹಾಗೂ ಜ್ಯೋತಿ ವೆಂಕಟೇಶ್ (19ನೇ ವಾರ್ಡ್‌) ಸಭೆಗೆ ಗೈರಾಗಿದ್ದರು.

ಮಧ್ಯಾಹ್ನ 1.30ಕ್ಕೆ ಮತದಾನ ಪ್ರಕ್ರಿಯೆ ಆರಂಭವಾಗಬೇಕಿತ್ತು. ಗೈರಾಗಿರುವ ತಮ್ಮ ಸದಸ್ಯರು ಸಭೆಗೆ ಹಾಜರಾಗುವ ತನಕ ಮತದಾನ ನಡೆಸಬಾರದು ಎಂದು ಶಾಸಕ ಆನಂದ್‌, ಸಂಸದ ಶ್ರೇಯಸ್‌ ಪಟೇಲ್‌ ಮತ್ತು ಕಾಂಗ್ರೆಸ್ ಸದಸ್ಯರು ಚುನಾವಣಾಧಿಕಾರಿ(ತಹಶೀಲ್ದಾರ್‌) ಸಿ.ಎಸ್‌.ಪೂರ್ಣಿಮಾ ಅವರನ್ನು ಒತ್ತಾಯಿಸಿದರು. ತಮ್ಮ ಸದಸ್ಯರನ್ನು ಹೈಜಾಕ್‌ ಮಾಡಲಾಗಿದ್ದು, ಪ್ರಕ್ರಿಯೆ ಮುಂದೂಡುವಂತೆ ಆಗ್ರಹಿಸಿದರು.

‘ಎಷ್ಟು ಸಮಯವಾದರೂ ಪರವಾಗಿಲ್ಲ. ಮತದಾನ ನಡೆಯಲೇಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಪೂರ್ಣಿಮಾ ಪುರಸಭೆಯ ಕಾಯ್ದೆಯ ಪುಸ್ತಕ ತರಿಸಿ ಪರಿಶೀಲಿಸಿದರು. ಒಮ್ಮೆ ಘೋಷಣೆಯಾದ ನಂತರ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಮತದಾನ ಪ್ರಕ್ರಿಯೆ ನಡೆಯಬೇಕು ಎಂದರು. ಸುಮಾರು 1 ಗಂಟೆಯ ಹಗ್ಗಜಗ್ಗಾಟದ ನಂತರ ಕೈ ಎತ್ತುವ ಮೂಲಕ ಮತದಾನ ಪ್ರಕ್ರಿಯೆ ಆರಂಭಗೊಂಡಿತು.

ಮೊದಲಿಗೆ ಕಾಂಗ್ರೆಸ್ ಅಭ್ಯರ್ಥಿಯ ಪರ ಕೈ ಎತ್ತಿದಾಗ ಬಿಜೆಪಿಯ ಮಾಣಿಕ್ ಬಾಷಾ, ಜೆಡಿಎಸ್‌ನ ವನಿತಾ ಮಧು ಬಾವಿಮನೆ ಹಾಗೂ ಪಕ್ಷೇತರ ಸದಸ್ಯ ಎಸ್.ಎನ್.ರಾಜು ಬೆಂಬಲಿಸಿದರು. ಶಾಸಕ ಮತ್ತು ಸಂಸದ ಇಬ್ಬರೂ ಕಾಂಗ್ರೆಸ್‌ ಪರ ಮತ ಚಲಾಯಿಸಿದರು. ಸಭೆಯಲ್ಲಿ ಹಾಜರಿದ್ದರೂ ಕಾಂಗ್ರೆಸ್‌ನ 9ನೇ ವಾರ್ಡ್ ಸದಸ್ಯೆ ನಂದಿನಿ ರುದ್ರೇಶ್ ಯಾರ ಪರವೂ ಕೈ ಎತ್ತದೆ ತಟಸ್ಥಗೊಂಡರು. ಇದರಿಂದ ಜ್ಯೋತಿ ಸಂತೋಷ್‌ 10 ಮತಗಳನ್ನು ಗಳಿಸಲು ಸಾಧ್ಯವಾಯಿತು.

ಬಿಜೆಪಿ ತನ್ನ 11 ಸದಸ್ಯರಲ್ಲಿ ಒಬ್ಬರನ್ನು ಕಳೆದುಕೊಂಡು ಆತಂಕಕ್ಕೆ ಒಳಗಾದರೂ ಜೆಡಿಎಸ್‌ನ 13ನೇ ವಾರ್ಡ್‌ ಸದಸ್ಯ ಬಿ.ಆರ್.ಮೋಹನಕುಮಾರ್‌ ಬೆಂಬಲದೊಂದಿಗೆ 11 ಮತ ಗಳಿಸಿತು. ಆ ಮೂಲಕ ಭಾಗ್ಯಲಕ್ಷ್ಮಿ ಗೆಲುವು ಸಾಧಿಸಿದರು. ಒಂದು ಮತದ ಅಂತರದಲ್ಲಿ ಕಾಂಗ್ರೆಸ್ ಸೋಲು ಕಂಡಿತು.

ಫಲಿತಾಂಶದ ನಂತರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿಯ ವಕ್ತಾರ ಶಾಮಿಯಾನ ಚಂದ್ರು, ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್, ಮಾರ್ಗದ ಮಧು, ಚೇತನ್ ಕೆಂಪರಾಜು, ಅಡಿಕೆ ಚಂದ್ರು, ಕೆಎಂಎಫ್‌ ನಿರ್ದೇಶಕ ಬಿದರೆ ಜಗದೀಶ್, ಬಿ.ಪಿ.ನಾಗರಾಜ್ ಇದ್ದರು.

ಲೋಕಸಭಾ ಸದಸ್ಯರೊಬ್ಬರು ಪುರಸಭೆ ಅಥವಾ ನಗರಸಭೆ ಚುನಾವಣೆಯಲ್ಲಿ ಮತ ಹಾಕಲು ಪಾಲ್ಗೊಂಡ ಎರಡನೇ ಪ್ರಕರಣ ಇದು. ಈ ಮೊದಲು ಸಂಸದರಾಗಿದ್ದ ಡಿ.ಸಿ. ಶ್ರೀಕಂಠಪ್ಪ ಅವರು ಚಿಕ್ಕಮಗಳೂರು ನಗರಸಭೆ ಚುನಾವಣೆಗೆ ಮತ ಚಲಾಯಿಸಲು ಅನಾರೋಗ್ಯದ ನಡುವೆಯೂ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬಂದು ಮತ ಚಲಾಯಿಸಿದ್ದರು.

ಪೊಲೀಸರ ವಿರುದ್ಧ ಹರಿಹಾಯ್ದ ಶಾಸಕ

ಶಾಸಕ ಕೆ.ಎಸ್.ಆನಂದ್ ಮತ್ತು ಸಂಸದ ಶ್ರೇಯಸ್‌ ಪಟೇಲ್‌ ಚುನಾವಣೆ ಬಳಿಕ ಹೊರಟ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ಪುರಸಭೆ ಮುಂಭಾಗ ‘ಭಾರತ್‌ ಮಾತಾಕೀ ಜೈ’ ಎಂದು ಘೋಷಣೆ ಕೂಗಿ ಡೋಲು ಬಡಿಯಲು ಆರಂಭಿಸಿದರು. ಕಾಂಗ್ರೆಸ್‌ ಬೆಂಬಲಿಗರು ಇದರಿಂದ ಕೆರಳಿ ಪಕ್ಷದ ಪರ ಜೈಕಾರ ಹಾಕಲು ಶುರು ಮಾಡಿದರು. ಕೋಪಗೊಂಡ ಶಾಸಕ ಆನಂದ್‌ ‘ಇದೇನಾ ಭದ್ರತೆ ಒದಗಿಸುವ ರೀತಿ ಅಹಿತಕರ ವಾತಾವರಣ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಹರಿಹಾಯ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.