ADVERTISEMENT

ಬಿಜೆಪಿಯತ್ತ ಜನಸಾಮಾನ್ಯರ ಒಲವು

ಅಭಿನಂದನಾ ಸಮಾರಂಭದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 16:26 IST
Last Updated 9 ಜನವರಿ 2021, 16:26 IST
ಶೃಂಗೇರಿ ಪಟ್ಟಣದ ಜಿ.ಎಸ್.ಬಿ ಸಭಾಭವನದಲ್ಲಿ ತಾಲ್ಲೂಕು ಬಿಜೆಪಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಮಾತನಾಡಿದರು.
ಶೃಂಗೇರಿ ಪಟ್ಟಣದ ಜಿ.ಎಸ್.ಬಿ ಸಭಾಭವನದಲ್ಲಿ ತಾಲ್ಲೂಕು ಬಿಜೆಪಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಮಾತನಾಡಿದರು.   

ಶೃಂಗೇರಿ: ‘ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 41 ಗ್ರಾಮ ಪಂಚಾಯಿತಿಗಳ ಪೈಕಿ 28ರಲ್ಲಿ ಬಿಜೆಪಿ ಬೆಂಬಲಿತರೇ ಪೂರ್ಣವಾಗಿ ಗೆದ್ದಿದ್ದು, 4ರಲ್ಲಿ ಸಮಸಮ ಇವೆ. ಈಗಿನ ಶಾಸಕರಿಗೆ ಕೇವಲ 9 ಪಂಚಾಯಿತಿ ಮಾತ್ರ ಸಿಕ್ಕಿದ್ದು, ಕ್ಷೇತ್ರದಲ್ಲಿ ಜನರ ಒಲವು ಬಿಜೆಪಿ ಕಡೆ ಇರುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ತಿಳಿಸಿದರು.

ಪಟ್ಟಣದ ಜಿ.ಎಸ್.ಬಿ ಸಭಾಭವನ ದಲ್ಲಿ ತಾಲ್ಲೂಕು ಬಿಜೆಪಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಅಭಿನಂದಿಸಿ, ತಾನು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿ ಚುನಾ ವಣೆಯ ವಿಶೇಷವೆಂದರೆ ಅಭಿವೃದ್ಧಿ ಯೊಂದೇ ಮತವಾಗಿ ಪರಿವರ್ತನೆ ಯಾಗುವುದಿಲ್ಲ. ಜನ ಬಿಜೆಪಿ ಪರ ಇದ್ದರೂ ಕೆಲವೊಮ್ಮೆ ಮತದಾರ ಬೇರೆಯೇ ನಿರೀಕ್ಷೆ ಇಟ್ಟುಕೊಂಡಿರುತಾರೆ. ಅದನ್ನು ಈಡೇರಿಸುವಲ್ಲಿ ವಿಫಲರಾದ ಕಡೆ ನಾವು ಸಣ್ಣ ಅಂತರದಿಂದ ಸೋತಿದ್ದೇವೆ. ಈಗಿನ ಶಾಸಕರು ಪ್ರಚಾರ ಕಾಲದಲ್ಲಿ ಇದು ತಮ್ಮ ಮತ್ತು ಜೀವರಾಜ್ ನಡುವಿನ ಸ್ಪರ್ಧೆ ಎಂದಿದ್ದರು. ಅವರು ಮತಯಾಚನೆ ಮಾಡಿದ ಸ್ಥಳದಲ್ಲೆಲ್ಲಾ ಅವರ ಅಭ್ಯರ್ಥಿಗಳು ಸೋತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಪಕ್ಷದ ಮಟ್ಟಿಗೆ ಇದು ಸುವರ್ಣ ಕಾಲ. ಸಿ.ಟಿ.ರವಿ ಅವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದರೆ, ಬೆಳ್ಳಿಪ್ರಕಾಶ್ ರಾಜ್ಯ ಅಪೆಕ್ಸ್ ಬ್ಯಾಂಕ್‍ನ ಅಧ್ಯಕ್ಷರಾಗಿದ್ದಾರೆ. ಇದೀಗ ನಿಮ್ಮೆಲ್ಲರ ಹಾರೈಕೆಯಿಂದ ನನಗೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಆಗುವ ಅವಕಾಶ ಸಿಕ್ಕಿದೆ. ಮುಂದೆ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಇದಕ್ಕೂ ಮಿಗಿಲಾದ ಸಾಧನೆಯನ್ನು ಕಾರ್ಯಕರ್ತರು ಮಾಡಿ ತೋರಿಸಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪಕ್ಷದ ಹಿರಿಯ ಕಾರ್ಯಕರ್ತ ಸುರೇಂದ್ರ ಭಟ್ ಮಾತನಾಡಿ, ‘ಜನ ಸಂಘದ ಕಾಲದಿಂದಲೂ ಇಲ್ಲಿ ಕ್ಷೇತ್ರ ಮಟ್ಟದ ವರ್ಚಸ್ಸಿನ ನಾಯಕತ್ವದ ಕೊರತೆ ಇತ್ತು. ಅದನ್ನು ಪಕ್ಷವು ಡಿ.ಎನ್.ಜೀವರಾಜ್ ನೀಡಿದ್ದರಿಂದ ಬಿಜೆಪಿಯ ಚುನಾವಣಾ ಗೆಲುವುಗಳಿಗೆ ನಾಂದಿ ಆಯಿತು. ಗ್ರಾಮ ಪಂಚಾಯಿತಿ ಸದಸ್ಯರು ತಳಮಟ್ಟದ ಮತದಾರರ ಹಾಗೂ ಕಾರ್ಯಕರ್ತರ ಜೊತೆಯಲ್ಲಿ ಸದಾ ಇರಬೇಕು’ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ ಮಾತ ನಾಡಿ, ‘ಇದುವರೆಗೂ ಗ್ರಾಮ ಪಂಚಾಯಿತಿ ಗಳಲ್ಲಿ ಪಕ್ಷದಿಂದ 41 ಸದಸ್ಯರು ಇದ್ದರು. ಈ ಬಾರಿ 86 ಅಭ್ಯರ್ಥಿಗಳು ಸ್ಪರ್ಧಿಸಿದ್ದು 51 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ’ ಎಂದರು.

ಸೋತ ಅಭ್ಯರ್ಥಿಗಳನ್ನು ಸತ್ಕರಿಸಿ, ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಟಿ.ಎಸ್ ಉಮೇಶ್, ಜಿಲ್ಲಾ ಉಪಾಧ್ಯಕ್ಷ ಎ.ಎಸ್.ನಯನ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಶಿವಶಂಕರ್, ಶಿಲ್ಪಾರವಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ ಶಂಕರಪ್ಪ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಜಿ.ವಿ ಮೋಹನ್, ಕಚ್ಚೋಡಿ ಶ್ರೀನಿವಾಸ್, ಎಚ್.ಎಸ್.ವೇಣುಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.