ADVERTISEMENT

ಬೀರೂರು | 'ಅಧಿಕ ಇಳುವರಿಗೆ ನ್ಯಾನೊ ತಂತ್ರಜ್ಞಾನ ಉಪಯುಕ್ತ'

ಡ್ರೋನ್ ಮೂಲಕ ನ್ಯಾನೊ ಯೂರಿಯಾ, ಡಿಎಪಿ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:26 IST
Last Updated 30 ಆಗಸ್ಟ್ 2025, 6:26 IST
ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದ ಬಿ.ಜಿ.ಗೋವಿಂದಪ್ಪ ಅವರ ಜಮೀನಿನಲ್ಲಿ ಗುರುವಾರ ಕೃಷಿ ಇಲಾಖೆ ಮತ್ತು ಇಫ್ಕೊ ಸಂಸ್ಥೆ ವತಿಯಿಂದ ಡ್ರೋನ್ ಮೂಲಕ ರಾಗಿ ಬೆಳೆಗೆ ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಸಲಾಯಿತು
ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದ ಬಿ.ಜಿ.ಗೋವಿಂದಪ್ಪ ಅವರ ಜಮೀನಿನಲ್ಲಿ ಗುರುವಾರ ಕೃಷಿ ಇಲಾಖೆ ಮತ್ತು ಇಫ್ಕೊ ಸಂಸ್ಥೆ ವತಿಯಿಂದ ಡ್ರೋನ್ ಮೂಲಕ ರಾಗಿ ಬೆಳೆಗೆ ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಸಲಾಯಿತು   

ಬೀರೂರು(ಕಡೂರು): ‘ಬೆಳೆಗಳಿಗೆ ಮಿತಿಮೀರಿ ರಾಸಾಯನಿಕಗಳ ಬಳಕೆ ಮಾಡುವುದರಿಂದ ಭೂಮಿ ಫಲವತ್ತತೆ ಕಳೆದುಕೊಂಡು ಮಣ್ಣಿನಲ್ಲಿರುವ ಎರೆಹುಳುವಿನಂತ ಸೂಕ್ಷ್ಮ ಜೀವಿಗಳು ನಶಿಸಿ ಹೋಗುತ್ತಿವೆ. ನ್ಯಾನೊ ಯೂರಿಯಾ ಗೊಬ್ಬರ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಉತ್ತಮವಾದ ಫಸಲು ರೈತರ ಕೈಸೇರುತ್ತವೆ’ ಎಂದು ತರೀಕೆರೆ ಕೃಷಿ ಉಪ ನಿರ್ದೇಶಕಿ ಹಂಸವೇಣಿ ತಿಳಿಸಿದರು.

ಬೀರೂರು ಹೋಬಳಿಯ ಜೋಡಿತಿಮ್ಮಾಪುರ ಗ್ರಾಮದ ಜಮೀನು ಒಂದರಲ್ಲಿ ಗುರುವಾರ ಕೃಷಿ ಇಲಾಖೆ ಮತ್ತು ಇಫ್ಕೊ ಸಂಸ್ಥೆ ವತಿಯಿಂದ ದ್ರವ ರೂಪದ ರಸಗೊಬ್ಬರಗಳ ಉಪಯೋಗ, ಡ್ರೋನ್ ಮೂಲಕ ನ್ಯಾನೊ ಯೂರಿಯಾ, ಡಿಎಪಿ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.

‘ನ್ಯಾನೊ ಗೊಬ್ಬರಗಳನ್ನು ಉಪಯೋಗಿಸುವುದರಿಂದ ರೈತರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಲು ಸಹಾಯವಾಗುತ್ತದೆ. ರೈತರ ಆದಾಯ ವೃದ್ಧಿಸುವ ಉದ್ದೇಶದಿಂದ ಈ ತಂತ್ರಜ್ಞಾನ ಜಾರಿಗೆ ತರಲಾಗಿದೆ. ಸಾಂಪ್ರದಾಯಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಪರಿಸರಕ್ಕೆ ಹಾನಿಯಾಗದಂತೆ ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ನ್ಯಾನೊ ರಸಗೊಬ್ಬರ ನೆರವಾಗುತ್ತವೆ. ಡ್ರೋನ್ ಮೂಲಕ ಸಿಂಪಡಣೆ ಮಾಡುವುದರಿಂದ ರೈತರಿಗೆ ಸಮಯ ಹಾಗೂ ಹಣ ಉಳಿತಾಯವಾಗುವ ಜತೆಗೆ ಕಾರ್ಮಿಕರ ವೆಚ್ಚವೂ ಉಳಿಯುತ್ತದೆ. ಸಸ್ಯಗಳಿಗೆ ನೇರವಾಗಿ ದ್ರವರೂಪದ ಗೊಬ್ಬರ ದೊರೆತು, ಆಹಾರ ಉತ್ಪಾದನೆ ಮಾಡುವ ಹಸಿರು ಎಲೆಗಳ ಮೇಲೆ ಸಿಂಪಡಣೆಯಾಗುವುದರಿಂದ ಎಲೆಗಳಿಂದ ನೇರವಾಗಿ ಕಾಂಡಕ್ಕೆ ಹೋಗಿ, ಬೆಳೆಗಳು ಪುಷ್ಟಿ ಪಡೆದು ಉತ್ತಮವಾಗುತ್ತವೆ’ ಎಂದರು.

ADVERTISEMENT

ಇಫ್ಕೊ ಸಂಸ್ಥೆಯ ಸಂಯೋಜಕ ಅತಾವುಲ್ಲಾ ‘ಡ್ರೋನ್‌ ಮೂಲಕ ರಸಗೊಬ್ಬರ ಸಿಂಪಡಣೆ ಕುರಿತು’ ಮಾತನಾಡಿ, ‘ನ್ಯಾನೊ ಯೂರಿಯಾ ದ್ರಾವಣವನ್ನು ಎಕರೆಗೆ ಅರ್ಧ ಲೀಟರ್‌ನಂತೆ ಬಳಸಬೇಕು. 10 ಲೀಟರ್ ಸಾಮರ್ಥ್ಯದ ಈ ಡ್ರೋನ್‌ಗೆ ಅರ್ಧ ಲೀಟರ್ ನ್ಯಾನೊ ಗೊಬ್ಬರವನ್ನು ಬೆರೆಸಿ ಸಿಂಪಡಣೆ ಮಾಡಬೇಕು. ಡ್ರೋನ್ ಇಲ್ಲದಿದ್ದರೆ ರೈತರ ಸ್ಪ್ರೇಯರ್‌ ಕ್ಯಾನ್‌ಗೆ ಒಂದು ಲೀಟರ್ ನೀರಿಗೆ 4 ಎಂಎಲ್ ನ್ಯಾನೊ ಯೂರಿಯಾ ಬೆರೆಸಿ ಸಿಂಪಡಣೆ ಮಾಡಬೇಕು. ಭೂಮಿಯ ಮೇಲೆ ರಾಸಾಯನಿಕ ಗೊಬ್ಬರಗಳ ಅಡ್ಡಪರಿಣಾಮ ತಡೆಯಲು ಹಾಗೂ ರಸಗೊಬ್ಬರಗಳು ಹೆಚ್ಚು ಪರಿಣಾಮಕಾರಿಯಾಗಲು ಇಫ್ಕೊ ಸಂಸ್ಥೆಯು ದ್ರವ ರೂಪದಲ್ಲಿ ಗೊಬ್ಬರಗಳನ್ನು ಪರಿಚಯಿಸುತ್ತಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಉಷಾಕುಮಾರಿ ಮಾತನಾಡಿದರು. ಕಡೂರು ಸಹಾಯಕ ಕೃಷಿ ನಿರ್ದೇಶಕ ಅಶೋಕ್‌ ಎಂ., ಕೃಷಿ ಅಧಿಕಾರಿಗಳಾದ ನಾಗರಾಜ್, ಜಯಶ್ರೀ, ಕರಿಯಪ್ಪ ದಕ್ಷ ಡ್ರೋನ್‌ ಸಂಸ್ಥೆಯ ಶರತ್, ಆತ್ಮಾ ವಿಭಾಗದ ತಾಂತ್ರಿಕ ವ್ಯವಸ್ಥಾಪಕಿ ಲತಾ, ಗ್ರಾಮದ ಮುಖಂಡ ಬಿ.ಜಿ.ಬಸಪ್ಪ, ಜಮೀನು ಮಾಲೀಕ ಬಿ.ಜಿ.ಗೋವಿಂದಪ್ಪ ಮತ್ತು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.