ADVERTISEMENT

ಬದ್ಧತೆ, ಕಾರ್ಯವೈಖರಿ ಪ್ರಶಿಕ್ಷಣದ ಧ್ಯೇಯ: ಸಿ.ಟಿ. ರವಿ

ಪ್ರಶಿಕ್ಷಣ ಮಹಾಭಿಯಾನ-2026ರ ಜಿಲ್ಲಾ ಮಟ್ಟದ ಯೋಜನಾ ಸಭೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:44 IST
Last Updated 1 ಮಾರ್ಚ್ 2026, 8:44 IST
ಚಿಕ್ಕಮಗಳೂರು ನಗರದಲ್ಲಿರುವ ಬಿಜೆಪಿಯ ಜಿಲ್ಲಾ ಘಟಕದ ಕಚೇರಿಯಲ್ಲಿ ಪ್ರಶಿಕ್ಷಣ ಮಹಾಭಿಯಾನ-2026ರ ಜಿಲ್ಲಾ ಮಟ್ಟದ ಯೋಜನಾ ಸಭೆ ನಡೆಯಿತು
ಚಿಕ್ಕಮಗಳೂರು ನಗರದಲ್ಲಿರುವ ಬಿಜೆಪಿಯ ಜಿಲ್ಲಾ ಘಟಕದ ಕಚೇರಿಯಲ್ಲಿ ಪ್ರಶಿಕ್ಷಣ ಮಹಾಭಿಯಾನ-2026ರ ಜಿಲ್ಲಾ ಮಟ್ಟದ ಯೋಜನಾ ಸಭೆ ನಡೆಯಿತು   

ಚಿಕ್ಕಮಗಳೂರು: ‘ಕಾರ್ಯಕರ್ತರಲ್ಲಿ ವೈಚಾರಿಕ ಬದ್ಧತೆ, ಪಕ್ಷದ ಇತಿಹಾಸ, ಕಾರ್ಯ ವೈಖರಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವುದೇ ಪ್ರಶಿಕ್ಷಣ ಮಹಾಭಿಯಾನ ಮೂಲ ಧ್ಯೇಯವಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದಲ್ಲಿರುವ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಪ್ರಶಿಕ್ಷಣ ಮಹಾಭಿಯಾನ-2026ರ ಜಿಲ್ಲಾ ಮಟ್ಟದ ಯೋಜನಾ ಸಭೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಹಾಗೂ ಹಿಂದಿನ ಜನಸಂಘಕ್ಕೆ ಪ್ರಶಿಕ್ಷಣದ ಸುದೀರ್ಘ ಇತಿಹಾಸವಿದೆ. ಎಷ್ಟೇ ದೊಡ್ಡ ಸಾಮರ್ಥ್ಯವಿದ್ದರೂ ಅವಲೋಕನ ಮಾಡಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರು ನಡೆದು ಬಂದ ದಾರಿಯನ್ನು ಅವಲೋಕಿಸುವುದು ಪ್ರಶಿಕ್ಷಣ ಮಹಾಭಿಯಾನದ ಮೂಲ ಉದ್ದೇಶವಾಗಿದೆ ಎಂದರು.

ADVERTISEMENT

ಸಮಾಜದಲ್ಲಿ ಪರಿವರ್ತನೆ ತರಲು ಮೊದಲು ನಾವು ನಮ್ಮ ಸ್ವಭಾವದ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕು. ಕೆಲವು ಅಭ್ಯಾಸಗಳು ಪಕ್ಷ ಸಂಘಟನೆಗೆ ತೊಡಕಾಗಬಾರದು. ಎಲ್ಲರೂ ಒಟ್ಟಾಗಿ ಪಕ್ಷದ ಸಿದ್ಧಾಂತ, ಗುರಿ, ಆದರ್ಶಗಳನ್ನು ಪಾಲಿಸುವುದೇ ಪ್ರಶಿಕ್ಷಣದ ಮೂಲ ಆಶಯ ಎಂದು ತಿಳಿಸಿದರು.

ಬಿಜೆಪಿಯು ವ್ಯಕ್ತಿಗಿಂತ ರಾಷ್ಟ್ರ ಮೊದಲು ಎಂಬ ಘೋಷವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ನಾವೇ ಪರಿವರ್ತನೆಯಾದರೆ ಸಮಾಜದ ಪರಿವರ್ತನೆ ಮಾಡಬಹುದು. ನಮ್ಮತನ, ವ್ಯಕ್ತಿತ್ವ, ಆಶಯ, ಸಮಾಜದ ಕಾಳಜಿ ಹಾಗೂ ರಾಷ್ಟ್ರದ ಹಿತಚಿಂತನೆಯಿಂದ ಮಾತ್ರ ಸಮಾಜ ತಾನಾಗಿಯೇ ಬದಲಾವಣೆಯಾಗಲಿದೆ ಎಂದರು.

ಜಗತ್ತಿನಲ್ಲೇ ಬಿಜೆಪಿ ಅತ್ಯಂತ ಹೆಚ್ಚು ಸದಸ್ಯತ್ವ ಹೊಂದಿರುವ ಏಕೈಕ ರಾಜಕೀಯ ಪಕ್ಷ. ಆ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಅಧ್ಯಕ್ಷ ವಿಜಯೇಂದ್ರ, ಸಂತೋಷ್‌ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಮಂಡಲವಾರು ಅಭ್ಯಾಸ ವರ್ಗವನ್ನು ಹಮ್ಮಿಕೊಂಡು ಪ್ರಶಿಕ್ಷಣದ ಹಿನ್ನೆಲೆ ಪರಿಚಯಿಸಬೇಕು ಎಂದು ತಿಳಿಸಿದರು.

ಬಿಜೆಪಿಗೆ ಅಧಿಕಾರ ಒಂದು ಸಾಧನವಷ್ಟೇ. ದೇಶ ಹಾಗೂ ಸಮಾಜ ಪರಿವರ್ತನೆಯೇ ಮೂಲ ಆಶಯ. ಹಾಗೆಯೇ ಬಿಜೆಪಿ ವ್ಯಕ್ತಿಗಿಂತ ದೇಶ ಮೊದಲು ಚಿಂತನೆಯಡಿ ಸಾಗುತ್ತಿದೆ. ಈ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಅನೇಕರು ಬಿಜೆಪಿ ಸೇರ್ಪಡೆಯಾಗುವ ಮೂಲಕ ರಾಷ್ಟ್ರದ ಏಕತೆಗೆ ದುಡಿಯುತ್ತಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ದೇವರಾಜ್‌ಶೆಟ್ಟಿ ಮಾತನಾಡಿ, ರಾಜ್ಯ ಘಟಕದ ಅಧ್ಯಕ್ಷರ ಆದೇಶದಂತೆ ಪ್ರತಿ ಜಿಲ್ಲೆಯಲ್ಲಿ ಪ್ರಶಿಕ್ಷಣ ಅಭಿಯಾನ ಮಾರ್ಚ್‌ 7ರಿಂದ ಏ. 14ರವರೆಗೆ ನಡೆಯಲಿದೆ. ಬೂತ್, ಮಂಡಲ ಅಧ್ಯಕ್ಷರು ಪಕ್ಷದ ತತ್ವಾದರ್ಶಗಳಡಿ ಅಭಿಯಾನ ನಡೆಸಲು ಸಮಗ್ರವಾಗಿ ಶಿಬಿರ ನಡೆಸಲಾಗುತ್ತಿದೆ ಎಂದರು.

ಪ್ರಶಿಕ್ಷಣದ ಅಭಿಯಾನದ ರಾಜ್ಯ ಸಹ ಸಂಚಾಲಕ ವಿಕಾಸ್ ಪುತ್ತೂರು, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಪುಣ್ಯಪಾಲ್, ರೈತಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಮುಖಂಡರಾದ ಸೀತರಾಮಭರಣ್ಯ, ಬೋಜರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.