ADVERTISEMENT

‘ಬ್ಲ್ಯಾಕ್‌ಮೇಲ್‌’ ವಿಚಾರ ತನಿಖೆಯಾಗಲಿ: ಬಿ.ಎಲ್‌.ಶಂಕರ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 16:38 IST
Last Updated 14 ಜನವರಿ 2021, 16:38 IST
ಬಿ.ಎಲ್‌.ಶಂಕರ್‌
ಬಿ.ಎಲ್‌.ಶಂಕರ್‌   

ಚಿಕ್ಕಮಗಳೂರು: ‘ನೂತನ ಏಳು ಸಚಿವರ ಪೈಕಿ ಮೂವರು ಬ್ಲ್ಯಾಕ್‌ಮೇಲ್‌ ಮಾಡಿ ಸಚಿವರಾಗಿದ್ದಾರೆ’ ಎಂಬ ಬಿಜೆಪಿ ಹಿರಿಯ ಮುಖಂಡರ ಆರೋಪದ ಬಗ್ಗೆ ತನಿಖೆಯಾಗಬೇಕು’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್‌. ಶಂಕರ್‌ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಸವನಗೌಡ ಪಾಟೀಲ ಯತ್ನಾಳ್‌, ಅಡಗೂರು ಎಚ್‌.ವಿಶ್ವನಾಥ್‌ ಮತ್ತಿತರ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ. ಯಾರು ಯಾರನ್ನು ‘ಬ್ಲ್ಯಾಕ್‌ಮೇಲ್‌’ ಮಾಡಿದರು? ಯಾವ ಕಾರಣಕ್ಕೆ ಮಾಡಿದರು? ಎಂಬ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ತಿಳಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎ.ಆರ್‌.ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಸಂದರ್ಭದಲ್ಲೂ ಸಿ.ಡಿ ವಿಚಾರ ಪ್ರಸ್ತಾಪವಾಗಿತ್ತು. ನೆಲಮಂಗಲದ ಬಳಿಯ ಗೆಸ್ಟ್‌ ಹೌಸ್‌ವೊಂದರಲ್ಲಿ ತಿಂಗಳ ಹಿಂದೆ ಮೂವರು ಸಭೆ ಸೇರಿ ಮುಖ್ಯಮಂತ್ರಿ ಕೆಳಗಿಳಿಸುವ ಬಗ್ಗೆ ಮಾತುಕತೆ ನಡೆಸಿದ್ದು, ತಾನೂ ಭಾಗಿಯಾಗಿದ್ದೆ ಎಂದು ಯತ್ನಾಳ್‌ ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು’ ಎಂದರು.

ADVERTISEMENT

‘ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಪರ ಮತ್ತು ವಿರೋಧದ ಎರಡು ಬಣಗಳು ಇವೆ ಎಂಬುದು ಸ್ಪಷ್ಟವಾಗಿದೆ. ವಿರೋಧದ ಗುಂಪು ದೆಹಲಿಯಲ್ಲಿ ಪ್ರಬಲವಾಗಿದ್ದು, ಯಡಿಯೂರಪ್ಪ ಅವರನ್ನು ಹತೋಟಿಯಲ್ಲಿಡುವ ಕೆಲಸವನ್ನು ಮಾಡುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.