ADVERTISEMENT

ನ್ಯಾಯಾಂಗ ಆಯೋಗದಿಂದ ಪ್ರಕರಣಗಳ ವಿಚಾರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 8:24 IST
Last Updated 4 ನವೆಂಬರ್ 2022, 8:24 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಚಿಕ್ಕಮಗಳೂರು: ‘ವರ್ಗಾವಣೆಗೆ ₹ 80 ಲಕ್ಷ ಲಂಚ ಕೊಟ್ಟರೆ ಹೃದಯಾಘಾತವಾಗದೆ, ಇನ್ನೇನಾಗುತ್ತದೆ ಎಂದು ಸಚಿವ ಎಂಟಿಬಿ ನಾಗರಾಜ್‌ ಹೇಳಿದ್ದಾರೆ, ಹೃದಯಾಘಾತದಿಂದ ಮೃತಪಟ್ಟ ಕೆ.ಆರ್‌. ಪುರಂ ಪೊಲೀಸ್‌ ಇನ್‌ಸ್ಪೆಕ್ಟರ್‌ ನಂದೀಶ್‌ ಅಂತಿಮ ದರ್ಶನಕ್ಕೆ ತೆರಳುವಾಗ ಈ ರೀತಿ ಹೇಳಿದ್ದಾರೆ. ಈ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಪಾದಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಚಿವ ಎಂಟಿಬಿ ನಾಗರಾಜ್‌ ಹೇಳಿಕೆ ಎಲ್ಲವನ್ನು ಹೇಳುತ್ತದೆ. ‘ಪ್ರಜಾವಾಣಿ’ಯಲ್ಲಿ ಪಿಎಸ್‌ಐ, ಪಿಐ, ಎಸಿಪಿ, ಡಿಸಿಪಿ, ಎಸ್‌ಪಿ ವರ್ಗಾವಣೆಗೆ ಲಂಚ ಎಷ್ಟೆಷ್ಟು ಎಂದು ಪಟ್ಟಿ ಸಹಿತ ಈಚೆಗೆ ವರದಿ ಪ್ರಕಟವಾಗಿತ್ತು. ಪೊಲೀಸ್‌ ಇಲಾಖೆಯಲ್ಲಿ ಮಾತ್ರವಲ್ಲ ಎಲ್ಲ ಇಲಾಖೆಗಳಲ್ಲೂ ವರ್ಗಾವಣೆಗೆ ಲಂಚ ಕೊಡಲೇಬೇಕಾದ ಸ್ಥಿತಿ ಇದೆ’ ಎಂದರು.

ಕಾಮಗಾರಿಗಳಿಗೆ ಶೇ 40 ಕಮಿಷನ್‌ ನೀಡಬೇಕಾದ ಸ್ಥಿತಿ ಇದೆ ಎಂದು ಗುತ್ತಿದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದರೂ ಈವರೆಗೆ ಕ್ರಮ ವಹಿಸಿಲ್ಲ. ಕೋವಿಡ್‌ ಪರಿಕರ ಪೂರೈಕೆ ಬಿಲ್‌ ಪಾವತಿಗೆ ಅಧಿಕಾರಿಗಳು, ಶಾಸಕರು ಕಮಿಷನ್‌ ಬೇಡಿಕೆ ಇಟ್ಟಿದ್ದಾರೆ ಎಂದು ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ ಅಮರಗೊಳ್‌ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಭ್ರಷ್ಟಾಚಾರ ನಡೆದಿಲ್ಲವೇ ಎಂದು ಬಿಜೆಪಿಯವರು ಕೇಳುತ್ತಾರೆ. ಸರ್ಕಾರವು ನ್ಯಾಯಾಂಗ ಆಯೋಗ ನೇಮಿಸಿ ಎಲ್ಲ ಪ್ರಕರಣಗಳ ತನಿಖೆ ಮಾಡಿಸಲಿ ಎಂದು ಅವರು ಒತ್ತಾಯಿಸಿದರು.

ADVERTISEMENT

ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಚುನಾವಣೆ ಗಿಮಿಕ್‌. ಪ್ರಸನ್ನಾನಂದಪುರಿ ಸ್ವಾಮೀಜಿಯ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ 257 ದಿನ ಪ್ರತಿಭಟನೆ ಕೈಗೊಂಡರು, ಸರ್ಕಾರ ಅಷ್ಟು ದಿನಗಳವರೆಗೆ ಏಕೆ ಸ್ಪಂದಿಸಲಿಲ್ಲ? ಎಂದು ಪ್ರಶ್ನಿಸಿದರು.

ಅಡಿಕೆಗೆ ಎಲೆಚುಕ್ಕಿ. ಹಳದಿಎಲೆ ರೋಗ ತಗುಲಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅಧಿಕ ಮಳೆಯಿಂದಾಗಿ ಬೆಳೆ, ಮನೆ, ರಸ್ತೆ ಹಾನಿಯಾಗಿವೆ. ಸರ್ಕಾರ ಪರಿಹಾರ ನೀಡಿಲ್ಲ ಎಂದರು.

‘6ರಂದು ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ’

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೇ 6ರಂದು ಬೆಂಗಳೂರಿನಲ್ಲಿ ಅಭಿನಂದನಾ ಸಭೆ ಏರ್ಪಡಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಅರಮನೆಯಲ್ಲಿ ಮಧ್ಯಾಹ್ನ 2.30ಕ್ಕೆ ಸಮಾರಂಭ ನಡೆಯಲಿದೆ. ಖರ್ಗೆ ಅಧ್ಯಕ್ಷರಾಗಿರುವುದು ಪಕ್ಷದಲ್ಲಿ ಹೊಸ ಚೈತನ್ಯ ಮೂಡಿಸಲಿದೆ, ಕೆಪಿಸಿಸಿ ಬಲ ಹೆಚ್ಚಲಿದೆ ಎಂಬ ವಿಶ್ವಾಸ ಇದೆ ಎಂದರು.

ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ 130ರಿಂದ 150 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕಮಗಳೂರು, ಬಾದಾಮಿ, ಕೋಲಾರ, ವರುಣಾ ಕ್ಷೇತ್ರಗಳಿಂದಲೂ ಆಹ್ವಾನ ಇದೆ. ಹೈಕಮಾಂಡ್‌ ಸೂಚಿಸಿದ ಕಡೆ ಕಣಕ್ಕಿಳಿಯುತ್ತೇನೆ ಎಂದು ಉತ್ತರಿಸಿದರು.

ಕಾಂಗ್ರೆಸ್‌ ಸಿದ್ಧಾಂತ, ನಾಯಕತ್ವ ಒಪ್ಪಿ ಪಕ್ಷ ಸೇರಬಯಸುವವರು ಅರ್ಜಿ ಸಲ್ಲಿಸಬಹುದು. ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅಲ್ಲಂ ವೀರಭದ್ರಪ್ಪ ನೇತೃತ್ವ ಸಮಿತಿ ನಿರ್ಧಾರ ಕೈಗೊಳ್ಳಲಿದೆ’ ಎಂದು ಪ್ರತಿಕ್ರಿಯಿಸಿದರು.

‘ಭಷ್ಟ್ರಾಚಾರ, ಹಣದುಬ್ಬರ, ನಿರುದ್ಯೋಗ. ದ್ವೇಷ ರಾಜಕಾರಣ, ರೈತರ ಸಮಸ್ಯೆಗಳಿಗೆ ಸಿಗದ ಪರಿಹಾರ ಮೊದಲಾದ ಕಾರಣಗಳಿಂದ ಬಿಜೆಪಿ ಬಗ್ಗೆ ಬೇಸತ್ತು, ಜನರು ಬದಲಾವಣೆ ಬಯಸಿರುವ ವಾತಾವರಣ ಕಾಣುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.