ADVERTISEMENT

‘ಸಣ್ಣ ಸಮುದಾಯಗಳಿಗೆ ಬಿಜೆಪಿ ಪ್ರಾತಿನಿಧ್ಯ’

ಹಿಂದುಳಿದ ವರ್ಗಗಳ ಮೋರ್ಚಾದ ನಗರ ಮತ್ತು ಗ್ರಾಮಾಂತರ ಮಂಡಲಗಳ ಸಮಾವೇಶ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 5:38 IST
Last Updated 25 ಸೆಪ್ಟೆಂಬರ್ 2022, 5:38 IST
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರಲ್ಲಿ ಶನಿವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಶೋಭಾ ಕರಂದ್ಲಾಜೆ ಮಾತನಾಡಿದರು.
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರಲ್ಲಿ ಶನಿವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಶೋಭಾ ಕರಂದ್ಲಾಜೆ ಮಾತನಾಡಿದರು.   

ಚಿಕ್ಕಮಗಳೂರು: ಸಮಾಜದಲ್ಲಿನ ಸಣ್ಣ ಸಮುದಾಯಗಳನ್ನು ಗುರುತಿಸಿ, ಪ್ರಾತಿನಿಧ್ಯ ನೀಡಿ ಏಳಿಗೆಗೆ ಬಿಜೆಪಿಶ್ರಮಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನಗರ ಮತ್ತು ಗ್ರಾಮಾಂತರ ಮಂಡಲ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿ ಶೋಷಿತ ಸಮುದಾಯಗಳಿಗೆ ಧ್ವನಿಯಾಗಿ ನಿಂತಿದೆ. ಸ್ವಾತಂತ್ರ್ಯದ ಬಳಿಕ ಹಿಂದುಳಿದ ಸಮುದಾಯದ ವ್ಯಕ್ತಿ ದೇಶ ಮುನ್ನಡೆಸುವ ಅವಕಾಶವನ್ನು ಪಕ್ಷ ನೀಡಿದೆ. ಕೇಂದ್ರ ಸಂಪುಟದಲ್ಲಿ ತಳಸಮುದಾಯದ 27 ಮಂದಿಗೆ ಸಚಿವರಾಗುವ ಅವಕಾಶ ಕಲ್ಪಿಸಿದೆ. ಸ್ವಾವಲಂಬನೆಯತ್ತ ರಾಷ್ಟ್ರ ಹೆಜ್ಜೆ ಇಡುವಂತೆ ಮಾಡಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತು ನೀಡಿದ್ದಾರೆ. ಆಯುಷ್ಮಾನ್ ಆರೋಗ್ಯ ಕಾರ್ಡ್‌, ಕಿಸಾನ್‌ ಸಮ್ಮಾನ್‌, ಮುದ್ರಾ ಯೋಜನೆ, ಆತ್ಮನಿರ್ಭರ ಸಹಿತ ಹಲವು ಯೋಜನೆಗಳನ್ನು ಜಾರಿಗೊಳಿಸಿ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ದೇಶ ಮೊದಲು ಎನ್ನುವ ತತ್ವ, ಸಿದ್ಧಾಂತಗಳ ಮೇಲೆ ಬಿಜೆಪಿ ರಾಜಕಾರಣ ಮಾಡುತ್ತಿದೆ. ಸಣ್ಣ ಸಮುದಾಯಗಳನ್ನು ಗುರುತಿಸಿ ಮುನ್ನೆಲೆಗೆ ತಂದು ಸಾಮಾಜಿಕ ನ್ಯಾಯದ ಬದ್ಧತೆ ತೋರುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಹಾಗೂ ನಿಗಮಮಂಡಳಿಗಳಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡದವರಿಗೆ ಹೆಚ್ಚು ಸ್ಥಾನ ಸಿಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ವಿಪಕ್ಷದವರು ಲೂಟಿ ರವಿ ಎಂದು ಲೇವಡಿಯಲ್ಲಿ ತೊಡಗಿದ್ದಾರೆ. ನಾನು ಯಾವುದೇ ಭ್ರಷ್ಟಾಚಾರ, ಹಗರಣ, ಮಾಡಿಲ್ಲ. ಬದಲಾಗಿ ಸಣ್ಣ ಸಮುದಾಯಗಳ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಲೂಟಿ ಮಾಡಿದ್ದೇನೆ. ಎಂದಿಗೂ ನಾನು ದ್ವೇಷದ ರಾಜಕಾರಣ ಮಾಡಿಲ್ಲ. ನನ್ನ ಮನೆಗೆ ಮುತ್ತಿಗೆ ಹಾಕುವುದಾಗಿ ವಿಪಕ್ಷಗಳು ಹೇಳಿವೆ ಅದಕ್ಕೆ ಜಗ್ಗುವುದಿಲ್ಲ’ ಎಂದರು.

ಕ್ಷೇತ್ರದಲ್ಲಿ ರಸ್ತೆ, ನೀರಾವರಿ, ಮೆಡಿಕಲ್‌ ಕಾಲೇಜು ಸಹಿತ ಹಲವು ಅಭಿವೃದ್ಧಿ ಕಾಮಗಾರಿಗೆ ಅನುದಾನ ತಂದಿದ್ದೇನೆ. ಜನರು ಶಾಸಕನಾಗಿ ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ಜನರ ಪ್ರೀತಿ ಇರುವವರೆಗೆ ಚುನಾವಣೆ ಭೀತಿ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಒಬಿಸಿ ನಗರ ಮಂಡಲ ಅಧ್ಯಕ್ಷ ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಘಟಕದ ಅಧ್ಯಕ್ಷ ಬಾಸ್ಕರ್ ವೆನಿಲ್ಲಾ, ಸಿಡಿಎ ಅಧ್ಯಕ್ಷ ಆನಂದ್, ಮುಖಂಡರಾದ ಕನಕರಾಜ್ ಅರಸ್, ವರಸಿದ್ಧಿ ವೇಣುಗೋಪಾಲ್, ಪ್ರೇಮ್ ಕುಮಾರ್, ರವೀಂದ್ರ ಬೆಳವಾಡಿ, ದೇವರಾಜ್ ಶೆಟ್ಟಿ, ಪುಷ್ವರಾಜ್, ಮಧುಕುಮಾರ್ ರಾಜ್ ಅರಸ್, ಪ್ರಕಾಶ್, ಜಗದೀಶ್, ಟಿ. ರಾಜ‍ಶೇಖರ್ ಇದ್ದರು.

*
ಹಿಂದುಳಿದ ಸಮುದಾಯಗಳು ಬಿಜೆಪಿಯ ದೊಡ್ಡ ಶಕ್ತಿ. ಈ ಹಿಂದಿನ ಸರ್ಕಾರಗಳು ಸಮುದಾಯಗಳನ್ನು ಮತಬ್ಯಾಂಕ್‌ಗೆ ಸೀಮಿತಗೊಳಿಸಿದ್ದವು. ನರೇಂದ್ರ ಮೋದಿ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿ ಸಮುದಾಯದ ಪ್ರತಿನಿಧಿಗಳಿಗೆ ಸ್ಥಾನಮಾನ ಕಲ್ಪಿಸಿದೆ.
-ಯಶ್‌ಪಾಲ್‌ ಸುವರ್ಣ, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

*

ಜಾಗತೀಕರಣದ ಹೆಸರಿನಲ್ಲಿ ಕಾಂಗ್ರೆಸ್ ಹಿಂದುಳಿದ ಸಮುದಾಯದ ಕುಲಕಸುಬುಗಳನ್ನು ಅತಂತ್ರವಾಗಿಸಿತ್ತು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಮೂಲಕ ಮುಖ್ಯವಾಹಿನಿಗೆ ತರುವಲ್ಲಿ ಬಿಜೆಪಿ ಮುಂದಾಗಿದೆ.
-ಅಶೋಕ್‌ ಮೂರ್ತಿ, ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ

*

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಪ್ರಶ್ನಿಸಿದೆ. ಅದಕ್ಕೆ ಬಿಜೆಪಿ ತಯಾರಿದೆ. ಅಭಿವೃದ್ಧಿ ಪಟ್ಟಿಯೊಂದಿಗೆ ವೇದಿಕೆಯಲ್ಲಿ ಚರ್ಚಿಸಿ ತಕ್ಕ ಉತ್ತರ ನೀಡಲಾಗುವುದು.
-ಎಚ್‌.ಸಿ.ಕಲ್ಮರುಡಪ್ಪ, ಜಿಲ್ಲಾಧ್ಯಕ್ಷ,ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.