
ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ನೇ ಸಾಲಿನ ಬಜೆಟ್ ಮಂಡಿಸಿದರು
ಪಿಟಿಐ ಚಿತ್ರ
ಚಿಕ್ಕಮಗಳೂರು: ಕಾಫಿ, ಅಡಿಕೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲಿದಿರುವುದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ದೇಶಕ್ಕೆ ಹೆಚ್ಚಾಗಿ ವಿದೇಶಿ ವಿನಿಮಯ ತಂದುಕೊಡುವ ಉದ್ಯಮವಾಗಿದೆ. ಕಾಫಿ ಹಲವು ವರ್ಷಗಳಿಂದ ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ ಸೇರಿ ಹಲವು ಸಮಸ್ಯೆಗಳಿಂದ ನಲುಗಿದೆ.
ಸರ್ಫೇಸಿ ಕಾಯ್ದೆ ಮುಂದಿಟ್ಟುಕೊಂಡು ಬ್ಯಾಂಕ್ ಅಧಿಕಾರಿಗಳು ಬೆಳೆಗಾರರ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಸಾಲ ಮರುಪಾವತಿಸದ ಬೆಳೆಗಾರರ ತೋಟಗಳನ್ನು ಹರಾಜು ಮಾಡುತ್ತಿದ್ದಾರೆ. ಈ ಕಾಯ್ದೆಯಿಂದ ಕಾಫಿ ಉದ್ಯಮವನ್ನು ಹೊರಗಿಡಬೇಕು ಎಂಬುದು ಕಾಫಿ ಬೆಳೆಗಾರರ ಪ್ರಮುಖ ಬೇಡಿಕೆಯಾಗಿತ್ತು.
ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಬೆಳೆ ವೈಫಲ್ಯದಿಂದ ಕಂಗೆಟ್ಟಿರುವ ಬೆಳೆಗಾರರು ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ಹವಾಮಾನ ವೈಪರೀತ್ಯದಿಂದ ಫಸಲು ಕೈಸೇರದಂತಾಗಿದೆ.
‘ಹಲವು ಬಾರಿ ಮನವರಿಕೆ ಮಾಡಿದ್ದರೂ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲ. ರೋಗ ಬಾಧೆಯಿಂದ ನರಳುತ್ತಿರುವ ಅಡಿಕೆ ಬೆಳೆಗಾರರು ಕೇಂದ್ರ ಸರ್ಕಾರದಿಂದ ಪ್ಯಾಕೇಜ್ ನಿರೀಕ್ಷೆ ಮಾಡಿದ್ದರು. ಕೇಂದ್ರದ ತಂಡಕ್ಕೂ ಮನವಿ ಸಲ್ಲಿಸಿದ್ದೆವು. ಈ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲದಿರುವುದು ಬೇಸರ ಮೂಡಿಸಿದೆ’ ಎನ್ನುತ್ತಾರೆ ರೈತರು.
ಮಲೆನಾಡಿನಲ್ಲಿ ಅಡಿಕೆ ಬೆಳೆ ಅವಸಾನದ ಅಂಚಿನಲ್ಲಿದ್ದು, ಬೆಳೆಗಾರರ ಬದುಕನ್ನೇ ಬಲಿ ತೆಗೆದುಕೊಂಡಿದೆ. ಅಡಿಕೆಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂಬ ಬೇಡಿಕೆಯನ್ನೂ ಜಿಲ್ಲೆಯ ಜನ ಸರ್ಕಾರದ ಮುಂದಿಟ್ಟಿದ್ದರು. ಬಜೆಟ್‌ನಲ್ಲಿ ಈ ವಿಷಯವೇ ಪ್ರಸ್ತಾಪವಾಗದಿರುವುದು ಬೆಳೆಗಾರರಲ್ಲಿ ಬೇಸರ ತರಿಸಿದೆ.
ಚಿಕ್ಕಮಗಳೂರು–ಶೃಂಗೇರಿ–ಆಗುಂಬೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇತ್ತು. ಈ ಬೇಡಿಕೆ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ ಎಂಬುದು ಜಿಲ್ಲೆಯ ಜನರ ಅಸಮಾಧಾನ.
ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಫಿ ಅಡಿಕೆ ಕಾಳು ಮೆಣಸಿಗೆ ಪೂರಕವಾದ ಯಾವುದೇ ಯೋಜನೆಗಳಿಲ್ಲ. ರಸಗೊಬ್ಬರದ ಸಬ್ಸಿಡಿ ಇಳಿಕೆಯಿಂದ ಮಾರುಕಟ್ಟೆಯಲ್ಲಿ ಬೆಲೆ ಇನ್ನಷ್ಟು ತುಟ್ಟಿಯಾಗಲಿದ್ದು ರೈತರಿಗೆ ಮತ್ತಷ್ಟು ಹೊರೆಯಾಗಲಿದೆಜಯರಾಜ್ ಕುದ್ರೊಳಿ ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ
ಯುವಕರಿಗೆ ಉದ್ಯೋಗ ಮಧ್ಯಮ ವರ್ಗಕ್ಕೆ ಸಮಾಧಾನ ಮತ್ತು ಪ್ರತಿಯೊಬ್ಬ ಭಾರತೀಯನಿಗೆ ಅಭಿವೃದ್ಧಿಯ ಭರವಸೆ ನೀಡಿದ ಸರ್ವಸ್ಪರ್ಶಿ ಬಜೆಟ್ ಇದು.ಸಂತೋಷ್ ಕೋಟ್ಯಾನ್ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ
ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಯೋಜನೆಗಳಲ್ಲೂ ರಾಜ್ಯಕ್ಕೆ ಅನುಕೂಲ ಆಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಜಿಲ್ಲೆ ತಾಲ್ಲೂಕುವಾರು ಯೋಜನೆಗಳ ವಿವರವನ್ನು ಕೇಂದ್ರ ಬಜೆಟ್‌ನಲ್ಲಿ ನೀಡುವುದಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಒಂದು ರಸ್ತೆ ಮತ್ತು ಉಡುಪಿ ಜಿಲ್ಲೆಯ ಒಂದು ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಕೋರಲಾಗಿತ್ತು. ಈ ವಿಷಯ ಸಾಮಾನ್ಯವಾಗಿ ಬಜೆಟ್‌ನಲ್ಲಿ ಪಸ್ತಾಪವಾಗುವುದಿಲ್ಲ. ರಾಷ್ಟ್ರೀಯ ಹೆದ್ಧಾರಿ ವಿಭಾಗದ ಪಟ್ಟಿ ಬಿಡುಗಡೆಯಾದಾಗ ಗೊತ್ತಾಗಲಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕಾರ್ಪೋರೇಟ್ ಮಿತ್ರ ಎಂಬ ಯೋಜನೆಯನ್ನು ಘೋಷಿಸಿರುವ ಕೇಂದ್ರ ಸರ್ಕಾರ ಬಜೆಟ್ ಕಾರ್ಪೊರೇಟ್ ಕೇಂದ್ರೀಕೃತವಾಗಿದೆ. ಜನಸಾಮಾನ್ಯರು ಹಾಗೂ ದುಡಿಯುವ ಜನರ ವಿರೋಧಿಯಾಗಿದೆ ಎಂದು ಬಿ.ಅಮ್ಜದ್ ತಿಳಿಸಿದ್ದಾರೆ. ದೇಶದಲ್ಲಿ ಬಡತನ ಕಡಿಮೆಯಾಗುತ್ತಿದೆ ಎಂಬ ಹೇಳಿಕೆಯ ಮೂಲಕ ಸುಳ್ಳುಗಳ ಸರಮಾಲೆಯನ್ನು ಹಣೆಯಾಲಾಗಿದೆ. ಬೆಲೆ ಏರಿಕೆ ನಿಯಂತ್ರಣ ಮತ್ತು ನಿರುದ್ಯೋಗ ನಿವಾರಣೆಯ ಬಗ್ಗೆ ನಿರ್ದಿಷ್ಟ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದು ಬಜೆಟ್ ದೇಶದ ಜನರ ಹಿತ ಕಾಪಾಡುವ ದೂರದೃಷ್ಟಿ ಕೊರತೆಯಿಂದ ಕೂಡಿದೆ ಎಂದು ಹೇಳಿದ್ದಾರೆ.
ಆರ್ಥಿಕ ಶಿಸ್ತಿನ ಹೆಸರಿನಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಕೇಂದ್ರ ಸರ್ಕಾರ ಕತ್ತರಿ ಹಾಕಿದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ತಿಳಿಸಿದ್ದಾರೆ. ಆರೋಗ್ಯ ಶಿಕ್ಷಣ ಕೃಷಿ ಸಾಮಾಜಿಕ ಕಲ್ಯಾಣ ಗ್ರಾಮೀಣ ಹಾಗೂ ನಗರಾಭಿವೃದ್ಧಿ ರೀತಿಯ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಅನುದಾನ ಕಡಿತಗೊಳಿಸಲಾಗಿದೆ. ವಿಶೇಷವಾಗಿ ಎಸ್‌ಸಿ ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳ ವಿದ್ಯಾರ್ಥಿ ವೇತನ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಮಾಡಿದ ಕಡಿತ ಸಾಮಾಜಿಕ ನ್ಯಾಯದ ಮೇಲೆ ಕೇಂದ್ರ ಸರ್ಕಾರ ಹೊಂದಿರುವ ನಿಲುವು ಸ್ಪಷ್ಟಪಡಿಸುತ್ತದೆ ಎಂದಿದ್ದಾರೆ.
ನಿರ್ಮಲಾ ಸೀತಾ ರಾಮನ್ ಅವರು ಕರ್ನಾಟಕದ ಜನರಿಗೆ ಮತ್ತೊಮ್ಮೆ ಉಂಡೇನಾಮ ಹಾಕುವ ಮೂಲಕ ದ್ರೋಹ ಬಗೆದಿದೆ ಎಂದು ಕೆಪಿಸಿಸಿ ಸಂಶೋಧನಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಟೀಕಿಸಿದ್ದಾರೆ. 2023-24ನೇ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ ₹5300ಕೋಟಿ ಇನ್ನೂ ನೀಡಿಲ್ಲ. ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಕಳಿಸಿರುವ ರಾಜ್ಯದ ಮತದಾರರಿಗೆ ಮಾಡಿರುವ ಮೋಸದ ಬಜೆಟ್ ಇದಾಗಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ವಿಕಸಿತ ಭಾರತದ ಸಾಧನೆಗೆ ದಾರಿ ತೋರುವ ದೂರದರ್ಶಿ ಬಜೆಟ್ ಆಗಿದೆ. ಭಾರತವನ್ನು ಸ್ವಾವಲಂಬಿ ಆಗಿಸಲು ಈ ಬಜೆಟ್ ಅತ್ಯಂತ ವಾಸ್ತವಿಕವೂ ಮಹತ್ವದ್ದೂ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ. ಕೃಷಿಯಿಂದ ರಕ್ಷಣಾ ಕ್ಷೇತ್ರ ಬಾಹ್ಯಾಕಾಶ ಶಿಕ್ಷಣ ಕ್ಷೇತ್ರದ ತನಕ ಎಲ್ಲ ಕ್ಷೇತ್ರಗಳಿಗೂ ಪ್ರಸ್ತುತ ಬಜೆಟ್ ಆದ್ಯತೆ ನೀಡಿದೆ. ಆರ್ಥಿಕ ಶಿಸ್ತು ಜನಪರ ನೀತಿಗಳಿಗೆ ಬಜೆಟ್ ಆದ್ಯತೆ ನೀಡಿದೆ. ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಗೇರು ಮತ್ತು ಕೋಕೋದಂತಹ ಬೆಳೆಗಳನ್ನು ಜಾಗತಿಕ ರಫ್ತು ಉತ್ಪನ್ನಗಳಾಗಿ ರೂಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಕೃಷಿ ಪೋರ್ಟಲ್‌ಗಳು ಐಸಿಎಆರ್ ಕೃಷಿ ಪ್ಯಾಕೇಜ್‌ಗಳು ಎಐ ಜೊತೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಲಿರುವುದು ಸ್ವಾಗತಾರ್ಹ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ತರೀಕೆರೆ: ಕೇಂದ್ರ ಬಜೆಟ್‌ನಲ್ಲಿ ಯಾರಿಗೂ ಪ್ರಯೋಜನವಾಗಿಲ್ಲ. ಮದ್ಯಮ ವರ್ಗದವರಿಗೆ ನಿರಾಸೆ ಮೂಡಿಸಿದೆ ಎಂದು ಕೆಪಿಸಿಸಿ ಎಸ್‌ಸಿ ವಿಭಾಗದ ಜಿಲ್ಲಾ ಮಾದ್ಯಮ ವಕ್ತಾರ ಎಲ್.ಟಿ. ಹೇಮಣ್ಣ ತಿಳಿಸಿದ್ದಾರೆ. ಕೈಗಾರಿಕಾ ತರಬೇತಿ ಬದಲು ಹೊಸ ಕೈಗಾರಿಕಾ ಸ್ಥಾಪನೆ ಮಾಡಿ ಉದ್ಯೋಗ ಸೃಷ್ಟಿ ಮಾಡಿಲ್ಲ. ಇದರಿಂದ ಉತ್ಪನ್ನಗಳ ಬೇಡಿಕೆ ಹಾಗೂ ಉದ್ಯೋಗದ ಪರಿಣಾಮ ಬೀರಬಹುದು. ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಗಿಮೀಕ್ ಬಜೆಟ್ ಮಂಡನೆಯಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.