ADVERTISEMENT

ಬ್ರಾಹ್ಮಣರು ಯಾವುದೇ ಪಕ್ಷಕ್ಕೆ ಅಂಟಿಕೊಂಡಿಲ್ಲ: ಭಂಡಿಗಡಿ ದಿವಾಕರ ಭಟ್

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 2:32 IST
Last Updated 31 ಡಿಸೆಂಬರ್ 2022, 2:32 IST
ದಿವಾಕರ ಭಟ್
ದಿವಾಕರ ಭಟ್   

ಕೊಪ್ಪ: ‘ವಿಪ್ರ ಕ್ಷೇಮಾಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಅವರುಈಚೆಗೆ ಶೃಂಗೇರಿಯಲ್ಲಿ ಬ್ರಾಹ್ಮಣ ಸಮುದಾಯವು ಜೀವರಾಜ್ ಅವರ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ’ ಎಂದು ಬ್ರಾಹ್ಮಣ ಸಮುದಾಯದ ಮುಖಂಡ, ಕ್ಷೇತ್ರ ಜೆಡಿಎಸ್ ಘಟಕದ ಅಧ್ಯಕ್ಷ ಭಂಡಿಗಡಿ ದಿವಾಕರ ಭಟ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬ್ರಾಹ್ಮಣ ಸಮುದಾಯ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡಿಲ್ಲ. ಸಚ್ಚಿದಾನಂದಮೂರ್ತಿ ಅವರು ಒಂದು ಪಕ್ಷದ ಮುಖಂಡರಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಮುದಾಯದಲ್ಲಿ ಬಿರುಕು ಮೂಡಿಸುತ್ತದೆ. ಆದ್ದರಿಂದ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಸಮುದಾಯದ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ವಿಪ್ರ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು, ಇದು ಬಿಜೆಪಿ ಕೊಡುಗೆ ಅಲ್ಲ. ಜೀವರಾಜ್ ಅವರ ಮೆಚ್ಚುಗೆಗೆ ಪಾತ್ರವಾಗಲು ಸಚ್ಚಿದಾನಂದ ಅವರು ಇಂತಹ ಹೇಳಿಕೆ ಕೊಟ್ಟಿದ್ದಾರೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ಶೃಂಗೇರಿ ಕ್ಷೇತ್ರದ ಇತಿಹಾಸ ನೋಡಿದರೆ ಮಲೆನಾಡು ಗಾಂಧಿ ಎಚ್.ಜಿ.ಗೋವಿಂದೇಗೌಡ ಅವರ ಗೆಲುವಿನಲ್ಲಿ ಬ್ರಾಹ್ಮಣರ ಪಾತ್ರ ಪ್ರಮುಖವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ಅವರ ಗೆಲುವಿನಲ್ಲಿ, ಹಾಲಿ ಶಾಸಕ ಟಿ.ಡಿ.ರಾಜೇಗೌಡ ಅವರ ಗೆಲುವಿನಲ್ಲೂ ಬ್ರಾಹ್ಮಣರ ಪಾತ್ರ ಪ್ರಮುಖವಾಗಿತ್ತು’ ಎಂದು ಹೇಳಿದರು.

‘ಬ್ರಾಹ್ಮಣ ಸಮುದಾಯ ಬುದ್ಧಿವಂತ ಸಮುದಾಯವಾಗಿದೆ. ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿಯಿರುವ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಚರ್ಚೆಯಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ಸುಧಾಕರ ಎಸ್.ಶೆಟ್ಟಿ ಅವರ ಬೆಂಬಲವಾಗಿ ನಿಲ್ಲಲು ಸಮುದಾಯ ತೀರ್ಮಾನಕ್ಕೆ ಬರುತ್ತದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

ಕ್ಷೇತ್ರ ಜೆಡಿಎಸ್ ಕಾರ್ಯಾಧ್ಯಕ್ಷ ಕೊಪ್ಪದ ವಾಸುದೇವ್, ತಾಲ್ಲೂಕು ಘಟಕದ ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಕಾರ್ಯಾಧ್ಯಕ್ಷ ಎಚ್.ಎಸ್.ಕಳಸಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.