
ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದ ಬಳಿ ಗುಂಡಿನ ದಾಳಿಗೆ ಮೂರು ಕೃಷ್ಣಮೃಗಗಳು ಮೃತಪಟ್ಟಿವೆ.
ಬಾಸೂರು ಅಮೃತ ಮಹಲ್ ಕಾವಲಿನ ಕೃಷ್ಣಮೃಗ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಖಾಸಗಿ ಕೃಷಿ ಭೂಮಿಯಲ್ಲಿ ಮೂರು ಕೃಷ್ಣಮೃಗಗಳ ಕಳೇಬರ ಮಂಗಳವಾರ ಪತ್ತೆಯಾಗಿವೆ.
ಎರಡು ಹೆಣ್ಣು ಮತ್ತು ಒಂದು ಗಂಡು ಕೃಷ್ಣಮೃಗವಾಗಿದ್ದು, ಒಂದೂವರೆ ವರ್ಷದಿಂದ ಎರಡು ವರ್ಷದೊಳಗಿನ ವಯಸ್ಸಿನವು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಕಳೇಬರ ಇರುವ ಮಾಹಿತಿಯನ್ನು ಸ್ಥಳೀಯರು ನೀಡಿದ ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು, ಪರಿಶೀಲಿಸಿದರು. ಗುಂಡು ಹಾರಿಸಿರುವ ಹಾಗೂ ವಾಹನಗಳ ಸಂಚರಿಸಿರುವ ಗುರುತುಗಳು ಸ್ಥಳದಲ್ಲಿ ಪತ್ತೆಯಾಗಿವೆ.
ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹೆಚ್ಚಿನ ಪರೀಕ್ಷೆಗಳಿಗೆ ಮಾದರಿ ಸಂಗ್ರಹಿಸಲಾಗಿದೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ತಿಳಿಸಿದರು.
ಬೇಟೆಗಾರರ ಗುಂಡಿಗೆ ಕೃಷ್ಣಮೃಗಗಳು ಬಲಿಯಾಗಿರಬಹುದು. ಗುಂಪಿನಲ್ಲಿ ದೊಡ್ಡವುಗಳನ್ನು ಒಯ್ದು ಮರಿಗಳನ್ನು ಇಲ್ಲಿಯೇ ಬಿಟ್ಟು ಹೋಗಿರಬಹುದು. ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.