ADVERTISEMENT

ನಳನಳಿಸುವ ‘ಬೊನ್ಸಾಯ್’ ಕೈತೋಟ

ನರಸಿಂಹರಾಜಪುರ: ಉಮಾ ಸತ್ಯನಾರಾಯಣಸ್ವಾಮಿಯ ಕೃಷಿ ಪ್ರೀತಿ

ಕೆ.ವಿ.ನಾಗರಾಜ್
Published 11 ಮೇ 2020, 17:31 IST
Last Updated 11 ಮೇ 2020, 17:31 IST
ಬೊನ್ಸಾಯಿಯಲ್ಲಿ ಗಿಡ ಬೆಳೆಸಿರುವ ಉಮಾ ಸತ್ಯನಾರಾಯಣಸ್ವಾಮಿ
ಬೊನ್ಸಾಯಿಯಲ್ಲಿ ಗಿಡ ಬೆಳೆಸಿರುವ ಉಮಾ ಸತ್ಯನಾರಾಯಣಸ್ವಾಮಿ   

ನರಸಿಂಹರಾಜಪುರ: ಪಟ್ಟಣದ ಹೌಸಿಂಗ್ ಬೋರ್ಡ್ ವ್ಯಾಪ್ತಿಯಲ್ಲಿ ವಾಸವಾಗಿರುವ ಉಮಾ ಸತ್ಯನಾರಾಯಣಸ್ವಾಮಿ ಅವರು ‘ಬೊನ್ಸಾಯ್’ಮರ ಪೋಷಿಸುವ ಹವ್ಯಾಸವಾಗಿಸಿಕೊಂಡು, ತಮ್ಮ ಕೈತೋಟದಲ್ಲಿ ತರತರಹದ ಮರಗಿಡಗಳನ್ನು ಬೆಳೆಸಿದ್ದಾರೆ.

ಜಪಾನಿ ಭಾಷೆಯಲ್ಲಿ ‘ಬೊನ್ಸಾಯ್’ ಎಂದರೆ ಅಳವಿಲ್ಲದ ಕುಂಡಗಳಲ್ಲಿ ಬೆಳೆಸಿದ ಕುಬ್ಜ ಮರ. ಮೂವತ್ತು ವರ್ಷಗಳ ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘ಬೊನ್ಸಾಯ್’ ಕಲಾಕೃಷಿಯ ಲೇಖನವನ್ನು ಓದಿದ ಉಮಾ ಅವರು ಅಂದಿನಿಂದಲೂ ಸ್ವಂತವಾಗಿ ಕರಗತವಾಗಿಸಿಕೊಂಡರು. ಅಲ್ಲದೆ, ಈ ಕಲೆಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಓದಿದರು. ಈ ಕಲೆಯಲ್ಲಿ ಮರವನ್ನು ಬೆಳೆಸಬೇಕಾದರೆ ತಟ್ಟೆ ಆಕಾರದ ಪಾಟ್‌ಗಳು ಬೇಕಾಗುತ್ತದೆ. ಇದನ್ನು ಸಹ ಇವರೇ ತಯಾರಿಸಿ ಕೊಂಡಿದ್ದಾರೆ.

ಪ್ರಮುಖವಾಗಿ ಆಲ, ಗೋಳಿ, ಸಪೋಟ, ಮಾವು, ಬಸರಿ, ರಾಮಫಲ, ಹುಣಸೆ, ಸಂಪಿಗೆ, ಕಣಗಲ, ನೈದಿಲೆ, ಚರಿ ಹಣ್ಣು, ಅಶೋಕ ಟ್ರೀ ಇತ್ಯಾದಿ ಹಲವು ಮರಗಳನ್ನು‘ಬೊನ್ಸಾಯ್’ ಕಲೆಯಲ್ಲಿ ಬೆಳೆಸಿದ್ದಾರೆ. ‘ಬೊನ್ಸಾಯ್’ ಜೀವಂತ ಸಸ್ಯವಾದ ಕಾರಣ ಇದರ ರೆಂಬೆ, ಕಾಂಡ, ಕೊಂಬೆಗಳು ಬೆಳೆಯುತ್ತಿರುತ್ತವೆ. ಆದ್ದರಿಂದ ರೆಂಬೆ ಕೊಂಬೆಗಳನ್ನು ಆಗಿಂದಾಗೆ ಕತ್ತರಿಸಿ ಆಕಾರವನ್ನು ರೂಪಿಸಬಹುದು. ಗಿಡಕ್ಕೆ ಆಕಾರವನ್ನು ದಾರದಿಂದ, ತಂತಿಯಿಂದಲೂ ನೀಡಬಹುದು ಎನ್ನುತ್ತಾರೆ ಉಮಾ.

ADVERTISEMENT

ಡೊಂಕಾದ ಮುಖ್ಯಕಾಂಡ, ನೆಟ್ಟಗೆ ನಿಂತ ಮುಖ್ಯಕಾಂಡ, ಓರೆಯಾದ ಮುಖ್ಯಕಾಂಡ, ಜೋತಾಡುವ ಕಾಂಡ, ಕಲ್ಲಿನ ಮೇಲೆ ಬೆಳೆಯುವ ಮರ ಮತ್ತಿತರ ವಿನ್ಯಾಸದಲ್ಲಿ ‘ಬೊನ್ಸಾಯ್’ ಮರಗಳನ್ನು ಉಮಾ ಬೆಳೆಸಿದ್ದಾರೆ.

‘ಬೊನ್ಸಾಯ್’ ಕಲೆಯಲ್ಲಿ ಮರ ಬೆಳೆಸಬೇಕಾದರೆ ಪ್ರತಿನಿತ್ಯ ತಪ್ಪದೆ ಒಮ್ಮೆಯಾದರೂ ನೀರು ಹಾಕಬೇಕು. ಅನವಶ್ಯಕವಾಗಿ ರಾಸಾಯನಿಕ ಗೊಬ್ಬರವನ್ನು ಹಾಕಬಾರದು. ಪದೇ ಪದೇ ರೆಂಬೆ ಕೊಂಬೆಗಳನ್ನು ಕತ್ತರಿಸಿ ಆಕಾರವನ್ನು ರೂಪಿಸಿ, ವಿನ್ಯಾಸ ಕಾಪಾಡಿಕೊಳ್ಳಬೇಕು. ಬೆಳೆದು ವಯಸ್ಸಾದಂತೆಲ್ಲಾ ‘ಬೊನ್ಸಾಯ್’ ಮರಕ್ಕೆ ವಾಣಿಜ್ಯ ಮೌಲ್ಯ ಹೆಚ್ಚುತ್ತದೆ.

‘ಬೊನ್ಸಾಯ್’ಲ್ಲಿ ಮರ ಬೆಳೆಸಲು ಹಲವು ವರ್ಷಗಳು ಬೇಕಾಗುತ್ತದೆ. ತಾಳ್ಮೆ ಅತಿ ಮುಖ್ಯವಾಗಿದೆ. ಪ್ರತಿನಿತ್ಯ ಗಿಡಕ್ಕೆ ಕೈಯಾಡಿಸುತ್ತಲೇ ಇರಬೇಕಾಗುತ್ತದೆ. 28 ವರ್ಷದಿಂದ ಆಲದ ಮರ ಬೆಳೆಸಿದ್ದೇನೆ. ಕಿತ್ತಳೆ ಹಣ್ಣನ್ನು ಬೆಳೆಯಲಾಗಿತ್ತು. ಚೆರಿಹಣ್ಣಿನ ಮರದಲ್ಲಿ ಹಣ್ಣುಗಳು ಬಿಟ್ಟಿದ್ದವು. ಪ್ರಸ್ತುತ ಸಪೋಟದ ಮರದಲ್ಲಿ ಹೂ ಬಿಟ್ಟಿವೆ ಎಂದು ಉಮಾ ತಿಳಿಸಿದರು.

‘ಬೊನ್ಸಾಯ್’ಯಲ್ಲಿ ಬೆಳೆದ ಮರಗಳು ಅತ್ಯಾಕರ್ಷವಾಗಿರುವುದರಿಂದ ಇದಕ್ಕೆ ಅಧಿಕ ಬೇಡಿಕೆ ಮತ್ತು ಬೆಲೆ ಇದೆ. ವಾಣಿಜ್ಯ ಉದ್ದೇಶಕ್ಕಾಗಿ ಇದನ್ನು ಬೆಳೆದರೆ ಆದಾಯ ಗಳಿಸಬಹುದಾಗಿದೆ. ವರ್ಷದ ಆಧಾರದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ತಾವು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬೆಳೆಸದೆ ಹವ್ಯಾಸಕ್ಕಾಗಿ ಬೆಳೆಸುತ್ತಿದ್ದೇನೆ, ತಮ್ಮ ಮಗನಿಗೂ ಈ ಕಲೆಯ ಬಗ್ಗೆ ಹೇಳಿ ಕೊಡುವ ಪ್ರಯತ್ನ ಮಾಡಿದ್ದೇನೆ. ಆಸಕ್ತಿ ಇದ್ದವರಿಗೆ ಮಾಹಿತಿಯನ್ನು ಸಹ ನೀಡುತ್ತೇನೆ’ ಎನ್ನುತ್ತಾರೆ ಉಮಾ ಸತ್ಯನಾರಾಯಣಸ್ವಾಮಿ. ಸಂಪರ್ಕ ಸಂಖ್ಯೆ 9342518566.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.