ADVERTISEMENT

ಕಲೆಗೆ ನಿವೃತ್ತಿ ಇಲ್ಲ: ಶ್ರೀಧರ ಹಂದೆ

ಹಂದಾಡಿಯ ಶಾಂತಿಮತಿ ಪ್ರತಿಷ್ಠಾನದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 6:25 IST
Last Updated 8 ನವೆಂಬರ್ 2022, 6:25 IST
ಬ್ರಹ್ಮಾವರ ಹಂದಾಡಿಯ ಶಾಂತಿಮತಿ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್.ಶ್ರೀಧರ ಹಂದೆ ಅವರಿಗೆ ಶಾಂತಿಮತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬ್ರಹ್ಮಾವರ ಹಂದಾಡಿಯ ಶಾಂತಿಮತಿ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್.ಶ್ರೀಧರ ಹಂದೆ ಅವರಿಗೆ ಶಾಂತಿಮತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಕೋಟ (ಬ್ರಹ್ಮಾವರ): ‌‘ಯಾವುದೇ ಕಲೆಗೆ ಎಂದೂ ನಿವೃತ್ತಿ ಇಲ್ಲ. ಆದರೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ನಿವೃತ್ತಿಯ ಅಂಚಿನಲ್ಲಿರುವವರು ತಮ್ಮಲ್ಲಿರುವ ಪ್ರತಿಭೆಯನ್ನು ಮುಂದಿನ ತಲೆಮಾರಿಗೆ ಧಾರೆ ಎರೆಯುವುದನ್ನು ಎಂದೂ ಮರೆಯಬಾರದು’ ಎಂದು ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್.ಶ್ರೀಧರ ಹಂದೆ ಹೇಳಿದರು.

ಕೋಟ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಬ್ರಹ್ಮಾವರ ಹಂದಾಡಿ ಶಾಂತಿಮತಿ ಪ್ರತಿಷ್ಠಾನದ ವಾರ್ಷಿಕೋತ್ಸವದಲ್ಲಿ ಶಾಂತಿಮತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಹೃದಯವಂತರಿಂದ ಪುರಸ್ಕರಿಸುವ ಪ್ರಶಸ್ತಿಗಳು ರಾಷ್ಟ್ರ ಪ್ರಶಸ್ತಿಗಿಂತ ಸರ್ವಶ್ರೇಷ್ಠತೆಯನ್ನು ಹೊಂದಿರುತ್ತದೆ. ಪ್ರತಿಭೆಗಳು ಅಪರೂಪವಾಗಿರದೆ ಪ್ರತಿಯೊಬ್ಬನಲ್ಲೂ ನೆಲೆಯೂರಿರುತ್ತದೆ. ಆದರೆ, ಅದನ್ನು ಹೊರಗೆಳೆಯುವ ಪ್ರಯತ್ನವನ್ನು ಮನೆಯ ಪೋಷಕರು ಮಾಡಬೇಕು. ಪ್ರತಿಯೊಂದು ಮನೆ ಮನಗಳಲ್ಲಿ ಕಲಾರಾಧನೆ ನಡೆಯಬೇಕು. ಆ ಮೂಲಕ ನಾವು ಉಳಿಸಿಕೊಂಡು ಬಂದ ಯಕ್ಷ ಪರಂಪರೆ ಮುಂದೆ ಉಳಿಯುತ್ತದೆ’ ಎಂದು ಹೇಳಿದರು.

ADVERTISEMENT

ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಣೇಶ್ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಆಶಾವಾಣಿ ಟ್ರಸ್ಟ್‌ನ ಡಾ.ವಾಣಿಶ್ರೀ ಐತಾಳ ಇದ್ದರು.

ಸಂಸ್ಥೆಯ ಕಾರ್ಯದರ್ಶಿ ಸಚ್ಚಿದಾ ನಂದ ಅಡಿಗ ವಡ್ಡರ್ಸೆ ಸ್ವಾಗತಿಸಿದರು. ಸಂಸ್ಥೆಯ ಸಂಘಟಕ ಪಾಂಡೇಶ್ವರ ಡಾ.ವಿಜಯ ಕುಮಾರ್ ಮಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ದಯಾನಂದ ವಾರಂಬಳ್ಳಿ ಪ್ರಶಸ್ತಿ ಪತ್ರ ವಾಚಿಸಿದರು. ಕೋಶಾಧಿಕಾರಿ ಉಮೇಶ್ ಬಾಯರಿ ಆಯವ್ಯಯ ಮಂಡಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಚಂದ್ರಶೇಖರ ಉಡುಪ ವಂದಿಸಿದರು. ರಾಮಚಂದ್ರ ಉಡುಪ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ಕೋಟ ಹಿರೇಮಹಾಲಿಂಗೇಶ್ವರ ದೇವಳದಲ್ಲಿ ಮಹಾಮೃತ್ಯುಂಜಯ ಯಾಗ, ಏಕದಶ ರುದ್ರಾಭಿಷೇಕ, ವಿಷ್ಣು ಸಹಸ್ರನಾಮ ಪಠಣ, ಗಾನ ನೃತ್ಯ ವೈಭವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.