ಕಾಂಗ್ರೆಸ್
ಕಳಸ: ತಾಲ್ಲೂಕಿನ ರಸ್ತೆಗಳ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಳಸ ಬ್ಲಾಕ್ ಅಧ್ಯಕ್ಷ ಶ್ರೇಣಿಕ, ಕಳೆದ ಏಪ್ರಿಲ್‍ನಿಂದ ಈವರೆಗೆ 140 ದಿನ ಮಳೆ ಸುರಿದಿದೆ. ಇದರಿಂದ ರಸ್ತೆ ಕಾಮಗಾರಿಗಳನ್ನು ಆರಂಭಿಸಲು ಆಗಿಲ್ಲ. ಕುದುರೆಮುಖ, ಕಳಸೇಶ್ವರ ದೇವಸ್ಥಾನ ಸೇರಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅನೇಕ ರಸ್ತೆ ಕಾಮಗಾರಿಗಳು ಸದ್ಯದಲ್ಲೇ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.
ತಾಲ್ಲೂಕಿನ ಹಳ್ಳಿ ಹಳ್ಳಿಯಲ್ಲೂ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಗ್ಗನಳ್ಳ ತೂಗುಸೇತುವೆ ಮತ್ತು ರಸ್ತೆಗೆ ₹9 ಕೋಟಿ, ನೆಲ್ಲಿಬೀಡು ಸೇತುವೆಗೆ ₹5 ಕೋಟಿ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ. ₹5 ಕೋಟಿ ವೆಚ್ಚದಲ್ಲಿ ಕಳಸ ತಾಲ್ಲೂಕು ಕಚೇರಿ ಒಂದು ವರ್ಷದ ಅವಧಿಯಲ್ಲಿ ಕೆಲಸ ಮುಗಿದು ಕಾರ್ಯಾರಂಭ ಮಾಡಲಿದೆ. ತನ್ನ ಅವಧಿಯಲ್ಲಿ ಅಕ್ರಮ ಕಾಮಗಾರಿಗಳನ್ನು ಮಾಡಿ ಹಣ ಕೊಳ್ಳೆ ಹೊಡೆದ ಬಿಜೆಪಿ ಮುಖಂಡರು ಬಹಿರಂಗ ಚರ್ಚೆಗೆ ಬರಬೇಕು ಎಂದು ಅವರು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡ ಹಿತ್ತಲಮಕ್ಕಿ ರಾಜೇಂದ್ರ ಮಾತನಾಡಿ, ಕಳಸ ತಾಲ್ಲೂಕಿನ ಬಗ್ಗೆ ಅಭಿಮಾನದಿಂದ ಶಾಸಕಿ ನಯನಾ ಮೋಟಮ್ಮ ವಿಶೇಷ ಅನುದಾನ ನೀಡುತ್ತಿದ್ದಾರೆ. ಅವರ ಬಗ್ಗೆ ದೂಷಣೆ ಮಾಡುವ ಬದಲು ಬಿಜೆಪಿ ಮುಖಂಡರು ತಮ್ಮ ಸಂಸದರು ನಮ್ಮ ಊರಿನ ರಸ್ತೆಗಳಿಗೆ ಪಿಎಂಜಿಎಸ್‍ವೈ ಯೋಜನೆಯಲ್ಲಿ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂದು ತಿಳಿಸಬೇಕು. ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಕೂಡ ಕಳಸಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದೂ ತಿಳಿಸಬೇಕು ಎಂದು ಸವಾಲು ಹಾಕಿದರು.
ಅಬ್ದುಲ್ ಶುಕೂರ್ ಮಾತನಾಡಿ, ಬಿಜೆಪಿ ಮುಖಂಡರು ಶಾಸಕರು ಮತ್ತು ಸಂಸದರ ಕೆಲಸ ಹೋಲಿಸಿ ನೋಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ವೀರೇಂದ್ರ ಮಾತನಾಡಿ, ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಳಸ ಪಟ್ಟಣದ ಗಂಟೆಮಕ್ಕಿ, ಕೆಳಬೈಲು, ಓಣಿಗಂಡಿ, ಗೋರಿಮಕ್ಕಿ, ದೇವರಗುಡ್ಡ, ಗಣಪತಿಕಟ್ಟೆ, ಹಿಂದೂ ಸ್ಮಶಾನ ಮತ್ತು ಕೊಂಡದಮನೆ ರಸ್ತೆಗಳ ಅಭಿವೃದ್ಧಿ ಆಗಿದೆ. ಬಲಿಗೆ ಪ್ರದೇಶದಲ್ಲಿ ₹1 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಆಗಿದೆ ಎಂದರು.
ಕಳಸ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗಣೇಶ್ ಭಟ್ ಮಾತನಾಡಿ, ತಾಲ್ಲೂಕಿನ 8000 ಮನೆಗಳಿಗೆ ಉಚಿತ ವಿದ್ಯುತ್ ಮತ್ತು 9000 ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ತಿಂಗಳಿಗೆ ₹2000 ಸಹಾಯಧನ ನೀಡಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.